Advertisement

Foreign ವಿವಿಗಳ ಕ್ಯಾಂಪಸ್‌ನತ್ತ ಸರ್ಕಾರದ ನಿರಾಸಕ್ತಿ

11:13 PM Mar 08, 2024 | Team Udayavani |

ಬೆಂಗಳೂರು: ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಭಾರತದಲ್ಲಿ ವಿದೇಶಿ ವಿವಿಗಳು ತಮ್ಮ ಕ್ಯಾಂಪಸ್‌ ತೆರೆಯಲು ಅವಕಾಶ ಕಲ್ಪಿಸಿದ್ದರೂ ರಾಜ್ಯ ಸರ್ಕಾರ ರಾಜ್ಯದಲ್ಲಿ ವಿದೇಶಿ ವಿವಿಗಳನ್ನು ಸ್ವಾಗತಿಸಲು ಹೆಚ್ಚಿನ ಆಸಕ್ತಿ ಹೊಂದಿಲ್ಲ.

Advertisement

ವಿದೇಶಿ ವಿವಿಗಳು ರಾಜ್ಯದಲ್ಲಿ ತಮ್ಮ ಪ್ರತ್ಯೇಕ ಕ್ಯಾಂಪಸ್‌ ತೆರೆಯುವುದರ ಬದಲಾಗಿ ನಮ್ಮಲ್ಲಿ ಈಗಿರುವ ವಿವಿಗಳ ಜೊತೆ ಸಹಭಾಗಿತ್ವ ತೋರಿ ಕೆಲಸ ನಿರ್ವಹಿಸಿದರೆ ಉತ್ತಮ ಎಂಬುದು ರಾಜ್ಯ ಸರ್ಕಾರದ ಅಭಿಪ್ರಾಯ.

ವಿದೇಶಿ ವಿವಿಗಳಿಗೆ ಪ್ರವೇಶ ಕಲ್ಪಿಸಬೇಕು ಎಂದು ದಶಕಗಳಿಂದ ಚರ್ಚೆ ನಡೆಯುತ್ತಿತ್ತು. 2023ರ ಕೊನೆಯ ಭಾಗದಲ್ಲಿ “ಭಾರತದಲ್ಲಿ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳ ಸ್ಥಾಪನೆ ಮತ್ತು ಕಾರ್ಯಾಚರಣೆ ನಿಯಂತ್ರಣ’ ನಿಯಮವನ್ನು ಯುಜಿಸಿ ಪ್ರಕಟಿಸಿ ವಿದೇಶಿ ವಿವಿಗಳಿಗೆ ಭಾರತದಲ್ಲಿ ತಮ್ಮ ಕ್ಯಾಂಪಸ್‌ ತೆರೆಯಲು ಅವಕಾಶ ನೀಡಿತ್ತು.

ಜಾಗತಿಕ ಶ್ರೇಯಾಂಕದಲ್ಲಿ ಒಟ್ಟಾರೆ ಅಗ್ರ 500ರೊಳಗಿರುವ ವಿವಿಗಳು ಮತ್ತು ಯಾವುದಾರೂ ವಿಷಯದಲ್ಲಿ ಜಾಗತಿಕವಾಗಿ ಅಗ್ರ 500ರ ಶ್ರೇಯಾಂಕದೊಳಗೆ ಬರುವ ವಿವಿಗಳು ಆ ವಿಷಯಕ್ಕೆ ಸಂಬಂಧಿಸಿದ ಕ್ಯಾಂಪಸ್‌ ಭಾರತದಲ್ಲಿ ತೆರೆಯಲು ಯುಜಿಸಿ ತನ್ನ ನಿಯಮಗಳ ಪ್ರಕಾರ ಅವಕಾಶ ಕಲ್ಪಿಸಿದೆ.ಯುಜಿಸಿಯಿಂದ ಹಸಿರು ನಿಶಾನೆ ಸಿಗುತ್ತಿದ್ದಂತೆ ಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದಲ್ಲಿ ತಮ್ಮ ಕ್ಯಾಂಪಸ್‌ ತೆರೆಯಲು ಹಲವು ವಿದೇಶಿ ವಿವಿಗಳು ಆಸಕ್ತಿ ತೋರಿವೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಆದರೆ ರಾಜ್ಯ ಸರ್ಕಾರವು ವಿದೇಶಿ ವಿವಿಗಳು ಭಾರತದಲ್ಲಿ ಕ್ಯಾಂಪಸ್‌ ತೆರೆಯುವುದಕ್ಕಿಂತ ಹೆಚ್ಚಾಗಿ ನಮ್ಮ ವಿವಿಗಳ ಜತೆ ಸಹಭಾಗಿತ್ವ ತೋರಲಿ ಎಂದು ಬಯಸುತ್ತಿದೆ. ರಾಜ್ಯದಲ್ಲಿ ಸಾಕಷ್ಟು ವಿವಿಗಳಿದ್ದು ಈ ವಿವಿಗಳ ಜತೆ ಒಪ್ಪಂದ ಮಾಡಿಕೊಂಡು ಶಿಕ್ಷಣ, ಕೌಶಲ್ಯ ನೀಡಬಹುದು, ವಿದ್ಯಾರ್ಥಿ ವಿನಿಮಯ ಚಟುವಟಿಕೆ ನಡೆಸಬಹುದು ಎಂಬುದು ರಾಜ್ಯ ಸರ್ಕಾರದ ಅಭಿಪ್ರಾಯ.

