Advertisement

ಸರಕಾರಿ ಶಾಲೆಗಳಿಗೆ ಬಂತೀಗ ಹೊಸ ಕಳೆ

06:15 PM Sep 24, 2021 | Team Udayavani |

ಸಿಂಧನೂರು: ಸರಕಾರಿ ಶಾಲೆಗಳು ಬರೀ ಸುಣ್ಣ-ಬಣ್ಣ ಅಷ್ಟೇ ಅಲ್ಲ; ಇದೀಗ ಗ್ರಾಮೀಣ ಜೀವನ ಶೈಲಿ ಬಿಂಬಿಸುವ ಚಿತ್ರಗಳೊಂದಿಗೆ ಮಕ್ಕಳನ್ನು ಆಕರ್ಷಿಸಲಾರಂಭಿಸಿವೆ. ತಾಲೂಕಿನ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳಿಗೆ ಚಿತ್ರಕಲಾ ಶಿಕ್ಷಕರನ್ನು ಬಳಸಿಕೊಂಡು ಹೊಸ ಮೆರಗು ನೀಡಲಾಗುತ್ತಿದೆ. ಚಿತ್ರಕಲಾ ಶಿಕ್ಷಕರು ತಮ್ಮ ದೈನಂದಿನ ಕೆಲಸದೊಟ್ಟಿಗೆ ಶಾಲೆಗಳನ್ನು ಅಂದ-ಚೆಂದಗೊಳಿಸಲು ಶ್ರಮಿಸುತ್ತಿದ್ದಾರೆ. ಆಯಾ ಶಾಲೆಯ ಮುಖ್ಯಗುರುಗಳ ಬೇಡಿಕೆಯನ್ವಯ ಬಿಇಒಗಳಿಂದ ಆದೇಶ ಪಡೆದು ಶಾಲೆಗಳಿಗೆ ಹಾಜರಾಗಿ, ಚಿತ್ರಕಲೆ ಅರಳಿಸುತ್ತಿದ್ದಾರೆ.

Advertisement

ರೌಡಕುಂದಾ ಶಾಲೆಗೆ ಹೊಸ ಕಳೆ:
ಮುಖ್ಯಗುರು ಶೇಷಗಿರಿರಾವ್‌ ಅವರು ಸುಣ್ಣ-ಬಣ್ಣ ಕಂಡ ಶಾಲೆಗೆ ಚಿತ್ರಕಲಾ ಶಿಕ್ಷಕರನ್ನು ಕೇಳಿದ ಹಿನ್ನೆಲೆಯಲ್ಲಿ ಬಿಇಒ ಶರಣಪ್ಪ ವಟಗಲ್‌ ತಂಡ ಕಳುಹಿಸಿದ್ದರು. ಹತ್ತು ಜನರನ್ನೊಳಗೊಂಡ ತಂಡ ಒಂದೇ ದಿನದಲ್ಲಿ ಶಾಲೆಯ ಗೋಡೆಗಳ ರಂಗು ಹೆಚ್ಚಿಸಿದೆ. ಗ್ರಾಮೀಣ ಜೀವನ ಶೈಲಿ ಸಾರುವ ಚಿತ್ರಗಳು, ಎತ್ತಿನ ಬಂಡಿ, ನೀರು ತರುವ ಚಿತ್ರ, ಪ್ರಾಣಿ, ಪಕ್ಷಿಗಳ ಚಿತ್ರ ಬಿಡಿಸಿದ್ದಾರೆ. ಗಿಡಮರ-ಗುಡಿಸಲು ಗಮನ ಸೆಳೆಯುತ್ತಿವೆ.

