ಬಂಟ್ವಾಳ: ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿ ಸಿಬಂದಿಗೆ 60 ವರ್ಷ ತುಂಬಿದ್ದರೆ ಕೆಲಸದಿಂದ ಬಿಡುಗಡೆಗೊಳಿಸುವಂತೆ (ರಿಲೀವ್) ಸರಕಾರ ಆದೇಶಿಸಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ 254 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ.
ಅಕ್ಷರ ದಾಸೋಹ ಯೋಜನೆ ಸಿಬಂದಿಗೆ ಮಾಸಿಕ ಸಂಭಾವನೆ ಹೆಸರಿನಲ್ಲಿ ವೇತನ ನೀಡಲಾಗುತ್ತಿದೆ. ನಿವೃತ್ತಿಯ ಮಾನದಂಡ ಅಥವಾ ಆದೇಶ ಇರದ ಕಾರಣ 60 ದಾಟಿದ ಮಹಿಳೆಯರೂ ಕೆಲಸದಲ್ಲಿ ಮುಂದುವರಿದಿದ್ದರು. ಆದರೆ ಇದೀಗ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದಂತೆ 60 ದಾಟಿದವರು ಅನಿವಾರ್ಯವಾಗಿ ಮನೆಗೆ ಹೋಗಬೇಕಾಗಿದೆ. ಈ ವರೆಗೆ ಇರದಿದ್ದ ಆದೇಶವನ್ನು ಏಕಾಏಕಿ ಜಾರಿ ಮಾಡಿರುವುದು ಸಿಬಂದಿಯ ಆಕ್ರೋಶ ಮತ್ತು ಅಸಹಾಯಕತೆಗೆ ಕಾರಣವಾಗಿದೆ.
ಬರಿಗೈಯಲ್ಲಿ ಮನೆಗೆ
ಸರಕಾರ ಅಡುಗೆ ಸಿಬಂದಿಗೆ ಮಾಸಿಕ ಸಂಭಾವನೆ ಮಾತ್ರ ನೀಡುತ್ತಿದ್ದು, ಅದನ್ನೇ ಒಂದಷ್ಟು ಹೆಚ್ಚು ಮಾಡುತ್ತಿತ್ತು. ಭವಿಷ್ಯ ನಿಧಿಯಂತಹ ಇತರ ಯಾವುದೇ ಸೌಲಭ್ಯಗಳಿಲ್ಲ. ಆದ್ದರಿಂದ ಪ್ರಸ್ತುತ ಕೆಲಸ ಕಳೆದುಕೊಳ್ಳುವ ಸಿಬಂದಿ ಬರಿಗೈಯಲ್ಲೇ ಮನೆಗೆ ಹೋಗಬೇಕಾದ ಸ್ಥಿತಿ ಇದೆ. ಕಾರ್ಮಿಕ ಸಂಘಟನೆಗಳು ಸರಕಾರದ ನಿರ್ಧಾರವನ್ನು ಖಂಡಿಸುತ್ತಿದ್ದು, ಕೆಲಸದಿಂದ ಬಿಡುಗಡೆಗೊಳಿಸುವಾಗ ಒಂದಷ್ಟು ಗೌರವ ಮೊತ್ತವನ್ನು ನೀಡಬೇಕು. ಜತೆಗೆ ಅಕ್ಷರ ದಾಸೋಹ ಸಿಬಂದಿಯನ್ನು ಖಾಯಂಗೊಳಿಸಬೇಕು ಎಂಬ ಆಗ್ರಹದ ಜತೆಗೆ ಮನವಿಯನ್ನೂ ನೀಡುತ್ತಿವೆ.
ದ.ಕ. 178, ಉಡುಪಿ 76 ಮಂದಿ ಸಂತ್ರಸ್ತರು
ಸರಕಾರಿ, ಅನುದಾನಿತ ಶಾಲೆಗಳು ಸೇರಿ ದ.ಕ. ಜಿಲ್ಲೆಯಲ್ಲಿ 3,213 ಮಂದಿ ಅಡುಗೆ ಸಿಬಂದಿ ಇದ್ದು, ಆದೇಶದ ಪ್ರಕಾರ 178 ಮಂದಿ ಮನೆಗೆ ತೆರಳಬೇಕಿದೆ. ಉಡುಪಿ ಜಿಲ್ಲೆಯ ಒಟ್ಟು 1,866 ಮಂದಿಯಲ್ಲಿ 76 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಸರಕಾರದ ಆದೇಶದ ಪ್ರಕಾರ ಕಳೆದ ಮಾರ್ಚ್ 31ಕ್ಕೆ 60 ವರ್ಷ ತುಂಬಿದವರನ್ನು ಬಿಡುಗಡೆಗೊಳಿಸಬೇಕಿದೆ.
ಮಂಗಳೂರು 48 ಬಂಟ್ವಾಳ 50
ಬೆಳ್ತಂಗಡಿ 37 ಪುತ್ತೂರು 30
ಸುಳ್ಯ 13 ಕಾರ್ಕಳ 56
ಉಡುಪಿ 12 ಕುಂದಾಪುರ 8
Related Articles
ಹಿಂದೆ 60 ದಾಟಿದವರನ್ನು ರಿಲೀವ್ ಮಾಡಲಾಗಿದೆಯೇ ಎಂಬ ಮಾಹಿತಿ ಇಲ್ಲ. ಕಳೆದ 2 ವರ್ಷಗಳಲ್ಲಿ ಮಾಡಿರಲಿಲ್ಲ. ಕಳೆದ ಮಾರ್ಚ್ 31ಕ್ಕೆ 60 ವರ್ಷ ದಾಟಿದವರನ್ನು ರಿಲೀವ್ ಮಾಡುವಂತೆ ಆದೇಶ ಬಂದಿದ್ದು, ಮುಂದೆ ಯಾವಾಗ ಸಿಬಂದಿ 60 ವರ್ಷ ಆಗುತ್ತದೆಯೋ ಆಗ ರಿಲೀವ್ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಇಲಾಖೆಯ ಆಯುಕ್ತರ ಆದೇಶದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ.
– ಉಷಾ / ವಿವೇಕ್ ಗಾಂವ್ಕರ್ ಶಿಕ್ಷಣಾಧಿಕಾರಿ (ಅಕ್ಷರ ದಾಸೋಹ), ದ.ಕ./ಉಡುಪಿ ಜಿಲ್ಲೆ
– ಕಿರಣ್ ಸರಪಾಡಿ