ಬೆಂಗಳೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಬಳಿಕ ರಾಜಕೀಯ ಒತ್ತಡದ ಕಾರಣದಿಂದ ಕೆ.ಎಸ್.ಈಶ್ವರಪ್ಪ ಅವರು ಶುಕ್ರವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಶ್ವರಪ್ಪ ರಾಜೀನಾಮೆಯನ್ನು ರಾತ್ರೋರಾತ್ರಿ ಅಂಗೀಕರಿಸಲಾಗಿದೆ.
ರಾತ್ರಿ ಸುಮಾರು 12 ಗಂಟೆಗೆ ಈಶ್ವರಪ್ಪ ರಾಜೀನಾಮೆ ಅಂಗೀಕಾರವಾಗಿದೆ. ಮಧ್ಯಪ್ರದೇಶದ ಇಂದೋರ್ ನಲ್ಲಿದ್ದ ರಾಜ್ಯಪಾಲರು ಇ-ಮೇಲ್ ಮೂಲಕ ಈಶ್ವರಪ್ಪ ರಾಜೀನಾಮೆ ಪತ್ರವನ್ನು ತರಿಸಿಕೊಂಡಿದ್ದರು. ತಡರಾತ್ರಿಯೇ ತರಾತುರಿಯಲ್ಲಿ ರಾಜೀನಾಮೆ ಅಂಗೀಕಾರ ಮಾಡಲಾಗಿದೆ.
40 ಪರ್ಸೆಂಟ್ ಲಂಚ ಆರೋಪ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ, ಶುಕ್ರವಾರ ರಾತ್ರಿ ರಾಜೀನಾಮೆ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಒಂದು ಸಾಲಿನ ರಾಜೀನಾಮೆ ಪತ್ರ ನೀಡಿರುವ ಅವರು, ಸಂತೋಷ್ ಪಾಟೀಲ ಅವರದ್ದು ಆತ್ಮಹತ್ಯೆಯೋ, ಕೊಲೆಯೋ ಎಂಬ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಬಿಜೆಪಿ ಕಾರ್ಯಕಾರಣಿ ‘ಸಂತೋಷ’ ಕಸಿಯುವುದೇ ರಾಜೀನಾಮೆ-ಪರ್ಸಂಟೇಜ್ ಕರಿಛಾಯೆ?
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್, “ತಾವು ಮಾಡಿರುವ ಕೆಲಸಕ್ಕೆ ಹಣ ಬಿಡುಗಡೆ ಮಾಡಲು 40 ಪರ್ಸೆಂಟ್ ಲಂಚ ಕೇಳುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಅಲ್ಲದೆ ತಮ್ಮ ಸಾವಿಗೆ ಈಶ್ವರಪ್ಪ ಕಾರಣ ಎಂದು ವಾಟ್ಸ್ ಆ್ಯಪ್ ಮೆಸೇಜ್ ಮಾಡಿ ಏ.12 ರಂದು ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂತೋಷ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು. ಹೀಗಾಗಿ ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸುವುದಾಗಿ ಗುರುವಾರ ಘೋಷಣೆ ಮಾಡಿದ್ದರು