Advertisement

ಸುಂದರ ಬದುಕಿಗೆ ಸರಕಾರದ ದೃಢಸಂಕಲ್ಪ

07:59 PM Nov 02, 2021 | Team Udayavani |

ಬೆಳಗಾವಿ: ಕೋವಿಡ್‌ ನಂತರ ಎದುರಾಗಿರುವ ಆರ್ಥಿಕ ಹಾಗೂ ಸಾಮಾಜಿಕ ಸವಾಲುಗಳ ಮಧ್ಯೆಯೂ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸುವುದರ ಜೊತೆಗೆ ಪ್ರವಾಹ ಸಂತ್ರಸ್ತರು, ರೈತರು, ಕೂಲಿಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರಿಗೆ ಸುಂದರ ಬದುಕು ಕಟ್ಟಿಕೊಡುವ ದೃಢಸಂಕಲ್ಪ ಸರ್ಕಾರ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ಜಿಲ್ಲಾಡಳಿತ ವತಿಯಿಂದ ನಗರದ ಸಿಪಿಎಡ್‌ ಮೈದಾನದಲ್ಲಿ ಸೋಮವಾರ ಅತ್ಯಂತ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ನಡೆದ 66 ನೇ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು.

ಇತ್ತೀಚೆಗೆ ಜರುಗಿದ ಕಿತ್ತೂರ ಉತ್ಸವದ ಬೆಳ್ಳಿಹಬ್ಬ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಈ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ಮುಂಬೆ„-ಕರ್ನಾಟಕ ಭಾಗವನ್ನು ಕಿತ್ತೂರು-ಕರ್ನಾಟಕ ಎಂದು ನಾಮಕರಣ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅದೇ ರೀತಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಘೋಷಣೆ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ, ರಾಜ್ಯದಾದ್ಯಂತ ವೀರಜ್ಯೋತಿ ಯಾತ್ರೆಯನ್ನು ಆರಂಭಿಸುವ ಭರವಸೆ ನೀಡಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ ಎಂದು ಹೇಳಿದರು.

ಕರ್ನಾಟಕ ಏಕೀಕರಣದ ಕ್ಷಣಗಳನ್ನು ನೆನಪು ಮಾಡಿಕೊಂಡ ಸಚಿವರು, ಕರ್ನಾಟಕ ಏಕೀಕರಣ ಹಾಗೂ ನಾಡು-ನುಡಿ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಮಹಿಳೆಯರ ಕೊಡುಗೆ ಅಪಾರವಾಗಿದೆ. ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ ಅಖಂಡ ಕರ್ನಾಟಕ ರಚನೆಯಾಗಬೇಕೆಂಬ ಕನಸು ನನಸಾಗಿ ಇಂದಿಗೆ 65 ವರ್ಷಗಳು ಪೂರ್ಣಗೊಂಡಿದ್ದು, ನಾವೆಲ್ಲರೂ 66ನೇ ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸುತ್ತಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನವಾಗಿದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್‌-19 ಸೊಂಕಿನಿಂದ ಒಟ್ಟು 888 ವ್ಯಕ್ತಿಗಳು ಮೃತಪಟ್ಟಿದ್ದು, ಈ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಪರಿಹಾರ ಒದಗಿಸಲು ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಬೆ„ಲಹೊಂಗಲ ತಾಲೂಕಿನ ಮೂವರು ಫಲಾನುಭವಿಗಳಿಗೆ ತಲಾ 1 ಲಕ್ಷ ರೂ ದಂತೆ ಮುಖ್ಯಮಂತ್ರಿಗಳು ವಿತರಣೆ ಮಾಡಿದ್ದಾರೆ
ಎಂದರು.

