Advertisement

ಪಾಳು ಬಿದ್ದ ಭವನದಲ್ಲೇ ಸರ್ಕಾರಿ ಶಾಲೆ

12:17 PM Aug 17, 2019 | Suhan S |

ಚನ್ನರಾಯಪಟ್ಟಣ: ತಾಲೂಕಿನ ಬಾಗೂರು ಹೋಬಳಿ ಮರುವನಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಶಾಲೆಗೆ ಕೊಠಡಿ ಕೊರತೆಯಿಂದ ಸುಮಾರು 3 ವರ್ಷದಿಂದ ಪಾಳುಬಿದ್ದ ಸಮುದಾಯ ಭವನದಲ್ಲೇ ಶಾಲೆ ನಡೆಯುತ್ತಿದ್ದು ತಾಲೂಕು ಆಡಳಿತ ಮಾತ್ರ ಕಣ್ಣು ಮುಚ್ಚಿ ಕೂತಿದೆ.

Advertisement

ಮರುವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 52 ಮಂದಿ ವಿದ್ಯಾರ್ಥಿಗಳಿದ್ದಾರೆ. ಬಾಗೂರು ಹೋಬಳಿಯಲ್ಲಿ ಅತಿ ಹೆಚ್ಚು ಮಕ್ಕಳು ದಾಖಲಾತಿ ಪಡೆದಿರುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಇನ್ನು ಗ್ರಾಮದ ಜನತೆ ಖಾಸಗಿ ಶಾಲೆಯಿಂದ ಮಕ್ಕಳನ್ನು ಬಿಡಿಸಿ ತಮ್ಮೂರಿನ ಸರ್ಕಾರಿ ಶಾಲೆಗೆ ದಾಖಲು ಮಾಡಿದ್ದಾರೆ. ಮರುವನಹಳ್ಳಿ ಗ್ರಾಮವಲ್ಲದೆ, ಕುರುವಂತ, ಬ್ಯಾಲದಕೆರೆ, ಚಿಕ್ಕನಾಯಕನಹಳ್ಳಿ, ಕೃಷ್ಣಾಪುರ ಗ್ರಾಮದ ಮಕ್ಕಳೂ ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಸಹಕಾರ ನೀಡುತ್ತಿದ್ದೇವೆ: ಶಾಲೆ ಮುಖ್ಯ ಶಿಕ್ಷಕಿ ಹಾಗೂ ಗ್ರಾಮಸ್ಥರು ಈವರೆಗೆ ಎಂಟು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಪತ್ರ ಬರೆದಿದ್ದಾರೆ. ಬಿಇಒ ಮಾತ್ರ ಒಮ್ಮೆಯೂ ಶಾಲೆಗೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ. ನಮ್ಮೂರ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲು ಮಾಡುವ ಬದಲಾಗಿ ಸರ್ಕಾರಿ ಶಾಲೆಗೆ ದಾಖಲಿಸಿ ಅಗತ್ಯ ಸಹಕಾರ ನೀಡುತ್ತಿದ್ದೇವೆಂದು ಗ್ರಾಮಸ್ಥರು ‘ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ. ಗ್ರಾಮದ ಪ್ರತಿ ಮನೆಯವರು ಕೈಲಾದಷ್ಟು ಸಹಾಯ ಮಾಡಿ ಎರಡು ಶೌಚಗೃಹವನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇದಲ್ಲದೆ ಗುಣಮಟ್ಟದ ಗ್ರಾನೈಟ್ ಬಳಕೆ ಮಾಡಿ ಧ್ವಜದ ಕಂಬ ನಿರ್ಮಿಸಿದ್ದಾರೆ. ಇನ್ನು ಶಾಲೆಗೆ ಅಗತ್ಯ ಇರುವ ಜೆರಾಕ್ಸ್‌ ಯಂತ್ರ, ಗಣಕಯಂತ್ರ ಹಾಗೂ ಕಲ್ಲರ್‌ ಪ್ರಿಂಟಿಂಗ್‌ ತೆಗೆಯಲು ಪ್ರಿಂಟರ್‌ ಸೇರಿದಂತೆ ಶಿಕ್ಷಣಕ್ಕೆ ಅಗತ್ಯ ಇರುವ ವಸ್ತುಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆಯನ್ನು ಮೇಲೆತ್ತಲು ಶ್ರಮಿಸುತ್ತಿದ್ದಾರೆ.

