ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರನ್ನು ತಲುಪುವುದಕ್ಕೆ ಎಲ್ಲ ಮಾರ್ಗಗಳನ್ನೂ ತೆರೆಯುತ್ತಿರುವ ರಾಜ್ಯ ಸರ್ಕಾರ ಈಗ ವಿವಿಧ ಇಲಾಖೆಗಳ ಸೌಲಭ್ಯ ಪಡೆದ ಫಲಾನುಭವಿಗಳ ಸಮಾವೇಶಕ್ಕೆ ಮುಂದಾಗಿದೆ. ಮಾರ್ಚ್ 4ರಿಂದ 20ರವರೆಗೆ ಜಿಲ್ಲಾವಾರು ಸಮಾವೇಶ ನಡೆಸುವುದಕ್ಕೆ ಸಿದ್ಧತೆ ನಡೆದಿದೆ.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಈ ವಿಷಯ ತಿಳಿಸಿದ್ದಾರೆ.
ಮಾ.4ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ.
ಸಮಾವೇಶದಲ್ಲಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಾಗುತ್ತದೆ. ಯೋಜನೆಯಲ್ಲಿ ಯಾವುದಾದರೂ ಸಮಸ್ಯೆ ಇದ್ದಲ್ಲಿ ಜಿಲ್ಲಾ ಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಪ್ರಯತ್ನ ನಡೆಸಲಾಗುತ್ತದೆ. ಹಾವೇರಿಯಲ್ಲಿ ಸುಮಾರು 50 ಸಾವಿರ ಜನರ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಭಾಗವಹಿಸುವರು ಎಂದು ಹೇಳಿದರು.
Related Articles
“ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್’ ಎಂಬುದು ನಮ್ಮ ಆಡಳಿತದ ಮೂಲ ಮಂತ್ರ. ಇದನ್ನು ನಾವು ಮಾತನಾಡಿ ಸುಮ್ಮನಾಗಲಿಲ್ಲ. ಅದನ್ನು ಕಾರ್ಯರೂಪಕ್ಕೆ ಇಳಿಸಿದ್ದೇವೆ. ಪ್ರತಿ ಮನೆಯಲ್ಲೂ ಒಂದಿಲ್ಲೊಂದು ಫಲಾನುಭವಿಗಳು ಇದ್ದಾರೆ. ಸರಕಾರದ ಯೋಜನೆಗಳ ಪ್ರಯೋಜನ ಪಡೆದ ಈ ಎಲ್ಲಾ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಅವರೊಡನೆ ಯೋಜನೆಗಳು ತಲುಪಿರುವುದನ್ನು ಖಾತ್ರಿ ಪಡಿಸಬೇಕು ಹಾಗೂ ಈ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಮತ್ತು ಈ ಫಲಾನುಭವಿಗಳೊಡನೆ ಸಮಾಲೋಚಿಸಿ ಕಾರ್ಯಯೋಜನೆ ರೂಪಿಸಬೇಕೆಂಬುದು ಸಿಎಂ ಬೊಮ್ಮಾಯಿ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದರು.
ಪ್ರಧಾನಮಂತ್ರಿ ಆವಾಸ್ ಯೋಜನೆ, ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ, ಪಿಎಂ ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ, ಲಂಬಾಣಿ ಜನಾಂಗದವರಿಗೆ ನೀಡಿದ ಹಕ್ಕು ಪತ್ರ ವಿತರಣೆ, ನೇಕಾರ, ಮೀನುಗಾರರಿಗೆ ಸಮ್ಮಾನ್ ಯೋಜನೆ, ಮಾತೃ ವಂದನ ಯೋಜನೆ, ಭಾಗ್ಯಲಕ್ಷಿ¾/ಸುಕನ್ಯಾ ಸಮೃದ್ಧಿ, ಯಶಸ್ವಿನಿ ಯೋಜನೆಗಳ ಲಾಭ ನೇರವಾಗಿ ಜನರಿಗೆ ತಲುಪುವ ಜೊತೆಗೆ, ಜನಸೇವಕ, ಗ್ರಾಮ ಒನ್‌ನಂತಹ ಯೋಜನೆಗಳು, ಭೂ ಪರಿವರ್ತನೆ ವಿಧೇಯಕಕ್ಕೆ ತಿದ್ದುಪಡಿ ತಂದಿರುವುದು ಕೋಟ್ಯಂತರ ಜನರಿಗೆ ಅನುಕೂಲ ಕಲ್ಪಿಸಿದೆ ಎಂದರು.
ಸಮಾವೇಶ ಎಲ್ಲೆಲ್ಲಿ ?
