Advertisement

ಬಜೆಟ್ 2020; LICಯ ಸರ್ಕಾರದ ಪಾಲು ಷೇರುಪೇಟೆಗೆ ಮಾರಾಟ, ಆರ್ಥಿಕ ಅಭಿವೃದ್ಧಿಗೆ ಕ್ರಮ

09:59 AM Feb 02, 2020 | Nagendra Trasi |

ಮಣಿಪಾಲ:ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಅವರು ಮೂರು ಅಂಶಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿತ್ತು ಎಂದು ಲೋಕಸಭೆಯಲ್ಲಿ ತಿಳಿಸಿದ್ದರು. ಆಕಾಂಕ್ಷೆಯ ಭಾರತ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಕಳಕಳಿಯ ಮೇಲೆ ಈ ಬಾರಿಯ ಬಜೆಟ್ ಅನ್ನು ಮಂಡಿಸಲಾಗಿತ್ತು.

Advertisement

ಕೃಷಿ ಕ್ಷೇತ್ರದ ಅಭಿವೃದ್ಧಿಗೆ 16 ಅಂಶಗಳನ್ನು ಘೋಷಿಸಲಾಗಿದೆ. ಹೊಸ ಶಿಕ್ಷಣ ನೀತಿ ಜಾರಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಲಾಗಿದೆ. ಇದರಲ್ಲಿ ಗಮನಿಸಬೇಕಾದ ಅಂಶ ಶಿಕ್ಷಣದಲ್ಲಿಯೂ ವಿದೇಶಿ ಬಂಡವಾಳ ಹೂಡಿಕೆಗೆ ಕ್ರಮದ ಬಗ್ಗೆ. ಈಗಾಗಲೇ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ನಡುವಿನ ಜಿದ್ದಾಜಿದ್ದಿಯ ಗುಮ್ಮ ಇನ್ನೂ ನಿಂತಿಲ್ಲ.ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಆದ್ಯತೆ ಎಂದು ಹೇಳುತ್ತಲೇ ಮತ್ತೊಂದೆಡೆ ಆಂಗ್ಲ ಮಾಧ್ಯಮ ಶಾಲೆಗಳು ಎಗ್ಗಿಲ್ಲದೆ ತಲೆ ಎತ್ತುತ್ತಿವೆ. ಏತನ್ಮಧ್ಯೆ ಶಿಕ್ಷಣದಲ್ಲಿಯೂ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿಕೊಟ್ಟಲ್ಲಿ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಮೂಲಭೂತ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ಸರ್ಕಾರದ ಎಲ್ ಐಸಿ ಪಾಲು ಷೇರುಪೇಟೆಗೆ:

ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ನಲ್ಲಿ ಎಲ್ ಐಸಿಯಲ್ಲಿನ ಕೇಂದ್ರದ ಪಾಲನ್ನು ಐಪಿಒ(ಆರಂಭಿಕ ಸಾರ್ವಜನಿಕ ನೀಡಿಕೆ) ಮೂಲಕ ಮಾರಾಟ ಮಾಡುವುದಾಗಿ ಘೋಷಿಸಿದೆ. ಆದರೆ ಇದರ ಬಗ್ಗೆ ಖಚಿತವಾದ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಪ್ರಸ್ತುತ ದೇಶದ ಅತೀ ದೊಡ್ಡ ಆರ್ಥಿಕ ಭಾಗವಾಗಿರುವ ಎಲ್ ಐಸಿಯಲ್ಲಿ ಕೇಂದ್ರ ಸರ್ಕಾರ ಶೇ.100ರಷ್ಟು ಪಾಲನ್ನು ಹೊಂದಿದೆ.

ಎಲ್ ಐಸಿಯನ್ನು ಷೇರುಪೇಟೆಗೆ ತರಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಇದರಿಂದ ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಎಲ್ ಐಸಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದಾಗಿ ವಿಶ್ಲೇಷಿಸಲಾಗುತ್ತಿದ್ದರೂ ಕೂಡಾ ಜನಸಾಮಾನ್ಯ ಹಾಗೂ ಮಧ್ಯಮವರ್ಗದ ಎಲ್ ಐಸಿ ಪಾಲಿಸಿದಾರರಿಗೆ ಕಳವಳಕಾರಿ ಸಂಗತಿಯಾಗಿದೆ.

Advertisement

ಆರ್ಥಿಕ ಅಭಿವೃದ್ಧಿಗೆ ಹಂತ, ಹಂತದ ಕ್ರಮ:

ವಿತ್ತೀಯ ಕೊರತೆಯನ್ನು ಸರಿತೂಗಿಸಲು ಕೇಂದ್ರ ಸರ್ಕಾರ ಸಾಕಷ್ಟು ಕಸರತ್ತು ನಡೆಸಿರುವುದು ಈ ಬಾರಿಯ ಬಜೆಟ್ ನಲ್ಲಿ ಕಂಡು ಬಂದಿದೆ. ಆರ್ಥಿಕ ಅಭಿವೃದ್ದಿಯನ್ನು ಹಳಿಗೆ ತರುವಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದ ಬಜೆಟ್ ನಲ್ಲಿ ಕಡಿಮೆ, ಮಧ್ಯಮ ಹಾಗೂ ದೀರ್ಘಾವಧಿಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಭ್ರಷ್ಟಾಚಾರ ಮುಕ್ತ ಮತ್ತು ನೀತಿ ಆಧಾರಿತ ಉತ್ತಮ ಆಡಳಿತ ನೀಡುವುದು. ಸ್ವಚ್ಛ ಹಾಗೂ ಆರ್ಥಿಕ ಕ್ಷೇತ್ರವನ್ನು ಬಲಿಷ್ಠಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ 2020-21ನೇ ಸಾಲಿನಲ್ಲಿ 27,300 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ. ಇನ್ವೆಸ್ಟ್ ಮೆಂಟ್ ಕ್ಲಿಯರೆನ್ಸ್ ಸೆಲ್ ಸ್ಥಾಪನೆ ಪ್ರಸ್ತಾವನೆ ಇಟ್ಟಿರುವುದಾಗಿ ಬಜೆಟ್ ನಲ್ಲಿ ತಿಳಿಸಿದೆ.

ಖಾಸಗಿ ವಲಯದ ಮೂಲದ ದೇಶಾದ್ಯಂತ ಡಾಟಾ ಸೆಂಟರ್ ಗಳ ಸ್ಥಾಪನೆ. ಹೀಗೆ ಹಲವು ಮಹತ್ವದ ಯೋಜನೆಗಳನ್ನು ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಮಂಡಿಸಿದೆ.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next