Advertisement

ರಾಜ್ಯದಲ್ಲಿ ಸರ್ಕಾರಿ, ಖಾಸಗಿ, ಡೀಮ್ಡ್, ಕೇಂದ್ರಿಯ ವಿವಿಗಳಿವೆ. ಮತ್ತೆ ವಿದೇಶಿ ವಿವಿಗಳಿಗೆ ಅವಕಾಶ ನೀಡುವುದಕ್ಕಿಂತ ಇರುವ ವಿವಿಗಳನ್ನೇ ಸದೃಢಗೊಳಿಸುವುದು ರಾಜ್ಯದ ಶೈಕ್ಷಣಿಕ ಹಿತದೃಷ್ಟಿಯಿಂದ ಉತ್ತಮ ಎಂಬ ಅಭಿಪ್ರಾಯ ರಾಜ್ಯ ಸರ್ಕಾರದ್ದು.

ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್‌ನ‌ ಎಂಟು ವಿವಿಗಳು ರಾಜ್ಯದ ಹತ್ತು ವಿವಿಗಳ ಜತೆ ಸಹಭಾಗೀದಾರಿಕೆ ಒಪ್ಪಂದ ನಡೆಸುವಂತೆ ಉನ್ನತ ಶಿಕ್ಷಣ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿತ್ತು.

ಯಾವ್ಯಾವ ವಿವಿ ಆಸಕ್ತಿ?
ಆಸ್ಟ್ರೇಲಿಯಾದ ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಕೃಷಿ ವಿಜ್ಞಾನಕ್ಕೆ ಮೀಸಲಾದ ಶಿಕ್ಷಣ ಸಂಸ್ಥೆ ಆರಂಭಿಸಲು ಉತ್ಸುಕವಾಗಿದೆ. ಉನ್ನತ ಶಿಕ್ಷಣ ಇಲಾಖೆ ಜತೆ ಒಂದು ಸುತ್ತಿನ ಮಾತುಕತೆಯು ನಡೆಸಿದ್ದು ಬೆಂಗಳೂರಿನಲ್ಲಿ ತನ್ನ ಕ್ಯಾಂಪಸ್‌ ತೆರೆಯಲು ಐದು ಎಕರೆ ಜಾಗಕ್ಕೆ ಅದು ಹುಡುಕುತ್ತಿದೆ. ಲೆಕ್ಕಚಾರ ಫ‌ಲಿಸಿದರೆ 2025ಕ್ಕೆ ಮೊದಲ ಬ್ಯಾಚ್‌ ಆರಂಭವಾಗಲಿದೆ. ಇದರ ಜತೆಗೆ ಆಸ್ಟ್ರೇಲಿಯದ ಜೇಮ್ಸ್‌ ಕುಕ್‌ ವಿವಿ, ಗ್ರಿಫಿತ್‌ ವಿವಿ, ಕ್ಯಾನ್‌ಬೆರಾ ವಿವಿ, ಲಾ ಟ್ರೊಬೆ ವಿವಿ ಮತ್ತು ಫ್ಲಿಂಡರ್ ವಿವಿಗಳು ಒಕ್ಕೂಟವೊಂದನ್ನು ರೂಪಿಸಿಕೊಂಡು ಭಾರತದಲ್ಲಿ ತಮ್ಮ ಕ್ಯಾಂಪಸ್‌ ತೆರೆಯುವ ಒಲವು ವ್ಯಕ್ತಪಡಿಸಿದ್ದು ರಾಜ್ಯದತ್ತ ಹೆಚ್ಚಿನ ಆಸಕ್ತಿ ತೋರಿವೆ ಎಂದು ತಿಳಿದು ಬಂದಿದೆ.

ವಿದೇಶಿ ವಿವಿಗಳು ತಮ್ಮದೆ ಪ್ರತ್ಯೇಕ ವಿವಿ ತೆರೆಯುವುದಕ್ಕಿಂತ ನಮ್ಮಲ್ಲಿರುವ ವಿವಿಗಳ ಜೊತೆ ಕೈಜೋಡಿಸಲು ನಾವು ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ.
–ಡಾ. ಎಂ. ಸಿ. ಸುಧಾಕರ್‌, ಉನ್ನತ ಶಿಕ್ಷಣ ಸಚಿವ

-ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next