ಕೆ.ಆರ್.ಪೇಟೆ: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಗೆ ಸಿಲುಕಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ, ಕೋವಿಡ್ ವೈರಸ್ ಜನರ ಜೀವಗಳನ್ನು ಬಲಿಪಡೆಯುತ್ತಿದೆ. ರಾಜ್ಯ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸಲು ವಿಫಲವಾಗಿದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ನಡೆದ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಳೆದವರ್ಷ ಉಂಟಾಗಿದ್ದ ನೆರೆ ಹಾವಳಿಗೆ ಕೊಡಗು, ಉತ್ತರ ಕರ್ನಾಟಕದ ಲಕ್ಷಾಂತರ ಜನ ಮನೆ, ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಮನೆ ಕಳೆದು ಕೊಂಡ ವರಿಗೆ ಒಂದು ಸೂರು ಕಲ್ಪಿಸಿಲ್ಲ. ಪ್ರವಾಹದಿಂದ ಹಾಳಾದ ಕೃಷಿ ಭೂಮಿಯನ್ನು ಸಮತಟ್ಟು ಮಾಡಿಸಿ ಸರಿಪಡಿಸಿಲ್ಲ.
ಯಡಿಯೂರಪ್ಪ ಸರ್ಕಾರಕ್ಕೆ ಒಂದು ವರ್ಷ ತುಂಬಿದ್ದರೂ, ಪ್ರವಾಹ ಪೀಡಿತರಿಗೆ ನಯಾಪೈಸೆ ಪರಿಹಾರ ನೀಡಿಲ್ಲ. ಜನ ನೆರೆ ಹಾವಳಿಗೆ ಸಿಲುಕಿ ನಲುಗುತ್ತಿದ್ದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರವು ನೀಡಿಲ್ಲ ಎಂದು ದೂರಿದರು.
ರಾಜಕೀಯ ಸಿದ್ಧಾಂತವೇ ಇಲ್ಲ: ಕುಮಾರಸ್ವಾಮಿ ಆಡಳಿತದ ಸಾಲಮನ್ನಾ ಯೋಜನೆಯಿಂದ ರೈತರು ಮತ್ತಷ್ಟು ಸಾಲಗಾರ ರಾಗಿದ್ದಾರೆ. ಸಾಲಮನ್ನಾ ಆಗುತ್ತದೆ ಎಂಬ ಭರವಸೆಯಿಂದ ಸಾಲ ಕಟ್ಟದ ರೈತರು, ಸಾಲಮನ್ನಾ ಆಗದ ಕಾರಣ ಸುಸ್ಥಿದಾರರಾಗುತ್ತಿದ್ದಾರೆ. ಸಹಕಾರ ಬ್ಯಾಂಕುಗಳು ರೈತರಿಂದ ಖಾಲಿ ಚೆಕ್ ಪಡೆದು ಹೊಸ ಸಾಲ ನೀಡುತ್ತಿವೆ. ತಮ್ಮದೇ ಸರ್ಕಾರವನ್ನು ಅನೈತಿಕ ಮಾರ್ಗದಿಂದ ಯಡಿಯೂರಪ್ಪ ಅವರ ಮನೆಗೆ ಹೋಗುವ ಕುಮಾರಸ್ವಾಮಿಗೆ ರಾಜಕೀಯ ಸಿದ್ಧಾಂತವೇ ಇಲ್ಲ ಎಂದು ಟೀಕಿಸಿದರು.
ಮಾಜಿ ಶಾಸಕ ಬಿ.ಪ್ರಕಾಶ್, ಜಿಪಂ ಸದಸ್ಯ ಎಲ್.ದೇವರಾಜು, ಮಾಜಿ ಸದಸ್ಯ ಬಿ.ನಾಗೇಂದ್ರ ಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದರಾಜು, ಮಾಜಿ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಮುಖಂಡರಾದ ವಿ.ಡಿ.ದೇವೇಗೌಡ, ಕಿಕ್ಕೇರಿ ಸುರೇಶ್, ರಾಜಯ್ಯ, ನಿಂಗೇಗೌಡ, ಮನ್ ಮುಲ್ ನಿರ್ದೇಶಕ ಡಾಲು ರವಿ, ಬಸ್ತಿ ರಂಗಪ್ಪ, ಪುರಸಭಾ ಸದಸ್ಯರಾದ ಕೆ.ಸಿ.ಮಂಜುನಾಥ್, ಡಿ.ಪ್ರೇಂಕುಮಾರ್, ಯುವ ಘಟಕದ ಅಧ್ಯಕ್ಷ ಸಿ.ಬಿ.ಚೇತನ ಕುಮಾರ್ ಹಾಜರಿದ್ದರು.