ಬೆಂಗಳೂರು: ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ವಿತರಣೆ ಸ್ಥಗಿತಗೊಳಿಸಿದ ಬೆನ್ನಲ್ಲೇ ನಿಯಮ ಬಾಹಿರ ಹಣ ಬಿಡುಗಡೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ ಅಡಿ ಕೈಗೆತ್ತಿಕೊಂಡ ಕಾಮಗಾರಿಗಳಿಗೆ ಪಾವತಿಸಬೇಕಾದ ಹಣಕ್ಕೆ ಸರ್ಕಾರ ಬ್ರೇಕ್ ಹಾಕಿದೆ.
ಕರ್ನಾಟಕ ಗ್ರಾಮೀಣಾಭಿವೃದ್ಧಿ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್)ದ ಮೂಲಕ ನಿರ್ವಹಿಸುತ್ತಿರುವ ಬಿಬಿಎಂಪಿ ಕಾಮಗಾರಿಗಳಿಗೆ ಪಾವತಿಸಬೇಕಾದ ಹಣಕ್ಕೆ ತಡೆ ನೀಡಲಾಗಿದೆ. ನವ ನಗರೋತ್ಥಾನ ಯೋಜನೆ ಅಡಿ ಸುಮಾರು 1,800 ಕೋಟಿ ಮೊತ್ತದ ವಿವಿಧ ಪ್ರಕಾರದ ಕಾಮಗಾರಿಗಳನ್ನು ಬಿಬಿಎಂಪಿಯು ಕೆಆರ್‌ಐಡಿಎಲ್‌ಗೆ ನೀಡಿದೆ. ಆದರೆ, ಸದ್ಯದ ಮಟ್ಟಿಗೆ ಈ ಮೊತ್ತದಲ್ಲಿ ಕೈಗೆತ್ತಿಕೊಂಡ ಎಲ್ಲ ಕಾಮಗಾರಿಗಳಿಗೆ ಪಾವತಿಸಬೇಕಾದ ಹಣವನ್ನು ಕೂಡಲೇ ನಿಲ್ಲಿಸಬೇಕು ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಈ ಸಂಬಂಧ ಈಚೆಗೆ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಕೋವಿಡ್ 19 ವೈರಸ್ ಹಾವಳಿಯಿಂದ ಇಡೀ ನಗರವೇ ಮಾರ್ಚ್ 23ರಿಂದ ಈಚೆಗೆ ಲಾಕ್‌ಡೌನ್ ಆಗಿದೆ. ಎಲ್ಲ ಕಾಮಗಾರಿಗಳೂ ಸ್ಥಗಿತಗೊಂಡಿವೆ. ಇದರ ನಡುವೆಯೂ ಮಾರ್ಚ್ ಕೊನೆಯ ವಾರದಿಂದ ಈವರೆಗೆ ಕೆಆರ್‌ಐಡಿಎಲ್‌ಗೆ ಪಾಲಿಕೆಯು ಅಂದಾಜು 450 ಕೋಟಿ ರೂ. ಪಾವತಿ ಮಾಡಿದೆ. ಈ ಪೈಕಿ ಏಪ್ರಿಲ್ 1ರಿಂದ ಈಚೆಗೆ 200 ಕೋಟಿಗೂ ಅಧಿಕ ಹಣವನ್ನು ಪಾವತಿಸಲಾಗಿದೆ. ಬಜೆಟ್ ಅನುಮೋದನೆಯಾಗದೆ ನಿಯಮಗಳನ್ನು ಉಲ್ಲಂ ಸಿ ಸುಮಾರು 200 ಕೋಟಿ ರೂ.ಗಳಷ್ಟು ಪಾವತಿಯನ್ನೂ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹಣ ಪಾವತಿಗೆ ತಡೆ ನೀಡುವಂತೆ ಸೂಚಿಸಲಾಗಿದೆ ಎಂದು ಮೂಲಗಳು “ಉದಯವಾಣಿ’ಗೆ ಸ್ಪಷ್ಟಪಡಿಸಿವೆ.