Advertisement

ಅತಿಯಾದ ಮಳೆ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ ಜುಲೈದಿಂದ ಇಲ್ಲಿಯವರೆಗೆ ಒಟ್ಟು 905 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಗೊಂಡಿದ್ದು, 8152 ಮನೆಗಳು ಭಾಗಶಃ ಹಾಗೂ 5205 ಮನೆಗಳು ಅಲ್ಪಸ್ವಲ್ಪ ಹಾನಿಗೊಳಗಾಗಿವೆ. ಹಾನಿಯಾದ ಮನೆಗಳ ಪ್ರಕರಣಗಳನ್ನು ಆರ್‌.ಜಿ.ಆರ್‌.ಎಚ್‌.ಸಿ.ಎಲ್‌ ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯ
ಪ್ರಗತಿಯಲ್ಲಿದೆ. ಅದೇ ರೀತಿ ಜಿಲ್ಲೆಯಲ್ಲಿ 86,832 ರೈತರ 1,15,661 ಹೆಕ್ಟೇರ್‌ ಕೃಷಿ ಭೂಮಿಯ ಹಾಗೂ 7,424 ರೈತರ 4,232.6 ಹೆಕ್ಟೇರ್‌ ಭೂಮಿಯ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಹೇಳಿದರು.

ಜಿಲಜೀವನ್‌ ಮಿಷನ್‌: ಜಿಲ್ಲಾ ಪಂಚಾಯತ್‌ ವತಿಯಿಂದ ಕೇಂದ್ರ ಸರ್ಕಾರದ ಜಲ ಜೀವನ್‌ ಮಿಷನ್‌ ಯೋಜನೆಯಡಿ ಎಲ್ಲ ಗ್ರಾಮೀಣ ಜನವಸತಿಗಳಿಗೆ 2023 ರೊಳಗಾಗಿ ನಳ ನೀರು ಸಂಪರ್ಕವನ್ನು ಒದಗಿಸಬೇಕಾಗಿದೆ. ಬೆಳಗಾವಿ ವಿಭಾಗಕ್ಕೆ ಸಂಬಂಧಿಸಿದಂತೆ 2020-21ನ ಸಾಲಿಗೆ 343 ಜನವಸತಿಗಳಲ್ಲಿ 1,15,407 ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸುವ ಗುರಿಯನ್ನು ಹೊಂದಿದ್ದು ಈಗಾಗಲೇ 68,230 ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸಲಾಗಿದೆ.

2021-22 ಸಾಲಿಗೆ 503 ಗ್ರಾಮಗಳ ವ್ಯಾಪ್ತಿಯ 575 ಜನವಸತಿಗಳಲ್ಲಿ 1,14,037 ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸುವ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲಾಗಿದ್ದು, 61 ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಚಿಕ್ಕೋಡಿ ವಿಭಾಗಕ್ಕೆ ಸಂಬಂಧಿಸಿದಂತೆ, 2020-21ನ ಸಾಲಿಗೆ 666 ಜನವಸತಿಗಳಲ್ಲಿ 99360 ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸುವ ಗುರಿ ಹೊಂದಿದ್ದು ಈಗಾಗಲೇ 31206 ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸಲಾಗಿದೆ.

2021-22 ಸಾಲಿನಲ್ಲಿ 349 ಗ್ರಾಮಗಳ ವ್ಯಾಪ್ತಿಯ 637 ಜನವಸತಿಗಳಲ್ಲಿ 189182 ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸುವ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲಾಗಿದೆ ಎಂದರು. ಬೆಳಗಾವಿ ಜಿಲ್ಲೆಗೆ ಸರ್ಕಾರದಿಂದ ಒಟ್ಟು 1349 ಶುದ್ಧೀಕರಣ ಘಟಕಗಳು ಮಂಜೂರಾಗಿದ್ದು ಅದರಲ್ಲಿ 1330 ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. 1272 ಶುದ್ಧೀಕರಣ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಸಂಸದ ಮಂಗಲ ಅಂಗಡಿ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಬುಡಾ ಅಧ್ಯಕ್ಷ ಸಂಜಯ ಬೆಳಗಾಂವಕರ, ಪ್ರಾದೇಶಿಕ ಆಯುಕ್ತರಾದ ಆಮ್ಲಾನ್‌ ಆದಿತ್ಯ ಬಿಸ್ವಾಸ್‌, ಉತ್ತರ ವಲಯ ಐಜಿಪಿ ಎನ್‌.ಸತೀಶಕುಮಾರ್‌, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ್‌ ಸಿಇಒ ದರ್ಶನ್‌, ಜಿಲ್ಲಾ ಪೊಲೀಸ್‌ ವರಿಷ್ಠಾದಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಉಪಸ್ಥಿತರಿದ್ದರು.

