Advertisement

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

12:42 AM Jun 17, 2024 | Team Udayavani |

ಬೆಂಗಳೂರು: ಪೊಲೀಸ್‌ ವರ್ಗಾವಣೆಯಲ್ಲಿ ಹೊಸ ನೀತಿ ಜಾರಿಗೊಳಿಸುವುದಕ್ಕೆ ಗೃಹ ಇಲಾಖೆ ಸಿದ್ಧತೆ ನಡೆಸಿದ್ದು, ಜೀವಮಾನದುದ್ದಕ್ಕೂ ಸೂಕ್ತ ಜಾಗ ಸಿಗದೆ ಪರಿತಪಿಸುತ್ತಿದ್ದ ಪ್ರಾಮಾಣಿಕ ಅಧಿಕಾರಿಗಳ ಕೈ ಹಿಡಿಯಲು ಸರಕಾರ ಮುಂದಾಗಿದೆ. ಹೀಗಾಗಿ 2 ವರ್ಷ ವರ್ಗಾವಣೆ ಮಾಡದಂತೆ ಕಾನೂನು ತಿದ್ದುಪಡಿ ಮಾಡಲು ಚಿಂತಿಸಲಾಗಿದೆ.

Advertisement

ಇನ್‌ಸ್ಪೆಕ್ಟರ್‌ ದರ್ಜೆಯಿಂದ ಮೇಲ್ಪಟ್ಟು ಜಿಲ್ಲಾ ಎಸ್‌ಪಿ ಹಂತದ ಅಧಿಕಾರಿಗಳಿಗೆ ಪ್ರಾಯೋಗಿಕವಾಗಿ ಈ ನಿಯಮ ಅನು ಸರಿಸಲು ಗೃಹ ಇಲಾಖೆ ಮುಂದಾ ಗಿದೆ. ಇದರ ಅನ್ವಯ ಠಾಣೆ, ಉಪವಿಭಾಗ, ಜಿಲ್ಲಾ ಎಸ್‌ಪಿಗೆ ಗರಿಷ್ಠ-ಕನಿಷ್ಠ ಅವಧಿಯನ್ನು 2 ವರ್ಷಕ್ಕೆ ನಿಗದಿ ಮಾಡಲು ನಿರ್ಧರಿಸಲಾಗಿದೆ.

ಆ ಬಳಿಕದ ಎರಡು ವರ್ಷ ನಾನ್‌ ಎಕ್ಸಿಕ್ಯೂಟಿವ್‌ ಹುದ್ದೆಯಲ್ಲಿ ಮುಂದುವರಿಯುವುದನ್ನು ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ.

ಭ್ರಷ್ಟರ ಎತ್ತಂಗಡಿ
ಅಂದರೆ ಎರಡು ವರ್ಷ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಇನ್‌ಸ್ಪೆಕ್ಟರ್‌ ಹಾಗೂ ಉಪ ವಿಭಾಗಾಧಿಕಾರಿ ಮುಂದಿನ ಎರಡು ವರ್ಷ ಮತ್ತೆ ನಿರ್ದಿಷ್ಟ ಸ್ಥಾನ ಬಯಸುವಂತಿಲ್ಲ. ಆದರೆ ಅಶಿಸ್ತು, ಭ್ರಷ್ಟಾಚಾರ, ಕರ್ತವ್ಯಲೋಪದಂಥ ಆರೋಪ ಎದುರಿಸುವ ಅಧಿಕಾರಿಗಳನ್ನು ಯಾವಾಗ ಬೇಕಾದರೂ ಎತ್ತಂಗಡಿ ಮಾಡುವ ಅಧಿಕಾರವನ್ನು ಸರಕಾರವೇ ಇಟ್ಟುಕೊಳ್ಳಲಿದೆ.

ಲಾಬಿ ನಿಯಂತ್ರಣಕ್ಕೆ ಕಡಿವಾಣ ಇಲಾಖೆಗೆ ಸೇರ್ಪಡೆಗೊಂಡ ಅದೆಷ್ಟೋ ಅಧಿಕಾರಿಗಳಿಗೆ ಜೀವಮಾನದಲ್ಲಿ ಒಮ್ಮೆಯೂ ಒಂದು ಠಾಣೆಯಲ್ಲಿ ಸಮರ್ಪಕ ಅವಧಿಗೆ ಕೆಲಸ ಮಾಡಲು ಆಗುತ್ತಿಲ್ಲ. ಇಲಾಖೆಯಲ್ಲಿ ಆಯಕಟ್ಟಿನ ಸ್ಥಾನಕ್ಕಾಗಿ ನಡೆಯುತ್ತಿರುವ ಬೇರೆ ಬೇರೆ ಬಗೆಯ ಲಾಬಿಗಳಿಂದ ಇಂಥ ಸ್ಥಿತಿ ನಿರ್ಮಾಣವಾಗಿದೆ. ಈ ಲಾಬಿ ನಿಯಂತ್ರಿಸಲು ಗೃಹ ಇಲಾಖೆ ಈ ಚಿಂತನೆ ನಡೆಸಿದೆ.

Advertisement

ಸಿಎಂ ಸಕಾರಾತ್ಮಕ ಪ್ರತಿಕ್ರಿಯೆ?
ಈ ವಿಷಯಕ್ಕೆ ಸಂಬಂಧಿಸಿ ಗೃಹ ಸಚಿವ ಡಾ| ಪರಮೇಶ್ವರ ಅವರು ಸಿಎಂ ಸಿದ್ದರಾಮಯ್ಯ ಬಳಿ ಪ್ರಸ್ತಾವನೆ ಸಲ್ಲಿಸಿದ್ದು, ಇಲಾಖಾ ಸುಧಾರಣೆ ದೃಷ್ಟಿಯಿಂದ ಹೊಸ ನೀತಿ ಜಾರಿಗೊಳಿಸುವುದು ಅನಿವಾರ್ಯ ಎಂದು ಪ್ರತಿಪಾದಿಸಿರುವುದಾಗಿ ತಿಳಿದು ಬಂದಿದೆ. ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ಎಲ್ಲ ದೃಷ್ಟಿಕೋನಗಳಿಂದ ಅಧ್ಯಯನ ನಡೆಸಿ ತಿದ್ದುಪಡಿ ಮಸೂದೆಯ ಕರಡು ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಜುಲೈ ಅಧಿವೇಶನದಲ್ಲೇ ಮಂಡನೆ?
ಈ ನೂತನ ವರ್ಗಾವಣೆ ಸಂಬಂದ ಜುಲೈ ತಿಂಗಳಿನಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿಯೇ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಗೃಹ ಇಲಾಖೆ ಸಿದ್ಧತೆ ನಡೆಸಿದೆ. ಸಬ್‌ ಇನ್‌ಸ್ಪೆಕ್ಟರ್‌, ಎಎಸ್‌ಐ, ಹೆಡ್‌ ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌ ಹಂತದ ಸಿಬಂದಿಗೆ ತತ್‌ಕ್ಷಣಕ್ಕೆ ಈ ನಿಯಮ ಅನ್ವಯಿಸದೆ ಇರಲು ತೀರ್ಮಾನಿಸಲಾಗಿದೆ. ಇನ್‌ಸ್ಪೆಕ್ಟರ್‌ ಹಾಗೂ ಮೇಲ್ಮಟ್ಟದ ಅಧಿಕಾರಿಗಳ ಹಂತದಲ್ಲಿ ಇದು ಯಶಸ್ವಿಯಾದರೆ ಇಡೀ ಇಲಾಖೆಗೆ ಅನ್ವಯಿಸುವ ಚಿಂತನೆ ಇದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next