Advertisement

ಹಣಕಾಸು ಸಂಕಷ್ಟ ನಿವಾರಣೆಗೆ ಸರಕಾರದಿಂದ ಯೋಜನೆ

12:36 AM Apr 14, 2020 | Sriram |

ಬೆಂಗಳೂರು: ಕೋವಿಡ್ 19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರಕಾರ ಬಿಡಿಎ ಸೇರಿ ರಾಜ್ಯದ ನಗರಾಭಿವೃದ್ದಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಮೂಲೆ ನಿವೇಶನಗಳನ್ನು ಹರಾಜು ಮಾಡಲು ನಿರ್ಧಾರ ಮಾಡಿದೆ.

Advertisement

ಇದರಿಂದ ಸುಮಾರು 15,000 ಕೋಟಿ ರೂ ಆದಾಯ ಬರುವ ನಿರೀಕ್ಷೆ ಇದೆ. ಮಂಗಳವಾರ ಪ್ರಮುಖ ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ಅನಂತರ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಈ ತೀರ್ಮಾನ ಪ್ರಕಟಿಸಿದರು.

ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆಗೆ ಈ ಕ್ರಮ ಅಗತ್ಯ. ಬಿಡಿಎ ವ್ಯಾಪ್ತಿಯ 12 ಸಾವಿರ ಮೂಲೆ ನಿವೇಶನ (ಕಾರ್ನರ್‌ ಸೈಟ್‌) ಹರಾಜು ಹಾಕಲಾಗುವುದು. ಆದರೆ ಸರಿಯಾದ ಬೆಲೆ ಸಿಕ್ಕರೆ ಮಾತ್ರ ನಿವೇಶನಗಳನ್ನು ಹರಾಜು ಹಾಕಲಾಗುವುದು ಎಂದು ಹೇಳಿದರು.

ಈಗಾಗಲೇ ಆರಂಭಗೊಂಡಿರುವ ಉಚಿತ ಹಾಲು ವಿತರಣೆಯನ್ನು ಇನ್ನೂ ಒಂದು ವಾರ ವಿಸ್ತರಿಸಲು ನಿರ್ಧರಿಸಲಾಗಿದೆ. ಅನಧಿಕೃತ ಕಟ್ಟಡಗಳ ಸಂಬಂಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಎಂಎಸ್‌ಐಎಲ್‌ ಮೂಲಕ ಮದ್ಯ ಮಾರಾಟ ಮಾಡುವ ಸಂಬಂಧ ಚಿಂತನೆ ಇದೆ. ಎ.14ರ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ನೀಡಬೇಕಿರುವ ಬಾಕಿ 2,834 ಕೋಟಿ ರೂ ಕೂಡಲೇ ಪಾವತಿಸಲು ಸೂಚಿಸಲಾಗಿದೆ ಎಂದರು.

ಲಾಕ್‌ಡೌನ್‌ ಸಡಿಲ?
ಸ್ಮಾರ್ಟ್‌ ಲಾಕ್‌ಡೌನ್‌ ಬಗ್ಗೆಯೂ ಸಿಎಂ ಬಿಎಸ್‌ವೈ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಈ ವೇಳೆ ಸೋಂಕು ಪ್ರಕರಣ ಇಲ್ಲದ ಹಾಗೂ ಹೆಚ್ಚು ಪ್ರಕರಣಗಳು ವರದಿಯಾಗದ ಕಡೆ ಸಡಿಲಗೊಳಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಜತೆಗೆ ಕೆಲವು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಖಾತರಿಪಡಿಸಿಕೊಳ್ಳಬೇಕು ಎಂಬ ಸಲಹೆಯೂ ಬಂದಿತು. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ರಾಜ್ಯದಲ್ಲಿ ಲಾಕ್‌ ಡೌನ್‌ ಸಡಿಲಗೊಳಿಸಬೇಕೆ ಬೇಡವೇ ? ಸಡಿಲ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ಕೋವಿಡ್ 19 ತಪಾಸಣೆ ಕೇಂದ್ರ ಹೆಚ್ಚಳಕ್ಕೆ ಸೂಚನೆ
ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ರಾಜ್ಯ ಸರಕಾರಿ ಹಾಗೂ ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿ ಕೋವಿಡ್ 19ವೈರಸ್‌ ತಪಾಸಣ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ. ರಾಜ್ಯದ ಸರಕಾರಿ ಸ್ವಾಮ್ಯದ ಎಲ್ಲ ವೈದ್ಯಕೀಯ ಕಾಲೇಜುಗಳು ಹಾಗೂ ಖಾಸಗಿ ಸ್ವಾಯತ್ತ ಸಂಸ್ಥೆಗಳು ತಮ್ಮ ಕಾಲೇಜುಗಳ ವ್ಯಾಪ್ತಿಯಲ್ಲಿ ಅಗತ್ಯ ಪ್ರಯೋಗಾಲಯ ಹಾಗೂ ಸಿಬಂದಿ ನೇಮಿಸಿಕೊಂಡು ಹೆಚ್ಚಿನ ತಪಾಸಣೆ ಮಾಡಬೇಕು ಎಂದು ಸುತ್ತೋಲೆ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next