Advertisement

ಉಡುಪಿ, ದ.ಕ: ವಿವೇಕದಡಿ 463 ಕೊಠಡಿ; ಸರಕಾರಿ ಶಾಲೆ ಕೊಠಡಿ ನಿರ್ಮಾಣ ಯೋಜನೆ

12:45 AM Nov 16, 2022 | Team Udayavani |

ಉಡುಪಿ: ರಾಜ್ಯ ಸರಕಾರ “ವಿವೇಕ’ ಯೋಜನೆಯಡಿ ಸರಕಾರಿ ಶಾಲೆಗಳ ಕೊಠಡಿ ನಿರ್ಮಾಣ ಪ್ರಕ್ರಿಯೆ ಆರಂಭಿಸಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಯೋಜನೆಯಡಿ 463 ಹೊಸ ಕೊಠಡಿಗಳು ನಿರ್ಮಾಣವಾಗಲಿವೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಜನೆಗೆ ಚಾಲನೆ ನೀಡಿದ್ದಾರೆ. ಅದರಂತೆ ಉಭಯ ಜಿಲ್ಲೆಗಳಲ್ಲೂ ಶಂಕುಸ್ಥಾಪನೆ ಪ್ರಕ್ರಿಯೆ ಅಲ್ಲಲ್ಲಿ ನೆರವೇರಲಿದೆ. ಎಲ್ಲ ಸರಕಾರಿ ಶಾಲೆಗಳ ಎಸ್‌ಡಿಎಂಸಿಗಳ ಗೌರವಾಧ್ಯಕ್ಷರಾಗಿ ಸ್ಥಳೀಯ ಶಾಸಕರೇ ಇರುವುದರಿಂದ ಅವರ ಸಮ್ಮುಖದಲ್ಲೇ ಶಂಕುಸ್ಥಾಪನೆ ನಡೆಯಲಿದೆ.

ಪ್ರಾಥಮಿಕ ಶಾಲೆಯ ಒಂದು ಕೊಠಡಿ ನಿರ್ಮಾಣಕ್ಕೆ 13.90 ಲಕ್ಷ ರೂ. ಮತ್ತು ಪ್ರೌಢಶಾಲೆಯ ಒಂದು ಕೊಠಡಿ ನಿರ್ಮಾಣಕ್ಕೆ 16.40 ಲಕ್ಷ ರೂ. ಅಗತ್ಯವಿದೆ ಎಂಬುದನ್ನು ಕ್ರಿಯಾಯೋಜನೆಯಲ್ಲಿ ನಮೂದಿಸಲಾಗಿದೆ.

ಅದರಂತೆಯೇ ಅನುದಾನವೂ ಬಿಡುಗಡೆ ಯಾಗುವ ಸಾಧ್ಯತೆ ಇದೆ. ಉಡುಪಿ ಜಿಲ್ಲೆಯಲ್ಲಿ 188 ಶಾಲಾ ಕೊಠಡಿ ನಿರ್ಮಾಣಕ್ಕೆ ಸುಮಾರು 25 ಕೋ.ರೂ. ಹಾಗೂ ದ. ಕನ್ನಡದಲ್ಲಿ 275 ಕೊಠಡಿ ನಿರ್ಮಾಣಕ್ಕೆ 39.32 ಕೋ.ರೂ. ಅಗತ್ಯವಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಏಕ ಕೊಠಡಿಗಳೇ ಹೆಚ್ಚು
ಮಳೆಯಿಂದ ಶಿಥಿಲಗೊಂಡಿರುವ ಕೊಠಡಿಗಳ ಸಹಿತ ದುರಸ್ತಿಯಲ್ಲಿದ್ದ ಕೊಠಡಿಗಳ ಪಟ್ಟಿಯನ್ನು ಇಲಾಖೆಯಿಂದಲೇ ಪಡೆಯಲಾಗಿತ್ತು.

Advertisement

ಅದರಂತೆ ಎಲ್ಲ ಶಾಲೆಗಳು ಪಟ್ಟಿಯನ್ನು ಬಿಇಒ ಮೂಲಕ ಇಲಾಖೆಗೆ ಸಲ್ಲಿಸಿದ್ದವು. ಬಹುತೇಕ ಶಾಲೆಗಳಿಗೆ ಏಕಕೊಠಡಿ ಮಂಜೂರು ಮಾಡಲಾಗಿದೆ. ಸದ್ಯ ಶಾಲೆಯಲ್ಲಿ ಇರುವ ಮಕ್ಕಳ ಸಂಖ್ಯೆ, ಖಾಯಂ ಶಿಕ್ಷಕರ ಸಂಖ್ಯೆ ಮತ್ತು ಕೊಠಡಿಯ ಲಭ್ಯತೆಯನ್ನು ಮಾನದಂಡವಾಗಿ ಇರಿಸಿಕೊಂಡು ಬಹುತೇಕ ಶಾಲೆಗಳಿಗೆ ಒಂದೊಂದು ಕೊಠಡಿ ಹಂಚಿಕೆ ಮಾಡಲಾಗಿದೆ. ಎರಡು- ಮೂರು ಕೊಠಡಿಗಳನ್ನು ಪಡೆದುಕೊಂಡಿರುವ ಶಾಲೆಗಳೂ ಇವೆ.

