Advertisement

ರಾತ್ರಿ  ಸಂಚಾರ ನಿಷೇಧ ಸುಪ್ರೀಂಗೆ ಸರ್ಕಾರ ಸೈ

06:00 AM Aug 04, 2018 | |

ಬೆಂಗಳೂರು: ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸುವ ಸಂಬಂಧ ಮೂರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಮಿತಿ ಕೈಗೊಳ್ಳುವ ತೀರ್ಮಾನ ಹಾಗೂ ಸುಪ್ರೀಂಕೋರ್ಟ್‌ ತೀರ್ಪಿಗೆ ನಾವು ಬದ್ಧ ಎಂದು ಲೋಕೋಪಯೋಗಿ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ವಾಹನ ಸಂಚಾರ ನಿಷೇಧ ತೆರವು ಸಂಬಂಧ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ನಮ್ಮ ಒಪ್ಪಿಗೆಯೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ  ಈ ಕುರಿತ ಪ್ರಸ್ತಾಪವಾಯಿತಾದರೂ, ರಾಜ್ಯದ ವನ್ಯಜೀವಿ ಸಂಪತ್ತಿಗೆ ಧಕ್ಕೆಯಾಗದಂತೆ ಪರಿಸರಕ್ಕೆ ಹಾನಿಯಾಗದಂತೆ ಜನರಿಗೂ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ನಾವು ಪ್ರತಿಪಾದಿಸಿದ್ದೇವೆ ಎಂದು ಹೇಳಿದರು.

ಜುಲೈ 21 ರಂದು ಕೇಂದ್ರ ಭೂ ಸಾರಿಗೆ ಇಲಾಖೆ ಕಾರ್ಯದರ್ಶಿಗಲು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸುಪ್ರೀಂಕೋರ್ಟ್‌ ಮುಂದೆ ಮಂಡಿಸಲಿರುವ ಪ್ರಸ್ತಾವನೆ ಬಗ್ಗೆ ರಾಜ್ಯ ಸರ್ಕಾರದ ಒಪ್ಪಿಗೆ ಕೋರಿರುತ್ತಾರೆ.

ಪ್ರಸ್ತಾವನೆಯಲ್ಲಿ ರಾಷ್ಟ್ರೀಯ ಹೆದ್ದಾರಿ -212 ಭಾಗವಾದ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕರ್ನಾಟಕ ರಾಜ್ಯ 24.20 ಕಿ.ಮೀ.ಗಳಲ್ಲಿ ಮತ್ತು ಕೇರಳ ರಾಜ್ಯದ 10.4 ಕಿ.ಮೀ.ಗಳಲ್ಲಿ ಒಂದು ಕಿ.ಮೀ. ಉದ್ದದ್ದ 0.5 ಎಲಿವೇಟೆಡ್‌ ಕಾರಿಡಾರ್‌ ಅನ್ನು (ಕರ್ನಾಟಕ ರಾಜ್ಯದಲ್ಲಿ 4 ಮತ್ತು ಕೇರಳ ರಾಜ್ಯದಲ್ಲಿ 1) ಸಂಬಂಧಪಟ್ಟ ರಾಜ್ಯಗಳ ವನ್ಯ ಜೀವಿಗಳ ಪ್ರಾಧಿಕಾರಿಗಳ ಸಲಹೆಯಂತೆ ನಿರ್ಮಿಸಿ ಸದರಿ ಎಲಿವೇಟೆಡ್‌ ಕಾರಿಡಾರ್‌ಗಳ ಕೆಳಗೆ ರಸ್ತೆಯನ್ನು ತೆಗೆದು ಅರಣ್ಯ ಬೆಳೆಸಿ ವನ್ಯ ಜೀವಿಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವುದು.

Advertisement

ಉಳಿದ ನೆಲಮಟ್ಟ ಭಾಗದ ರಸ್ತೆಯ ಎರಡು ಬದಿಗಳಲ್ಲಿ 8 ಅಡಿ ಎತ್ತರದ ಕಬ್ಬಿಣದ ತಂತಿಯ ಬೇಲಿಯನ್ನು ನಿರ್ಮಿಸಿ ವನ್ಯ ಜೀವಿಗಳು ರಸ್ತೆ ದಾಟದಂತೆ ಹಾಗೂ ಜನರು ಸಹ ವನ್ಯ ಜೀವಿಗಳ ಸಂಪರ್ಕಕ್ಕೆ ಬಾರದಂತೆ ತಡೆಯಲು ಕ್ರಮ ವಹಿಸುವುದು ಅದರಲ್ಲಿ ಸೇರಿದೆ.

ಸದರಿ ಪ್ರಸ್ತಾವನೆಗೆ ರಾಜ್ಯ ಸರ್ಕಾರದ ಒಪ್ಪಿಗೆ ನೀಡಲು ಕೇಂದ್ರ ಭೂ ಸಾರಿಗೆ ಮಂತ್ರಾಲಯ ಕೋರಿದೆ. ಆದರೆ, ನಾವು ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದರು.

ರಾಜ್ಯದ ಸಚಿವರಾಗಿ ಅರಣ್ಯ ಪ್ರದೇಶದಲ್ಲಿ ಸಂಚಾರಕ್ಕೆ ಅವಕಾಶ ಕೊಡುವ ಬಗ್ಗೆ ನಿಮ್ಮ ನಿಲುವು ಏನು ಎಂಬ ಪ್ರಶ್ನೆಗೆ, ಇದರಲ್ಲಿ ನನ್ನ ನಿಲುವು ಪ್ರಶ್ನೆ ಬರುವುದಿಲ್ಲ.  ಮುಖ್ಯ ಕಾರ್ಯದರ್ಶಿಗಳ ಸಮಿತಿ ಹಾಗೂ ನ್ಯಾಯಾಲಯದ ಆದೇಶಕ್ಕೆ ನಾವೆಲ್ಲರೂ ಬದ್ಧ ಎಂದು ಹೇಳಿದರು.

ನೀವು ಹಾಗೂ ಮುಖ್ಯಮಂತ್ರಿಯವರು ಕೇಂದ್ರ ಸಚಿವರ ಬಳಿ ಹೋದಾಗ ಭೂ ಸಾರಿಗೆ ಇಲಾಖೆಯ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದೀರಂತೆ ಎಂದಾಗ, ಗರಂ ಆದ ಅವರು ಆ ರೀತಿ ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ. ನಾವು ಯಾವುದಕ್ಕೂ ಒಪ್ಪಿಗೆ ನೀಡಿಲ್ಲ. ರಾಜ್ಯಕ್ಕೆ ಮಾರಕವಾಗುವ ಯಾವುದೇ ಕೆಲಸಕ್ಕೂ ನಮ್ಮ ಒಪ್ಪಿಗೆ ಇಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next