ಬೆಂಗಳೂರು: ಬಲ್ಕ್ ಡೀಸೆಲ್ ಖರೀದಿಯ ಮೇಲೆ ರಾಜ್ಯ ಸಾರಿಗೆ ನಿಗಮಗಳಿಂದ ಹೆಚ್ಚುವರಿಯಾಗಿ 25 ರೂ. ವಸೂಲಿ ಮಾಡುತ್ತಿರುವ ಕೇಂದ್ರ ಸರ್ಕಾರ ಹಗಲು ದರೋಡೆ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ಹಗಲು ದರೋಡೆಯನ್ನು ಕೂಡಲೇ ನಿಲ್ಲಿಸಲು ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದ್ದಾರೆ.
ಇಡೀ ದೇಶದಲ್ಲಿಯೆ ಅತ್ಯುತ್ತಮ ಸರ್ಕಾರಿ ಸಾರಿಗೆ ವ್ಯವಸ್ಥೆಯುಳ್ಳ ರಾಜ್ಯ ಕರ್ನಾಟಕವಾಗಿತ್ತು. 2013 -18 ವರೆಗಿನ ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯ ಸಾರಿಗೆಯ ಜನಸ್ನೇಹಿ ಆಡಳಿತಕ್ಕಾಗಿ ಕೇಂದ್ರ ಸರ್ಕಾರವೇ ಹಲವು ಬಾರಿ ಪ್ರಶಸ್ತಿಗಳನ್ನು ನೀಡಿತ್ತು. ಸುವ್ಯವಸ್ಥೆಯಲ್ಲಿದ್ದ ರಾಜ್ಯದ ಸಾರಿಗೆ ವ್ಯವಸ್ಥೆಗೆ ಬಿಜೆಪಿ ಸರ್ಕಾರ ನಿಧಾನವಾಗಿ ವಿಷ ಕೊಟ್ಟು ಕೊಲ್ಲುತ್ತಿದೆ ಎಂದು ದೂರಿದ್ದಾರೆ.
ರಾಜ್ಯದ ಕೆಎಸ್‌ಆರ್‌ಟಿಸಿಯ 3 ನಿಗಮಗಳು ಹಾಗೂ ಬಿಎಂಟಿಸಿಯಲ್ಲಿ ಸುಮಾರು 26 ಸಾವಿರ ಬಸ್ ಗಳಿವೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ಸುಗಳು ಪ್ರತಿ ದಿನ ಸುಮಾರು 13 ಲಕ್ಷ ಲೀಟರ್ ಡೀಸೆಲ್ ಬಳಸುತ್ತವೆ ಲೀಟರ್ ಮೇಲೆ 25 ರೂ ಹೆಚ್ಚಿಗೆ ಪಾವತಿಸಬೇಕಾಗಿರುವುದರಿಂದ ಪ್ರತಿ ದಿನ 3.25 ಕೋಟಿ ರೂ., ವರ್ಷಕ್ಕೆ 1187 ಕೋಟಿ ರೂ. ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗಿದೆ.
ಸರ್ಕಾರಿ ಬಸ್ಸುಗಳಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ವಿತರಿಸಬೇಕಾದ ಹಾಗೂ ಡೀಸೆಲ್ ಮೇಲೆ ತೆರಿಗೆ ಮನ್ನಾ ಮಾಡಬೇಕಾದ ಮೋದಿ ಮತ್ತು ಬೊಮ್ಮಾಯಿಯವರ ಬಿಜೆಪಿ ಸರ್ಕಾರ ಜನರನ್ನು ಸುಲಿಗೆ ಮಾಡಲು ನಿಂತಿವೆ.
ಸರ್ಕಾರಿ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಇಂಧನಕ್ಕೆ ಸಂಪೂರ್ಣವಾಗಿ ತೆರಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.