Advertisement

ಅಳ್ನಾವರದಲ್ಲಿ “ಸರಕಾರಿ ಶಾಲೆ ಉಳಿಸಿ’ಅಭಿಯಾನ

04:32 PM Jan 06, 2022 | Team Udayavani |

ಅಳ್ನಾವರ: ಪಟ್ಟಣ ಹಾಗೂ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳು ಉಳಿಯಬೇಕು. ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯಬೇಕೆಂಬ ಉದ್ದೇಶ ಹೊತ್ತು ಮೋದಿಜಿ ಅಭಿಮಾನಿ ಬಳಗ ಆರಂಭಿಸಿದ “ಸರ್ಕಾರಿ ಶಾಲೆ ಉಳಿಸಿ’ ಅಭಿಯಾನಕ್ಕೆ ಶಾಲಾ ಗೋಡೆಗೆ ಬಣ್ಣ ಹಚ್ಚುವ ಮೂಲಕ ಪಪಂ ಅಧ್ಯಕ್ಷೆ ಮಂಗಳಾ ರವಳಪ್ಪನವರ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಅವರು, ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಎಲ್ಲರೂ ಮುಂದಾಗಬೇಕು. ಶಾಲೆಗಳ ಅಭಿವೃದ್ಧಿಗೆ ಸ್ಥಳಿಯ ಆಡಳಿತ ಎಲ್ಲ ಸಹಕಾರ ನೀಡುವ ಭರವಸೆ ನೀಡಿದರು.

ಮೋದಿಜಿ ಅಭಿಮಾನಿ ಬಳಗದ ಅಧ್ಯಕ್ಷ ಬೆಣಚಿ ಗ್ರಾ ಪಂ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ಸರ್ಕಾರಿ ಶಾಲೆ ಹಾಗೂ ಹಳೆಯ ದೇವಸ್ಥಾನ ಉಳಿಸಿ ಎಂಬ ಅಭಿಯಾನ ಆರಂಭಿಸಲಾಗಿದೆ. ಅಳ್ನಾವರ ಹಾಗೂ ಹಳ್ಳಿಯ ಯುವಕರ ಪಡೆ ಸೇರಿ ಮೋದಿಜಿ ಅಭಿಮಾನಿ ಬಳಗ ಕಟ್ಟಲಾಯಿತು. ಈ ಕುರಿತು ಫೇಸ್‌ಬುಕ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಭಿತ್ತಿರಿಸಿ “ಭಿಕ್ಷಾಂದೇಹಿ ಅಭಿಯಾನ’ ಆರಂಭಿಸಲಾಯಿತು. ಜನರಿಂದ ಅಭೂತಪೂರ್ವ ಸಹಕಾರ ಹಾಗೂ ಪ್ರತಿಕ್ರಿಯೆ ವ್ಯಕ್ತವಾಗಿ 65 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹವಾಯಿತು.

ಹಲವಾರು ದಾನಿಗಳು ಮುಕ್ತ ಮನಸ್ಸಿನಿಂದ ದೇಣಿಗೆ ನೀಡಿದರು. ಹಲವರು ಖರೀದಿ ದರದಲ್ಲಿ ಪೇಂಟ್‌ ನೀಡಿದರು. ಕಾರ್ಮಿಕರು ಲಾಭ ಲೆಕ್ಕಿಸದೆ ಕೇವಲ ಕೂಲಿ ಲೆಕ್ಕದಲ್ಲಿ ಬಂದರು. ಇದರಿಂದ ಉತ್ತೇಜಿತರಾದ ನಮ್ಮ ಬಳಗ ಈ ಭಾಗದ ಹಳೆಯ ಶಾಲೆ, ದೇವಸ್ಥಾನ ಅಭಿವೃದ್ಧಿಗೆ ಮುಂದೆ ಬಂದಿದೆ ಎಂದರು.

ಸರ್ಕಾರಿ ಶಾಲೆಗಳು ಸ್ವಚ್ಛ-ಸುಂದರವಾಗಿರಬೇಕು. ಇಲ್ಲಿನ ಪರಿಸರ ಉತ್ತಮವಾಗಿರಬೇಕೆಂಬ ಅಭಿಲಾಷೆ ನಮ್ಮದು. ಸರ್ಕಾರಿ ಶಾಲೆಗಳು ಕೂಡಾ ಖಾಸಗಿ ಶಾಲೆಗಳಂತೆ ಕಂಗೊಳಿಸುವ ವಾತಾವರಣ ನಿರ್ಮಿಸಲಾಗುವದು. ಇಂತಹ ಮಹತ್ವಪೂರ್ಣ ಕಾರ್ಯ ಕೇವಲ ಸರ್ಕಾರದಿಂದ ಮಾತ್ರ ನಡೆಯಬೇಕೆಂಬ ಮಾತು ಬಿಟ್ಟು, ಸಾರ್ವಜನಿಕರು ಕೈಜೋಡಿಸಿದಾಗ ಸುಂದರ ಶಾಲೆ, ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು.

Advertisement

ಶಾಲೆ ಅಭಿವೃದ್ಧಿಗೆ ಹಲವು ಬೇಡಿಕೆಗಳಿವೆ.ಈ ಕುರಿತು ಶಾಸಕರಿಗೆ, ಪಟ್ಟಣ ಪಂಚಾಯತ್‌ಗೆ ಹಾಗೂ ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗುವುದು. ಈ ಶಾಲೆಗೆ ಗ್ರೀಲ್‌ ಅಳವಡಿಸಲು ಬೇಡಿಕೆ ಇದೆ ಎಂದರು. ಪಪಂ ಸದಸ್ಯ ರಮೇಶ ಕುನ್ನೂರಕರ, ಪರಶುರಾಮ ಬೇಕನೇಕರ, ಪರಮೇಶ್ವರ ತೇಗೂರ, ಎಸ್‌ಡಿಎಂಸಿ ಅಧ್ಯಕ್ಷ ಖಲೀಲಅಹ್ಮದ್‌ ಸನದಿ, ಉಪಾಧ್ಯಕ್ಷೆ ಗೌರಮ್ಮ ಅಂಚಿ, ಮುಖ್ಯಾಧ್ಯಾಪಕಿ ಆಶಾಬಿ ಹವಾಲ್ದಾರ್‌, ಮೋಹನ ಪಟೇಲ, ಪರಶುರಾಮ ಪಾಲಕರ, ವೆಂಕಟೇಶ ಪವಾರ, ಯಲ್ಲಾರಿ ಹುಬ್ಳೀಕರ, ಸತೀಶ ಹಿರೇಮಠ, ಅನಂತ ರವಳಪ್ಪವನರ, ಸುರೇಶ ಜಾಧವ, ಮಂಜುಳಾ ಅರ್ಕಾಚಾರಿ, ಪುಷ್ಪಾ ಸಾಗರೇಕರ, ರೇಖಾ ಸಾವಂತ, ಎಸ್‌ಡಿಎಂಸಿ ಸಮಿತಿ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next