Advertisement

LICಯ ಶೇ. 25ರಷ್ಟು ಷೇರು ಮಾರಾಟಕ್ಕೆ ಚಿಂತನೆ; ಕೇಂದ್ರಕ್ಕೆ 2 ಲಕ್ಷ ಕೋಟಿ ರೂ. ಗಳಿಕೆಯ ಗುರಿ

07:52 PM Sep 29, 2020 | Karthik A |

ಮಣಿಪಾಲ: ದೇಶದ ಅತಿದೊಡ್ಡ ವಿಮಾ ಕಂಪನಿ ಲೈಫ್ ಇನ್‌ಶುರೆನ್ಸ್‌ ಕಾರ್ಪೊರೇಷನ್‌ ಆಫ್ ಇಂಡಿಯಾ (ಎಲ್‌ಐಸಿ)ದ ಶೇ. 25ರಷ್ಟು ಪಾಲನ್ನು ಮಾರಾಟ ಮಾಡಲು ಸರಕಾರ ಯೋಜಿಸುತ್ತಿದೆ. ಇಂದಿನ ಮಾರುಕಟ್ಟೆ ಮೌಲ್ಯದಲ್ಲಿ ಸರಕಾರಕ್ಕೆ 2 ಲಕ್ಷ ಕೋಟಿ ರೂ. ಇದರಿಂದ ದೊರೆಯಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ಪ್ರಕ್ರಿಯೆಯನ್ನು ಹಲವು ಹಂತಗಳಲ್ಲಿ ಮಾಡಲಾಗುತ್ತದೆ.

Advertisement

ಮಾಹಿತಿಯ ಪ್ರಕಾರ ಬಜೆಟ್‌ ಅಂತರವನ್ನು ಕಡಿಮೆ ಮಾಡಲು ಎಲ್‌ಐಸಿಯಲ್ಲಿ ಇಂತಿಷ್ಟು ಪಾಲನ್ನು ಮಾರಾಟ ಮಾಡಲು ಸರಕಾರ ಮುಂದಾಗಿದೆ. ಆದರೆ ಸರಕಾರವು ಐಪಿಒ ಮೊದಲು ಸಂಸತ್ತಿನ ಕಾಯ್ದೆಯನ್ನು ಬದಲಾಯಿಸಬೇಕಾಗುತ್ತದೆ. ಏಕೆಂದರೆ ಈ ಕಾಯ್ದೆಯಡಿ ಎಲ್‌ಐಸಿ ರೂಪುಗೊಂಡಿದ್ದಾಗಿದೆ. ಪ್ರಸ್ತುತ ಎಲ್‌ಐಸಿಯಲ್ಲಿ ಶೇ.10 ರಷ್ಟು ಪಾಲನ್ನು ಮಾರಾಟ ಮಾಡುವ ಮೂಲಕ 80 ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸುವ ಯೋಜನೆ ಇದೆ. ಇದಕ್ಕಾಗಿ ಎಲ್‌ಐಸಿ ಐಪಿಒ ಸಿದ್ಧಪಡಿಸುತ್ತಿದೆ.

ಎಲ್‌ಐಸಿಯ ಐಪಿಒ ಸಮಯವನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ ಈ ಹಣಕಾಸು ವರ್ಷದಲ್ಲಿ ಅದನ್ನು ಜಾರಿಗೆ ತರಲು ಸರಕಾರ ಬಯಸಿದೆ. ಈ ಹಣಕಾಸು ವರ್ಷದಲ್ಲಿ ಕಂಪನಿಗಳ ಷೇರನ್ನು ಮಾರಾಟ ಮಾಡುವ ಮೂಲಕ 2.10 ಲಕ್ಷ ಕೋಟಿ ರೂ. ಸಂಗ್ರಹಿಸುವ ಯೋಜನೆ ಸರಕಾರಕ್ಕಿದೆ. ಇದರಲ್ಲಿ 80 ಸಾವಿರ ಕೋಟಿ ರೂ.ಗಳನ್ನು ಎಲ್‌ಐಸಿ ಮೂಲಕ ಹೊಂದುವ ನಿರೀಕ್ಷೆಯಿದೆ. ಎಲ್‌ಐಸಿಯ ಐಪಿಒ (Initial public offering) ಮಾರುಕಟ್ಟೆ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿದೆ.

