Advertisement

ಸೋರುತಿಹುದು ಶಾಲೆ ಮಾಳಿಗೆ-ಸರಕಾರಿ ಕಟ್ಟಡ

05:16 PM Jul 24, 2022 | Team Udayavani |

ಹಾವೇರಿ: ಜಿಲ್ಲಾದ್ಯಂತ ಕಳೆದ ವಾರ ನಿರಂತರವಾಗಿ ಸುರಿದ ಮಳೆಯಿಂದ ಸರ್ಕಾರಿ ಶಾಲೆಗಳು, ಅಂಗನವಾಡಿ ಕಟ್ಟಡಗಳು ಹಾಗೂ ಸರ್ಕಾರಿ ಕಟ್ಟಡಗಳು ಸೇರಿದಂತೆ ಒಟ್ಟು 1141 ಕಟ್ಟಡಗಳು ಹಾನಿಗೀಡಾಗಿ ದುರಸ್ತಿ ಹಂತಕ್ಕೆ ತಲುಪಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

Advertisement

ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಅತಿಯಾದ ಮಳೆಯಿಂದ ಹೆಚ್ಚಾಗಿ ಸರ್ಕಾರಿ ಶಾಲಾ ಕಟ್ಟಡಗಳಿಗೆ ಹಾನಿ ಸಂಭವಿಸಿದೆ. ನಿರಂತರ ಮಳೆಯಿಂದಾಗಿ ಶಾಲೆಯ ಮೇಲ್ಛಾವಣಿಗಳು ಸೋರುತ್ತಿರುವುದು, ಗೋಡೆಗಳು ಬಿರುಕು ಬಿಟ್ಟಿರುವುದು, ಕೊಠಡಿಗಳು ಕುಸಿದು ಬಿದ್ದಿರುವುದು, ಕಟ್ಟಡದ ಮೇಲ್ಛಾವಣಿಯ ಸಿಮೆಂಟ್‌ ಉದುರುತ್ತಿರುವುದು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸರ್ಕಾರಿ ಶಾಲಾ ಕೊಠಡಿಗಳು ತುತ್ತಾಗಿವೆ. ಇಂತಹ ಶಾಲೆಗಳ ಬಗ್ಗೆ ಸರ್ಕಾರ, ಶಿಕ್ಷಣ ಇಲಾಖೆ ಹೆಚ್ಚು ಗಮನ ನೀಡಿ ಕೂಡಲೇ ಕಟ್ಟಡಗಳನ್ನು ದುರಸ್ತಿಗೊಳಿಸುವ ಮೂಲಕ ಪಾಲಕರು ಮತ್ತು ಮಕ್ಕಳ ಆತಂಕ ದೂರ ಮಾಡಲು ಕ್ರಮ ಕೈಗೊಳ್ಳಬೇಕಿದೆ.

1104 ಶಾಲಾ ಕೊಠಡಿಗಳಿಗೆ ಹಾನಿ: ಜಿಲ್ಲೆಯಲ್ಲಿ 1160 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, 141 ಪ್ರೌಢಶಾಲೆಗಳಿವೆ. ಕಳೆದ ವಾರ ಸುರಿದ ಮಳೆಯಿಂದಾಗಿ ಜಿಲ್ಲೆಯ ಹಾವೇರಿ ತಾಲೂಕಿನ 70 ಶಾಲೆಗಳ 230 ಕೊಠಡಿ, ರಾಣಿಬೆನ್ನೂರ ತಾಲೂಕಿನ 72 ಶಾಲೆಗಳ 140 ಕೊಠಡಿ, ಬ್ಯಾಡಗಿ ತಾಲೂಕಿನ 79 ಶಾಲೆಗಳ 154 ಕೊಠಡಿ, ಹಿರೇಕೆರೂರ ತಾಲೂಕಿನ 67 ಶಾಲೆಗಳ 152 ಕೊಠಡಿ, ರಟ್ಟಿಹಳ್ಳಿ ತಾಲೂಕಿನ 70 ಶಾಲೆಗಳ 174 ಕೊಠಡಿ, ಸವಣೂರ ತಾಲೂಕಿನ 75 ಶಾಲೆಗಳ 172 ಕೊಠಡಿ, ಶಿಗ್ಗಾವಿ ತಾಲೂಕಿನ 20 ಶಾಲೆಗಳ 40 ಕೊಠಡಿ ಹಾಗೂ ಹಾನಗಲ್ಲ ತಾಲೂಕಿನ 28 ಶಾಲೆಗಳ 42 ಕೊಠಡಿಗಳು ಸೇರಿದಂತೆ ಜಿಲ್ಲೆಯಲ್ಲಿ 1104 ಕೊಠಡಿಗಳು ಹಾನಿಗೊಂಡಿದ್ದು, ಸುಮಾರು 22 ಕೋಟಿ ರೂ. ನಷ್ಟ ಸಂಭವಿಸಿದೆ. ಈ ಮೊದಲೇ ಕೊಠಡಿಗಳ ಕೊರತೆ ಎದುರಿಸುತ್ತಿದ್ದ ಶಿಕ್ಷಣ ಇಲಾಖೆಗೆ ಮಳೆಯಿಂದಾದ ಹಾನಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

38 ಅಂಗನವಾಡಿ ಕಟ್ಟಡಗಳಿಗೆ ಹಾನಿ: ಇನ್ನು ಜಿಲ್ಲೆಯಲ್ಲಿ 38 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. ಹಾವೇರಿ ತಾಲೂಕಿನಲ್ಲಿ 8, ಬ್ಯಾಡಗಿ 12, ಹಿರೇಕೆರೂರು 10, ರಟ್ಟಿಹಳ್ಳಿ 6, ಸವಣೂರ ಹಾಗೂ ಶಿಗ್ಗಾವಿ ತಾಲೂಕಿನಲ್ಲಿ ತಲಾ 1 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದ್ದು, ಸುಮಾರು 66.80 ಲಕ್ಷ ರೂ. ನಷ್ಟ ಅಂದಾಜು ಮಾಡಲಾಗಿದೆ.