ನವ ನಗರೋತ್ಥಾನದಡಿ 2019-20ನೇ ಸಾಲಿನಲ್ಲಿ ರಸ್ತೆಗಳ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ, 110 ಹಳ್ಳಿಗಳ ಅಭಿವೃದ್ಧಿ ಸೇರಿದಂತೆ ಕೆಆರ್‌ಐಡಿಎಲ್‌ನಿಂದ ಸುಮಾರು 300ಕ್ಕೂ ಅಧಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ನಿಯಮದ ಪ್ರಕಾರ ಏ. 1ರ ನಂತರದಿಂದ ಯಾವುದೇ ಪಾವತಿಯನ್ನು ಮಾಡುವಂತಿಲ್ಲ. ಆದಾಗ್ಯೂ ನಿಯಮ ಉಲ್ಲಂ ಸಿ 200 ಕೋಟಿಗೂ ಅಧಿಕ ಹಣ ಪಾವತಿ ಮಾಡಲಾಗಿದೆ.
ಕಾಮಗಾರಿಗಳೂ ಸ್ತಬ್ದ: ನಗರಾದ್ಯಂತ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಬಾಕಿ ಉಳಿದ, ಈ ವರ್ಷ ಕೈಗೊಂಡಿರುವವು ಸೇರಿದಂತೆ ಸುಮಾರು ಎಂಟು ಸಾವಿರ ಕೋಟಿಗೂ ಅಧಿಕ ಮೊತ್ತದ ಯೋಜನೆಗಳು ವಿವಿಧ ಹಂತದಲ್ಲಿದ್ದವು. ರಸ್ತೆ ವಿಸ್ತರಣೆ, ವೈಟ್‌ಟಾಪಿಂಗ್, ಮೇಲ್ಸೇತುವೆ, ಗ್ರೇಡ್ ಸಪರೇಟರ್‌ಗಳು, ಕೆರೆ ಅಭಿವೃದ್ಧಿ, ತ್ಯಾಜ್ಯನಿರ್ವಹಣೆ ಒಳಗೊಂಡಂತೆ ಲಾಕ್‌ಡೌನ್ ಬೆನ್ನಲ್ಲೇ ಸ್ತಬ್ದಗೊಂಡಿವೆ.ಇದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಅವರಲ್ಲಿ ಕೆಲವರಿಗೆ ಕಾಮಗಾರಿಗಳು ನಡೆಯುತ್ತಿರುವ ಜಾಗದ ಬಳಿಯೇ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಕೆಲವರು ಸ್ವಂತ ಊರುಗಳಿಗೆ ತೆರಳಿದ್ದಾರೆ. ನೆಲವನ್ನು ಬಗೆಯುತ್ತಿರುವ ಜೆಸಿಬಿಗಳು, ಟಿಪ್ಪರ್‌ಗಳು ಆಯಾ ಜಾಗದಲ್ಲೇ ನಿಂತಿರುವುದನ್ನು ನಗರದಲ್ಲಿ ಕಾಣಬಹುದು.
ಮೆಟ್ರೋ ಅಭಿವೃದ್ಧಿ ಕಾಮಗಾರಿಯೂ ಸಗಿತ್ಥ : “ನಮ್ಮ ಮೆಟ್ರೋ’ ಎರಡನೇ ಹಂತದ ಸುಮಾರು 26 ಸಾವಿರ ಕೋಟಿ ಮೊತ್ತದ ಯೋಜನೆ ಕೂಡ ಪ್ರಗತಿಯಲ್ಲಿತ್ತು. ಗೊಟ್ಟಿಗೆರೆ-ನಾಗವಾರದ ನಡುವೆ ಸುರಂಗ ಮಾರ್ಗದ ನಾಲ್ಕು ಪ್ಯಾಕೇಜ್‌ಗಳ ಪೈಕಿ ಎರಡಕ್ಕೆ ಟೆಂಡರ್ ಅವಾರ್ಡ್ ಆಗಿದ್ದು, ಇನ್ನೇನು ಕಾಮಗಾರಿ ಕೈಗೆತ್ತಿಕೊಳ್ಳಬೇಕಿತ್ತು. ಅದೇ ರೀತಿ, ಆರ್.ವಿ. ರಸ್ತೆ-ಎಲೆಕ್ಟ್ರಾನಿಕ್ ಸಿಟಿ-ಬೊಮ್ಮಸಂದ್ರ ಮೆಟ್ರೋ ನಿರ್ಮಾಣ ಕಾರ್ಯ ನಡೆದಿತ್ತು.