ತುರ್ತು ಅಗತ್ಯವಿರುವ ಶಾಲೆಗಳಿಗೆ ಕೊಠಡಿಯನ್ನು ಇಲಾಖೆಯಿಂದ ಮಂಜೂರು ಮಾಡಲಾಗಿದೆ. ಉಳಿದಂತೆ ಬಹುತೇಕ ಎಲ್ಲ ಶಾಲೆಗಳಿಗೂ ಕೊಠಡಿ ಹಂಚಿಕೆಯಲ್ಲಿ ಸ್ಥಳೀಯ ಶಾಸಕರ ಪಾತ್ರ ಪ್ರಮುಖವಾಗಿದೆ. ತಮ್ಮ ಕ್ಷೇತ್ರ ವ್ಯಾಪ್ತಿಯ ಎಲ್ಲ ಶಾಲೆಗಳ ಮಾಹಿತಿಯೂ ಶಾಸಕರಿಗೆ ಇರುವುದರಿಂದ, ಸ್ಥಳೀಯ ಜನರ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊಠಡಿ ಹಂಚಿಕೆ ಪ್ರಕ್ರಿಯೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಜಿ.ಪಂ.ನಿಂದಲೂ ಕೊಠಡಿ ನಿರ್ಮಾಣ
ವಿವೇಕ ಯೋಜನೆಯಡಿ ವಿಶೇಷವೆಂದರೆ ಐದು ಕೊಠಡಿಗಳ ನಿರ್ಮಾಣಕ್ಕೆ ಶಾಲೆ ಆಯ್ಕೆ ಪ್ರಕ್ರಿಯೆಯನ್ನು ಜಿ.ಪಂ. ಸಿಇಒ ಅವರಿಗೆ ನೀಡಲಾಗಿದೆ. ಅಂದರೆ ಜಿ.ಪಂ. ಸಿಇಒಗಳು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಕೊಠಡಿ ತುರ್ತು ಅಗತ್ಯವಿರುವ ಐದು ಶಾಲೆಗಳಿಗೆ ತಲಾ ಒಂದು ಕೊಠಡಿ ಹಂಚಿಕೆ ಮಾಡಲಿದ್ದಾರೆ.

ವಿ.ಸಭಾ ಕ್ಷೇತ್ರವಾರು ಕೊಠಡಿ ಮಾಹಿತಿ
ಉಡುಪಿಗೆ 40, ಕಾಪು, ಕುಂದಾಪುರ, ಕಾರ್ಕಳಕ್ಕೆ ತಲಾ 35 ಹಾಗೂ ಬೈಂದೂರಿಗೆ 38 ಮತ್ತು ಜಿ.ಪಂ. ಸಿಇಒ ವಿವೇಚನೆಗೆ 5 ಸೇರಿದಂತೆ 188 ಶಾಲಾ ಕೊಠಡಿ ಮಂಜೂರು ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮಂಗಳೂರು, ಸುಳ್ಯ, ಮೂಲ್ಕಿ-ಮೂಡುಬಿದಿರೆ ಕ್ಷೇತ್ರಗಳಲ್ಲಿ 7 ಕ್ಷೇತ್ರಕ್ಕೆ ತಲಾ 35 ಹಾಗೂ ಒಂದು ಕ್ಷೇತ್ರಕ್ಕೆ 30 ಹಾಗೂ ಜಿ.ಪಂ. ಸಿಇಒ ವಿವೇಚನೆಗೆ 5 ಸೇರಿ 275 ಶಾಲಾ ಕೊಠಡಿ ಮಂಜೂರು ಮಾಡಲಾಗಿದೆ.

“ವಿವೇಕ’ ಯೋಜನೆಯಡಿ ವಿಧಾನಸಭಾ ಕ್ಷೇತ್ರವಾರು ಶಾಲಾ ಕೊಠಡಿಗಳು ಮಂಜೂರಾಗಿವೆ. ಇದರಲ್ಲಿ ಏಕಕೊಠಡಿ ಮತ್ತು ಅದಕ್ಕಿಂತ ಹೆಚ್ಚಿನ ಕೊಠಡಿಗಳು ಹೊಂದಿರುವ ಶಾಲೆಗಳು ಇವೆ.
– ಎನ್‌.ಕೆ. ಶಿವರಾಜ್‌, ಕೆ. ಸುಧಾಕರ್‌
ಡಿಡಿಪಿಐ, ಉಡುಪಿ, ದಕ್ಷಿಣ ಕನ್ನಡ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next