ಶಾಲಾ ಒತ್ತುವರಿ ತೆರವು: ಉತ್ತಮವಾಗಿ ಇರುವ ಎರಡು ಕೊಠಡಿಗೆ ಪ್ರತಿ ವರ್ಷ ಗ್ರಾಮಸ್ಥರು ಸುಣ್ಣ ಬಣ್ಣ ಬಳಿಯುತ್ತಾರೆ. ವಿದ್ಯಾರ್ಥಿಗಳ ಕ್ರೀಡೆಗೆ ಅಗತ್ಯ ಇರುವ ಸಾಮಗ್ರಿಯನ್ನು ಗ್ರಾಮಸ್ಥರೇ ದಾನ ಮಾಡಿದ್ದಾರೆ.

Advertisement

ಬಿಸಿಯೂಟಕ್ಕೆ ವಿದ್ಯಾರ್ಥಿಗಳಿಗೆ ತಟ್ಟೆ ಲೋಟ ಹಾಗೂ ಇತರ ವಸ್ತು ನೀಡಿದ್ದಾರೆ. ಶಾಲೆಗೆ ಸೇರಿದ್ದ ಎರಡು ಎಕರೆ ಭೂಮಿ ಒತ್ತುವರಿಯಾಗಿತ್ತು. ಈಗ ಅದನ್ನು ಬಿಡಿಸಿ ಶಾಲೆ ಹೆಸರಿಗೆ ಖಾತೆ ಮಾಡಿಸಿದ್ದಾರೆ. ಶಾಲಾ ಆವಣದಲ್ಲಿ ಸಸಿ ನಾಟಿ ಮಾಡಿ ಉತ್ತಮ ಪರಿಸರವನ್ನೂ ಗ್ರಾಮಸ್ಥರು ಕಲ್ಪಿಸಿದ್ದಾರೆ.

4-7ನೇ ತರಗತಿ ಮಕ್ಕಳಿಗೆ ಸಮಸ್ಯೆ:

ಸರ್ಕಾರಿ ಶಾಲೆಗೆ ಪ್ರತಿ ವರ್ಷವೂ ದಾಖಲಾತಿ ಕಡಿಮೆಯಾಗಿ ಶಾಲೆಗಳ ಬಾಗಿಲು ಹಾಕುತ್ತಿರುವ ವೇಳೆ ಮರುವನಹಳ್ಳಿ ಶಾಲೆಯಲ್ಲಿ ದಾಖಲಾಗಿ ಹೆಚ್ಚುತ್ತಿದೆ. ನಾಲ್ಕು ಕೊಠಡಿಗಳು ಇದ್ದು ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಒಂದು ಕೊಠಡಿ ಬಿದ್ದುಹೋಗಿದೆ. ಇನ್ನು ಒಂದು ಕೊಠಡಿ ಬಿರುಕು ಬಿಟ್ಟಿರುವುದರಿಂದ ಕಳೆದ 2 ವರ್ಷದಿಂದ ಕೊಠಡಿಗೆ ಬೀಗ ಹಾಕಲಾಗಿದೆ. ಇನ್ನೊಂದು ಶಾಲಾ ಕೊಠಡಿಯಲ್ಲಿ ಒಂದರಿಂದ 3ನೇ ತರಗತಿ ವರೆಗೆ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ಇನ್ನು ಒಂದು ಕೊಠಡಿಯಲ್ಲಿ ಶಾಲೆಯ ಅಗತ್ಯ ದಾಖಲಾತಿ, ಪರಿಕರ ಇಡಲಾಗಿದೆ. 4 ರಿಂದ 7ನೇ ತರಗತಿ ಮಕ್ಕಳಿಗೆ ಪಾಳು ಬಿದ್ದ ಸಮುದಾಯ ಭವನವೇ ಶಾಲಾ ಕೊಠಡಿ ಆಗಿದ್ದು ಗ್ರಾಮದಲ್ಲಿ ಪಾಳು ಬಿದ್ದಿದ್ದ ಸಮುದಾಯ ಭವನದಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.
● ಶಾಮಸುಂದರ್‌ ಕೆ.ಅಣ್ಣೇನಹಳ್ಳಿ
Advertisement

Udayavani is now on Telegram. Click here to join our channel and stay updated with the latest news.

Next