ಪರಿಸರ ಕಾಳಜಿ, ಸಾಂಸ್ಕೃತಿಕ ನೃತ್ಯ, ಭರತನಾಟ್ಯ, ಯಕ್ಷಗಾನ, ಬಯಲಾಟ, ವಾದ್ಯಮೇಳ ಸೇರಿದಂತೆ ಎಲ್ಲ ಜನಪದ ಕಲೆಗಳನ್ನು ಗೋಡೆಗಳಲ್ಲಿ ಚಿತ್ರಿಕರಿಸಲಾಗಿದೆ. ರೈತಾಪಿ ಜನರ ಬದುಕಿನ ನೋಟ, ಜನಪದ ಕಲೆಯ ಎಲ್ಲ ಪ್ರಕಾರಗಳನ್ನು ಇಲ್ಲಿ ಕಾಣಬಹುದಾಗಿದೆ.

19 ಶಾಲೆಗಳು ಪೂರ್ಣ: ಇದುವರೆಗೆ ಚಿತ್ರಕಲಾ ಶಿಕ್ಷಕರಿಂದಲೇ ತಾಲೂಕಿನ 19 ಶಾಲೆಗಳು ಹೊಸ ರೂಪ ಪಡೆದಿವೆ. ಸಿದ್ರಾಂಪುರ, ವಳಬಳ್ಳಾರಿ, ತುರುವಿಹಾಳ, ಹಾರಾಪುರ, ಅಲಬನೂರು, ಜವಳಗೇರಾ, ಗೋರೆಬಾಳ, ಆದರ್ಶ ವಿದ್ಯಾಲಯ, ವೆಂಕಟೇಶ್ವರ ಸ್ಕೂಲ್‌, ಹೊಸಳ್ಳಿ ಕ್ಯಾಂಪ್‌, ಹಂಚಿನಾಳ, ರೌಡಕುಂದಾ, ಉದಾಳ(ಇಜೆ) ಮೂಡಲಗಿರಿ ಕ್ಯಾಂಪ್‌, ಅಂಬಾನಗರ ಶಾಲೆಯ ಗೋಡೆಗಳುಕಲಾವಿದರಕೈ ಚಳಕಕ್ಕೆ ಸಾಕ್ಷಿಯಾಗಿವೆ. ಬಿಡುವಿನ ದಿನ ಭಾನುವಾರ
ಕೂಡ ಚಿತ್ರಕಲಾ ಶಿಕ್ಷಕರು ಕೊಪ್ಪಳ ಜಿಲ್ಲೆಯ ಅರಸನಕೇರಿಗೆ ತೆರಳಿ ಅಲ್ಲಿನ ಶಾಲೆಯನ್ನು ಅಂದ- ಚೆಂದಗೊಳಿಸಿದ್ದಾರೆ.

ಬಿಇಒ ಸೂಚನೆ ಬೇಕು: ಕಲಾ ಶಿಕ್ಷಕರು ತಿಂಗಳಿಗೊಂದು ಸಭೆ ನಡೆಸುವುದಕ್ಕೆ ಈ ಹಿಂದೆ ಇಲಾಖೆಯೇ ಆದೇಶ ಹೊರಡಿಸಿತ್ತು. ಈ ಸಂದರ್ಭ ಬರೀ ಆಯಾ ಶಾಲೆಗೆ ಹೋಗಿ ಚರ್ಚೆ ಮಾಡಿ ಬರುವ ಬದಲು ಕಲಾವಿದರು ಬಂದು ಹೋಗಿದ್ದರೆಂಬ ನೆನಪು ಉಳಿಸಲು ಚಿತ್ರ ಬಿಡಿಸುವ ಮಾರ್ಗ ಅನುಸರಿಸಲಾಯಿತು. ಸಭೆ ನಡೆಸಬೇಕೆಂಬ ಆದೇಶ ರದ್ದಾಗಿದ್ದರೂ ಆಯಾ ಶಾಲೆ ಮುಖ್ಯಗುರುಗಳು ಬೇಡಿಕೆ ಸಲ್ಲಿಸಿದರೆ ಬಿಇಒ ಅನುಮತಿ ಪಡೆದು ಶಾಲೆಗೆ ಹೋಗುವ ಪದ್ಧತಿಯನ್ನು ತಾಲೂಕಿನಲ್ಲಿ ಮುಂದುವರಿಸಲಾಗಿದೆ.