ಇನ್ನು ಆರೋಗ್ಯ, ಕಂದಾಯ, ಪಿಆರ್‌ಇಡಿ, ಪಿಡಬ್ಲ್ಯೂಡಿ ಇಲಾಖೆ ವ್ಯಾಪ್ತಿಯಲ್ಲಿ ಹಲವು ಸರ್ಕಾರಿ ಕಟ್ಟಡಗಳು ಬರುತ್ತವೆ. ಕೆಲವೊಂದು ಅಲ್ಪ ದುರಸ್ತಿಯಾಗಿದ್ದು, ಕೆಲವೊಂದು ಕಟ್ಟಡಗಳು ನಿರಂತರ ಮಳೆಯಿಂದಾಗಿ ಸೋರುವ ಹಂತಕ್ಕೆ ತಲುಪಿವೆ. ಅಂತಹ ಕಟ್ಟಡಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿ ದುರಸ್ತಿಗೊಳಿಸುವ ಕಾರ್ಯವಾಗಬೇಕಿದೆ.

Advertisement

ಪರ್ಯಾಯ ವ್ಯವಸ್ಥೆ: ನಿರಂತರ ಮಳೆಯಿಂದಾಗಿ ಕೊಠಡಿಗಳು ಹಾನಿಗೊಂಡಿದ್ದು, ಜಿಲ್ಲೆಯಲ್ಲಿ ಕಂಡುಬಂದ ಇಂತಹ ಕೊಠಡಿಗಳನ್ನು ಪಟ್ಟಿ ಮಾಡಿರುವ ಶಿಕ್ಷಣ ಇಲಾಖೆ, ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ಮಕ್ಕಳನ್ನು ಕೂರಿಸದೇ ಪರ್ಯಾಯ ಕೊಠಡಿಗಳಲ್ಲಿ ವ್ಯವಸ್ಥೆ ಕಲ್ಪಿಸಿ ಶಿಕ್ಷಣ ನೀಡಲಾಗುತ್ತಿದೆ. ಆದರೆ, ಹಲವು ಶಾಲೆಗಳಲ್ಲಿ ಮಕ್ಕಳು ಸೋರುವ ಕೊಠಡಿಗಳಲ್ಲಿಯೇ ಶಿಕ್ಷಣ ಪಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಒಟ್ಟಿನಲ್ಲಿ ಇನ್ನಾದರೂ ಜಿಲ್ಲಾಡಳಿತ ಜಿಲ್ಲೆಯಲ್ಲಿನ ಸರ್ಕಾರಿ ಕಟ್ಟಡಗಳ ದುರಸ್ತಿ, ಶಿಥಿಲಾವಸ್ಥೆಯ ಕಟ್ಟಡಗಳ ಬಗ್ಗೆ ಗಮನ ಹರಿಸಿ ಅನಾಹುತಗಳು ನಡೆಯುವ ಮುನ್ನ ಎಚ್ಚೆತ್ತುಕೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

10 ಕೋಟಿ ಬಿಡುಗಡೆಗೆ ಪ್ರಸ್ತಾವನೆ

ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದ ಹಾನಿಗಿಡಾದ 1104 ಕೊಠಡಿಗಳ ದುರಸ್ತಿಗೆ ವಿಪತ್ತು ಪರಿಹಾರ ನಿಧಿ ಯಿಂದ 9.62 ಕೋಟಿ ರೂ. ಬಿಡುಗಡೆಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿಥಿಲಗೊಂಡ ಕೊಠಡಿಗಳಿಂದ ಮಕ್ಕಳನ್ನು ಲಭ್ಯವಿರುವ ಸುಸಜ್ಜಿತ ಕೊಠಡಿಗಳಿಗೆ ಸ್ಥಳಾಂತರಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡುವಂತೆ ಎಲ್ಲ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶಾಲಾ ಕೊಠಡಿ ಕೊರತೆ ಇರುವ ಕಡೆ ಸರ್ಕಾರಿ ಕಟ್ಟಡ, ಪಂಚಾಯಿತಿ ಕಟ್ಟಡಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಡಿಡಿಪಿಐ ಬಿ.ಎಸ್‌.ಜಗದೀಶ್ವರ ತಿಳಿಸಿದರು.

ಜಿಲ್ಲೆಯಲ್ಲಿ ಕಳೆದ ವಾರ ಸುರಿದ ನಿರಂತರ ಮಳೆಯಿಂದ ಜಿಲ್ಲೆಯ ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಇಂತಹ 1141 ಕಟ್ಟಡಗಳನ್ನು ಗುರುತಿಸಿದ್ದು, ಸಂಬಂಧಪಟ್ಟ ಇಲಾಖೆಗಳು ಕಟ್ಟಡಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಿವೆ. ಹಾನಿಗೊಂಡ ಕಟ್ಟಡಗಳ ದುರಸ್ತಿಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು.  –ಡಾ|ಎನ್‌.ತಿಪ್ಪೇಸ್ವಾಮಿ, ಅಪರ ಜಿಲ್ಲಾಧಿಕಾರಿ

-ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next