Advertisement
ಸುಪ್ರೀಂಕೋರ್ಟ್‌ನ ಕೊಲಿಜಿಯಂ ಹಾಗೂ ಕೇಂದ್ರ ಸರ್ಕಾರ ಕೂಡಲೇ ನ್ಯಾಯಮೂರ್ತಿಗಳ ನೇಮಕಗೊಳಿಸುವಂತೆ ಒತ್ತಾಯಿಸಿ ಹೈಕೋರ್ಟ್‌ನ ಗೋಲ್ಡನ್ ಜುಬಿಲಿ ಗೇಟ್ ಮುಂಭಾಗ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಹಿರಿಯ ವಕೀಲರಾದ ಬಿ.ವಿ ಆಚಾರ್ಯ, ಪ್ರೊ. ರವಿವರ್ಮಕುಮಾರ್, ಸಜ್ಜನ್ ಪೂವಯ್ಯ, ಎಂ.ಟಿ ನಾಣಯ್ಯ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್ ಪೊನ್ನಣ್ಣ, ವಕೀಲರ ಪರಿಷತ್ ಉಪಾಧ್ಯಕ್ಷ ವೈ.ಆರ್.ಸದಾಶಿವರೆಡ್ಡಿ, ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಸೇರಿ ನೂರಾರು ವಕೀಲರು ಪಾಲ್ಗೊಂಡಿದ್ದರು.
Related Articles
ಇದೇ ವೇಳೆ ಸತ್ಯಾಗ್ರಹ ನಿರತರ ಜತೆಗಿನ ಮಾತುಕತೆ ಬಳಿಕ ಮಾತನಾಡಿದ ಕೇಂದ್ರ ಸಾಂಖ್ಯೀಕ ಸಚಿವ ಡಿ.ವಿ. ಸದಾನಂದಗೌಡ, ರಾಜ್ಯ ಹೈಕೋರ್ಟ್‌ನಲ್ಲಿ ಶೇ.38ರಷ್ಟು ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿರುವುದು ಬೇಸರದ ಸಂಗತಿ. ಸದ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ಸ್ಥಾನಕ್ಕೆ 8 ಹೆಸರುಗಳನ್ನು ಶಿಫಾರಸು ಮಾಡಿದ್ದು, ಇದು ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿದೆ ಎಂಬ ಮಾಹಿತಿಯಿದೆ. ಈ ವಿಚಾರದ ಬಗ್ಗೆ ಕೇಂದ್ರ ಕಾನೂನು ಸಚಿವರ ಜತೆ ಚರ್ಚಿಸಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು
ಯತ್ನಿಸುತ್ತೇನೆ. ಈ ಬಗ್ಗೆ ಮಂಗಳವಾರ ಮಾಹಿತಿ ನೀಡಲಿದ್ದು, ಸತ್ಯಾಗ್ರಹ ವಾಪಾಸ್ ಪಡೆಯುವಂತೆ ಮನವಿ ಮಾಡಿದರು.
Advertisement
ಆದರೆ, ವಕೀಲರು ಈ ಮನವಿಯನ್ನು ಒಪ್ಪಲಿಲ್ಲ. ಫೆ.9ರವರೆಗೆ ಉಪವಾಸ ಸತ್ಯಾಗ್ರಹ ನಿರಂತರವಾಗಿ ಮುಂದುವರಿಯಲಿದ್ದು, ಹೈಕೋರ್ಟ್‌ನ ಐವರು ಹಿರಿಯ ವಕೀಲರು ಪ್ರತಿ ನಿತ್ಯ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ. ಉಳಿದಂತೆ ವಕೀಲ ವೃಂದವೂ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದೆ. ಈ ವಾರದಲ್ಲಿ ನ್ಯಾಯಮೂರ್ತಿಗಳ ನೇಮಕವಾಗದಿದ್ದರೆ ರಾಜ್ಯಾದ್ಯಂತ ಒಂದು ದಿನ ಕೋರ್ಟ್ಕಲಾಪ ಬಹಿಷ್ಕರಿಸಲು ವಕೀಲರ ಪರಿಷತ್ ನಿರ್ಧರಿಸಿದೆ. ದೇಶಾದ್ಯಂತ ಕೇವಲ ಶೇ.40ರಷ್ಟು ನ್ಯಾಯಮೂರ್ತಿಗಳು ಕಾರ್ಯನಿರ್ವ ಹಿಸುತ್ತಿದ್ದಾರೆ. ಎಲ್ಲ ಹೈಕೋರ್ಟ್‌ಗಳಲ್ಲೂ ಶೇ. 60ರಷ್ಟು ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿಯಿವೆ. ಇದು ರಾಜ್ಯದ ಸಮಸ್ಯೆಯಷ್ಟೇ ಅಲ್ಲ, ಇಡೀ ದೇಶದ ಸಮಸ್ಯೆಯಾಗಿದೆ.
ಬಿ.ವಿ.ಆಚಾರ್ಯ, ಹಿರಿಯ ವಕೀಲರು ಕೇಂದ್ರ ಸಚಿವ ಸದಾನಂದಗೌಡರ ಪ್ರತಿಕ್ರಿಯೆಗೆ ಕಾಯುತ್ತೇವೆ. ನಂತರ ಹಿರಿಯ ವಕೀಲರನ್ನೊಳಗೊಂಡ ನಿಯೋಗ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಕೊಲಿಜಿಯಂ ಭೇಟಿಯಾಗಿ ಮನವಿ ನೀಡಲಿದೆ. ಆಗಲೂ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು.
ವೈ.ಆರ್ ಸದಾಶಿವ ರೆಡ್ಡಿ, ರಾಜ್ಯವಕೀಲರ ಪರಿಷತ್ ಉಪಾಧ್ಯಕ್ಷ ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಉಳಿದಿರುವುದರಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಿಂದೆಂದಿಗಿಂತಲೂ ಭೀಕರ ಕ್ಷಾಮ ಎದುರಾಗಿದೆ. ಸಾರ್ವಜನಿಕರಿಗೆ ನ್ಯಾಯದಾನ ನೀಡುವಿಕೆಯಲ್ಲೂ ವಿಳಂಬವಾಗಿದೆ. ಕೂಡಲೇ ನ್ಯಾಯಮೂರ್ತಿಗಳ ಹುದ್ದೆಗಳು ಭರ್ತಿಯಾಗಬೇಕಿದೆ.
ಪ್ರೊ.ರವಿವರ್ಮಕುಮಾರ್, ಹಿರಿಯ ವಕೀಲರು