ಕೋವಿಡ್‌ ನಷ್ಟ ಸರಿದೂಗಿಸಲು ಯೋಜನೆ
ಕೋವಿಡ್‌ ಸಾಂಕ್ರಾಮಿಕದಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ಎಲ್‌ಐಸಿ ಪಾಲನ್ನು ಮಾರಾಟ ಮಾಡುವುದು ಸರಕಾರದ ಉದ್ದೇಶವಾಗಿದೆ. ಮಾರ್ಚ್‌ 2021ರ ವೇಳೆಗೆ ಹಣಕಾಸಿನ ಕೊರತೆಯನ್ನು ಜಿಡಿಪಿಯ ಶೇ. 3.5ರಷ್ಟನ್ನು ಉಳಿಸಿಕೊಳ್ಳಲು ಸರಕಾರ ಗುರಿ ಇಟ್ಟುಕೊಂಡಿದೆ. ಮುಂದಿನ ಹಣಕಾಸು ವರ್ಷದ ಎಪ್ರಿಲ್‌ 1ರಿಂದ ಸರಕಾರವು ತನ್ನ ಪಾಲನ್ನು ಮಾರಾಟ ಮಾಡುವ ಮೂಲಕ 57 ಬಿಲಿಯನ್‌ ರೂಪಾಯಿಗಳನ್ನು ಸಂಗ್ರಹಿಸಿದೆ. ಎಲ್‌ಐಸಿ ಪ್ರಸ್ತುತ 34 ಕೋಟಿಗೂ ಹೆಚ್ಚು ಪಾಲಿಸಿಗಳನ್ನು ಹೊಂದಿದೆ ಮತ್ತು ಅದರ ಒಟ್ಟು ಆಸ್ತಿ 32 ಲಕ್ಷ ಕೋಟಿ ರೂಪಾಯಿಗಳು. ಇದು 1.10 ಲಕ್ಷ ಉದ್ಯೋಗಿಗಳು ಮತ್ತು 1.2 ಮಿಲಿಯನ್‌ ಏಜೆಂಟರನ್ನು ಹೊಂದಿದೆ.

ವಾರ್ಷಿಕ ಎರಡು ಲಕ್ಷ ಕೋಟಿ ಹೂಡಿಕೆ
ಎಲ್‌ಐಸಿ ದೇಶದ ಅತಿದೊಡ್ಡ ಹೂಡಿಕೆದಾರ. ವಾರ್ಷಿಕವಾಗಿ 2 ಲಕ್ಷ ಕೋಟಿ ರೂ.ಗಳನ್ನು ಇದು ಹೂಡಿಕೆ ಮಾಡುತ್ತದೆ. ಇದರಲ್ಲಿ 50-60 ಸಾವಿರ ಕೋಟಿ ರೂ.ಗಳನ್ನು ಷೇರು ಮಾರುಕಟ್ಟೆಯಲ್ಲಿ ಮತ್ತು ಉಳಿದವುಗಳನ್ನು ಸಾಲ ಮಾರುಕಟ್ಟೆ ಸೇರಿದಂತೆ ಇತರ ಕಡೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.

Advertisement

ಎಲ್‌ಐಸಿಯ ಐಪಿಒಗಾಗಿ ಸರಕಾರ ಡೆಲಾಯ್‌ ಮತ್ತು ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್‌ಗಳನ್ನು ನೇಮಿಸಿದೆ. ಸರಕಾರ ತನ್ನ ಅಧಿಕೃತ ಬಂಡವಾಳವನ್ನು 200 ಬಿಲಿಯನ್‌ ರೂಪಾಯಿಗಳಿಗೆ ಹೆಚ್ಚಿಸಲಿದೆ. ಇದನ್ನು 20 ಬಿಲಿಯನ್‌ ಷೇರುಗಳಾಗಿ ವಿಂಗಡಿಸಲಾಗುವುದು. ಆದರೆ ಅದರಲ್ಲಿ ಎಷ್ಟು ಪಾಲನ್ನು ಮಾರಾಟ ಮಾಡಲಾಗುವುದು ಎಂಬುದಕ್ಕೆ ಸರಕಾರ ಇನ್ನೂ ಉತ್ತರ ನೀಡಿಲ್ಲ. ಮೌಲ್ಯಮಾಪನದ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ.

 

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next