ಮಾರ್ಚ್ 4 : ಚಿತ್ರದುರ್ಗ
ಮಾ.5 : ದಾವಣಗೆರೆ, ಉತ್ತರ ಕನ್ನಡ, ತುಮಕೂರು, ಶಿವಮೊಗ್ಗ .
ಮಾ.6 ವಿಜಯನಗರ, ಬೆಂಗಳೂರು ಗ್ರಾಮಾಂತರ, ಉಡುಪಿ.
ಮಾ.7 : ಬಳ್ಳಾರಿ, ಗದಗ, ಮೈಸೂರು.
ಮಾ.9: ಕೊಪ್ಪಳ, ಬಾಗಲಕೋಟೆ.
ಮಾ.10 ಹಾವೇರಿ, ಬೆಳಗಾವಿ.
ಮಾ.11 : ಮಂಡ್ಯ, ರಾಮನಗರ.
ಮಾ.12 : ಚಿಕ್ಕಮಗಳೂರು, ಚಾಮರಾಜನಗರ.
ಮಾ.13 : ಹಾಸನ, ರಾಯಚೂರು.
ಮಾ. 14 : ಯಾದಗಿರಿ, ವಿಜಯಪುರ.
ಮಾ.15 : ಕಲಬುರಗಿ, ಕೊಡಗು, ಕೋಲಾರ.
ಮಾ. 16 : ಬೀದರ್, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ.
ಮಾ.18 : ಬೆಂಗಳೂರು ನಗರ.
ಮಾ.20 : ಧಾರವಾಡ.
ಎಕ್ಸ್‌ಪ್ರೆಸ್ ಹೈವೆ ಉದ್ಘಾಟನೆಗೆ ಮೋದಿ
ಮಾ.11ರಂದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆ ಉದ್ಘಾಟನೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು. ಅದೇ ದಿನ ಮಂಡ್ಯದಲ್ಲಿ ಫಲಾನುಭವಿಗಳ ಸಮಾವೇಶ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೂ ಬರುವಂತೆ ಪ್ರಧಾನಿಯವರಿಗೆ ಆಹ್ವಾನ ನೀಡಿದ್ದೇವೆ. ಎಕ್ಸ್‌ಪ್ರೆಸ್ ಹೈವೇ ಉದ್ಘಾಟನೆಗೆ ಬರುವುದಕ್ಕೆ ಮೋದಿ ಒಪ್ಪಿಕೊಂಡಿದ್ದಾರೆ. ಸರ್ವಿಸ್ ರಸ್ತೆ ಆಗುವವರೆಗೆ ಟೋಲ್ ಬೇಡ ಎಂದು ಈಗಾಗಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸುಂಕ ಪ್ರಮಾಣ ಕಡಿಮೆ ಮಾಡುವ ವಿಚಾರದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಕೇಂದ್ರ ಸರ್ಕಾರದ ಜತೆ ಚರ್ಚೆ ನಡೆಸುತ್ತಿದ್ದಾರೆ ಎಂದು ವಿವರಿಸಿದರು.
ಏ.1ರಿಂದ 5 ಲಕ್ಷ ರೂ. ಶೂನ್ಯ ಬಡ್ಡಿ ಸಾಲ
ಏ.1 ರಿಂದ ಅನ್ವಯವಾಗುವಂತೆ ಶೂನ್ಯ ಬಡ್ಡಿ ದರದಲ್ಲಿ ಐದು ಲಕ್ಷ ರೂ. ಸಾಲ ನೀಡುವ ಯೋಜನೆ ಪ್ರಾರಂಭಗೊಳ್ಳಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಬಜೆಟ್ ಘೋಷಣೆಯನ್ನು ಅತ್ಯಂತ ಶೀಘ್ರ ಅನುಷ್ಠಾನಕ್ಕೆ ತರುತ್ತೇವೆ. ಡಿಸಿಸಿ ಬ್ಯಾಂಕ್‌ಗಳ ಮೂಲಕ ಸಾಲ ವಿತರಣೆ ಮಾಡಲಾಗುವುದು. ಈ ಯೋಜನೆಗೆ ಬಜೆಟ್ ನಲ್ಲಿ ಅನುಮತಿ ನೀಡಲಾಗಿದೆ. ಸದ್ಯದಲ್ಲೇ ರಾಜ್ಯಪಾಲರ ಅನುಮತಿ ಸಿಗಲಿದೆ. ಏ.1 ರಿಂದ ಅನ್ವಯವಾಗುವಂತೆ ಈ ಯೋಜನೆ ಜಾರಿ ಮಾಡುತ್ತೇವೆ. ಒಟ್ಟು 33 ಲಕ್ಷ ಜನರಿಗೆ ಇದರ ಸೌಲಭ್ಯ ಸಿಗಲಿದೆ ಎಂದು ಹೇಳಿದರು.