Advertisement

ಇದರೊಟ್ಟಿಗೆ ಖಾಸಗಿ ಶಿಕ್ಷಕರು ಕೂಡ ಕಲಾವಿದರ ಸಂಘ ಕಟ್ಟಿಕೊಂಡು ಸರಕಾರಿ ಶಾಲೆಗಳನ್ನು ಅಂದಗೊಳಿಸುತ್ತಿದ್ದಾರೆ. ಪ್ರತಿಯೊಂದು ಸರಕಾರಿ ಶಾಲೆಯನ್ನುಮಕ್ಕಳಆಕರ್ಷಣೀಯ ಕೇಂದ್ರವಾಗಿಸಬೇಕೆಂಬ ಉದ್ದೇಶದೊಂದಿಗೆ ಕಲಾವಿದರು ಸೇವೆ ಸಲ್ಲಿಸುತ್ತಿದ್ದಾರೆ. ಕಲಾವಿದರ ಆಯಾ ದಿನ ಊಟದ ವ್ಯವಸ್ಥೆ ಕಲ್ಪಿಸಿ, ಬಣ್ಣ, ಬ್ರಷ್‌ಗಳನ್ನು ಕೊಡಿಸಿದರಷ್ಟೇ ಸಾಕು; ತಮ್ಮ ಕೆಲಸ ನಿಭಾಯಿಸಿ ಅಲ್ಲಿಂದ ಮರಳುತ್ತಿರುವುದು ಗಮನಾರ್ಹ.

ಪ್ರತಿ ತಿಂಗಳು 3ನೇ ಶನಿವಾರ ಸಭೆ ನಡೆಸಲು ಇಲಾಖೆ ನಿರ್ದೇಶಕರು ಆದೇಶವಾಗಿತ್ತು. ಬರೀ ಮೀಟಿಂಗ್‌ ಮಾಡಿ ಬರುವ ಬದಲು ಅಲ್ಲೊಂದು ನೆನಪು ಉಳಿಯುವ ರೀತಿ ಮಾಡಬೇಕೆಂದು ಚಿತ್ರ ಬಿಡಿಸಲಾಯಿತು. ಇಲ್ಲಿನ ಪ್ರಯತ್ನಕ್ಕೆ ಪ್ರೋತ್ಸಾಹ ದೊರೆತು ರಾಜ್ಯದ ಇತರೆಕಡೆಯೂ ಅನುಕರಿಸಲಾಗಿದೆ.
ಪಿ.ಎಲ್‌.ಪತ್ರೋಟಿ, ಜಿಲ್ಲಾಧ್ಯಕ್ಷರು,
ಚಿತ್ರಕಲಾ ಶಿಕ್ಷಕರ ಸಂಘ, ರಾಯಚೂರು

ಮಕ್ಕಳ ದಾಖಲಾತಿ ಹೆಚ್ಚಳವಾಗಬೇಕು. ಆ ನಿಟ್ಟಿನಲ್ಲಿ ಮಕ್ಕಳು ಸರಕಾರಿ ಶಾಲೆ ನೋಡಿದಾಗ ಇಲ್ಲಿಯೇ ಕಲಿಯಬೇಕೆಂಬ ಆಸಕ್ತಿ ಹೊಂದಬೇಕು. ಅವರಿಗೆ ಪರಿಸರ, ಸಾಮಾಜಿಕ ಮೌಲ್ಯಗಳನ್ನುಕಲೆಯ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ.
ಶಿವಾನಂದ ಸಾತಿಹಾಳ್‌, ಅಧ್ಯಕ್ಷರು,
ಚಿತ್ರಕಲಾ ಶಿಕ್ಷಕರ ಸಂಘ, ಸಿಂಧನೂರ

ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next