ಮುಂಬೈ: ಛತ್ರಪತಿ ಶಿವಾಜಿ ಮಹಾರಾಜರ ವಿರುದ್ಧ ಹೇಳಿಕೆ ನೀಡಿರುವ ಆರೋಪಕ್ಕೆ ಗುರಿಯಾಗಿರುವ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ವಾಪಸ್ ಕರೆಯಿಸಿಕೊಳ್ಳಬೇಕು ಎಂದು ಶಿವಸೇನೆಯ ಏಕನಾಥ ಶಿಂಧೆ ಬಣ ಒತ್ತಾಯಿಸಿದೆ.
ಮುಖ್ಯಮಂತ್ರಿ ಬಣದ ಶಾಸಕ ಸಂಜಯ ಗಾಯಕ್ವಾಡ್ ಅವರು ಈ ಬೇಡಿಕೆ ಮುಂದಿಟ್ಟಿದ್ದಾರೆ. “ರಾಜ್ಯಪಾಲರು ಶಿವಾಜಿ ಮಹಾರಾಜರ ಬಗ್ಗೆ ಅರಿತು ಮಾತಾಡಬೇಕು. ಬಿಜೆಪಿ ವರಿಷ್ಠರು ರಾಜ್ಯದ ಇತಿಹಾಸ ಅರಿಯದ ರಾಜ್ಯಪಾಲರನ್ನು ವಾಪಸ್ ಕರೆಯಿಸಿಕೊಳ್ಳಬೇಕು. ಅವರನ್ನು ಇರಿಸಿಕೊಂಡು ಯಾವ ಪ್ರಯೋಜನವೂ ಇಲ್ಲ’ ಎಂದಿದ್ದಾರೆ ಗಾಯಕ್ವಾಡ್. ಒಂದು ವೇಳೆ ಬೇಡಿಕೆ ಪರಿಶೀಲಿಸದೇ ಇದ್ದರೆ ಮೈತ್ರಿಗೂ ಧಕ್ಕೆಯಾದೀತು ಎಂದು ಎಚ್ಚರಿಸಿದ್ದಾರೆ.
ಹೆತ್ತವರಿಗಿಂತ ಹೆಚ್ಚು:
ವಿವಾದ ತಣಿಸುವ ನಿಟ್ಟಿನಲ್ಲಿ ಮಾತನಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ “ಶಿವಾಜಿ ಮಹಾರಾಜರು ನಮಗೆಲ್ಲರಿಗೂ ಹೆತ್ತವರಿಗಿಂತ ದೊಡ್ಡವರು’ ಎಂದಿದ್ದಾರೆ. ತಮಿಳುನಾಡು, ಕೇರಳ, ತೆಲಂಗಾಣಗಳಲ್ಲಿಯೂ ಕೂಡ ರಾಜ್ಯಪಾಲರನ್ನು ವಾಪಸ್ ಕರೆಯಿಸಿಕೊಳ್ಳಬೇಕೆಂಬ ಕೂಗು ಈಗಾಗಲೇ ಇದೆ.