ಕನ್ನಡ ಹೋರಾಟಗಾರರು- ಸಾಧಕರ ಸನ್ಮಾನ
ಇದೇ ಸಂದರ್ಭದಲ್ಲಿ ಕನ್ನಡ ನಾಡು-ನುಡಿಗಾಗಿ ಶ್ರಮಿಸುತ್ತಿರುವ ಕನ್ನಡ ಹೋರಾಟಗಾರರು, ಪತ್ರಕರ್ತರು, ಕ್ರೀಡಾಪಟುಗಳನ್ನು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಕನ್ನಡ ಹೋರಾಟಗಾರರಾದ ರಮೇಶ ಸೊಂಟಕ್ಕಿ, ಪದ್ಮರಾಜ ವೈಜನ್ನವರ, ತಿಪ್ಪೇಸ್ವಾಮಿ, ಗಣೇಶ ರೋಖಡೆ, ಬಾಳು ಉದಗಟ್ಟಿ ಹಾಗೂ ಶಿವನಗೌಡ ಪಾಟೀಲ, ಹಿರಿಯ ಪತ್ರಕರ್ತರಾದ ಶ್ರೀಶೈಲ ಮಠದ, ಶ್ರೀಕಾಂತ ಕುಬಕಡ್ಡಿ, ಕುಂತಿನಾಥ ಕಲಮನಿ, ರಾಜಶೇಖರ ಪಾಟೀಲ, ವಿಲಾಸ್‌ ಜೋಶಿ, ಸುನೀತಾ ದೇಸಾಯಿ ಹಾಗೂ ಮಹಾಂತೇಶ ಗದ್ದಿಹಳ್ಳಿಶೆಟ್ಟಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನಿಸಿ, ಗೌರವಿಸಿದರು. ಇದಲ್ಲದೆ ಯಾದವೇಂದ್ರ ಪೂಜಾರಿ(ಸಂಗೀತ), ಹೊಳೆಪ್ಪ ನೇಸರಗಿ(ಶೌರ್ಯ), ಬ್ರಹ್ಮಾನಂದ ಬಸರಗಿ(ಚಿತ್ರಕಲೆ), ಫಿರೋಜ್‌ ಗುಲಾಬ್‌ ಚಾಹುಸ್‌(ಪರಿಸರ), ಮಲಪ್ರಭಾ ಜಾಧವ್‌ (ಕ್ರೀಡೆ), ಚೆನ್ನಬಸಯ್ಯ ಕಠಾಪುರಿಮಠ(ಸಮಾಜ ಸೇವೆ), ಡಾ.ರಾಮಕೃಷ್ಣ ಮರಾಠೆ(ಸಾಹಿತ್ಯ), ಶಿವಲಿಂಗ ಕರವಿನಕೊಪ್ಪ(ಬಯಲಾಟ), ಆಶಾ ಕಡಪಟ್ಟಿ(ಸಾಹಿತಿ), ಸುನೀಲ್‌ ನೇಗಿನಹಾಳ(ಸಮಾಜ ಸೇವೆ), ಕಿರಣ ಮಾಳನ್ನವರ (ಸಾಮಾಜಿಕ ಜಾಲತಾಣ) ಹಾಗೂ ನಾಗರಾಜ ಮುರಗೋಡ(ಸಾಹಿತ್ಯ) ಅವರನ್ನು ಸಹ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next