ಕುಂದಾಪುರ: ಕಳೆದ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡು 8 ತಿಂಗಳು ಕಳೆದರೂ ಈ ಸಾಲಿನ ಬಿಎಎಂಎಸ್ (ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಮತ್ತು ಸರ್ಜರಿ ಕೋರ್ಸ್) ಪದವಿ ಕಾಲೇಜುಗಳಿಗೆ ಇನ್ನೂ ಪ್ರವೇಶವೇ ಆರಂಭವಾಗಿಲ್ಲ.
ರಾಜ್ಯ ಸರಕಾರ ಹಾಗೂ ಖಾಸಗಿ ಆಯುಷ್ ಕಾಲೇಜುಗಳ ನಡುವಿನ ಬಿಕ್ಕಟ್ಟಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಪಿಯುಸಿ ಫಲಿತಾಂಶ ಪ್ರಕಟಗೊಂಡ ಬಳಿಕ ಬಿಎಎಂಎಸ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾವಿರಾರು ವಿದ್ಯಾರ್ಥಿಗಳು ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆದಿದ್ದರು.
ನೀಟ್ ಫಲಿತಾಂಶ ಸೆಪ್ಟಂಬರ್‌ನಲ್ಲಿ ಪ್ರಕಟವಾಗಿತ್ತು. ಬಳಿಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರವೇಶಾತಿ ಕೌನ್ಸೆಲಿಂಗ್ ಆರಂಭಿಸಿತ್ತು. ಈ ಮಧ್ಯೆ ಸೀಟು ಹಂಚಿಕೆ, ಶುಲ್ಕ ಹೆಚ್ಚಳ ಬಗ್ಗೆ ಖಾಸಗಿ ಆಯುಷ್ ಕಾಲೇಜುಗಳು ಹಾಗೂ ರಾಜ್ಯ ಸರಕಾರದ ಮಧ್ಯೆ ಸಹಮತ ಏರ್ಪಡಲಿಲ್ಲ. ಹಾಗಾಗಿ ಕಾಲೇಜುಗಳು ಹೈಕೋರ್ಟ್ ಮೆಟ್ಟಿಲೇರಿವೆ.
ಒಂದೇ ದಿನಕ್ಕೆ ತಡೆ
ಕೆಇಎ ಜ. 5 ರಂದು ಕೌನ್ಸೆಲಿಂಗ್ ಕರೆದಿತ್ತು. ವಿವಾದ ತಲೆದೋರಿದ ಹಿನ್ನೆಲೆಯಲ್ಲಿ ಜ. 6 ರಂದು ಹೈಕೋರ್ಟ್ ಸೀಟು ಹಂಚಿಕೆ ಪ್ರಕ್ರಿಯೆಗೆ ತಡೆ ನೀಡಿದ ಕಾರಣ ಕೌನ್ಸೆಲಿಂಗ್ ಅನ್ನು ಮುಂದೂಡಿರುವುದಾಗಿ ಕೆಇಎ ತಿಳಿಸಿದೆ.
ಎಂಜಿನಿಯರಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್‌ಗಳು ಈಗಾಗಲೇ ತರಗತಿ ಆರಂಭಿಸಿ ಮೊದಲ ಸೆಮಿಸ್ಟರ್ ಪರೀಕ್ಷೆಗೆ ವಿದ್ಯಾರ್ಥಿಗಳು ಸಿದ್ಧರಾಗುತ್ತಿದ್ದಾರೆ. ಆದರೆ ಬಿಎಎಂಎಸ್ ಇನ್ನೂ ಆರಂಭವಾಗದಿರುವುದು ವಿದ್ಯಾರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಒಟ್ಟು 5.5 ವರ್ಷದ ಕೋರ್ಸ್ ಇದಾಗಿದ್ದು, ಸುಮಾರು ಒಂದು ವರ್ಷ ವ್ಯರ್ಥವಾಗುವ ಸಂಭವಿಸಿದೆ.
Related Articles
100ಕ್ಕೂ ಮಿಕ್ಕಿ ಕಾಲೇಜು
ರಾಜ್ಯದಲ್ಲಿ 7 ಸರಕಾರಿ, 2 ಅನುದಾನಿತ, 100ಕ್ಕೂ ಮಿಕ್ಕಿ ಖಾಸಗಿ ಬಿಎಎಂಎಸ್, ಬಿಎಚ್‌ಎಂಎಸ್, ಬಿಯುಎಂಎಸ್ ಕಾಲೇಜುಗಳಿವೆ. ಈ ಪೈಕಿ ಉಡುಪಿಯಲ್ಲಿ 3, ದ.ಕ. ಜಿಲ್ಲೆಯಲ್ಲಿ 7 ಖಾಸಗಿ ಆಯುರ್ವೇದ, ನ್ಯಾಚುರೋಪತಿ, ಹೋಮಿಯೋಪತಿ ಕಾಲೇಜುಗಳಿವೆ. ಬೆಂಗ ಳೂರು, ಮೈಸೂರು ಹಾಗೂ ಬಳ್ಳಾರಿಯಲ್ಲಿ ಮಾತ್ರ ಸರಕಾರಿ ಆಯುಷ್ ಕಾಲೇಜುಗಳಿವೆ. ಕರಾವಳಿ ಜಿಲ್ಲೆಗಳಲ್ಲಿಯೂ ಪ್ರಾಚೀನ ಭಾರತೀಯ ವೈದ್ಯ ಪದ್ಧತಿಯಾದ ಆಯುರ್ವೇದ ಶಿಕ್ಷಣ ಕಲಿಯಲು ಸಾಕಷ್ಟು ವಿದ್ಯಾರ್ಥಿಗಳು ಆಸಕ್ತಿ ತೋರಿದ್ದು, ರಾಜ್ಯವ್ಯಾಪಿ ವರ್ಷಕ್ಕೆ 7ರಿಂದ 8 ಸಾವಿರ ಮಂದಿ ಮಕ್ಕಳು ಆಯುಷ್ ಪದವಿ ಕಾಲೇಜುಗಳಿಗೆ ದಾಖಲಾತಿ ಪಡೆಯುತ್ತಾರೆ.
- ಪ್ರಶಾಂತ್ ಪಾದೆ