Advertisement

ಸರ್ಕಾರಿ ಆದೇಶ, ಸಚಿವರ ಸೂಚನೆಗೂ ಡೋಂಟ್‌ ಕೇರ್‌!

06:35 AM Aug 10, 2017 | |

ಬೆಂಗಳೂರು: “ಆಡಳಿತದಲ್ಲಿ ಕನ್ನಡ ಬಳಸುವಂತೆ ಸ್ವತಃ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು 3 ಬಾರಿ ಲಿಖೀತ
ಸೂಚನೆ ನೀಡಿದ್ದಾರೆ. ಆದಾಗ್ಯೂ ಇಂಗ್ಲಿಷ್‌ನಲ್ಲೇ ಟಿಪ್ಪಣಿ ಬರೆಯುತ್ತಿದ್ದೀರಿ. ಹಾಗಿದ್ದರೆ, ಆದೇಶಗಳಿಗೆ ಕಿಮ್ಮತ್ತು ಇಲ್ಲವೇ? ನಿಮ್ಮ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಹೇಳಿ..’

Advertisement

-ಸಚಿವರ ಸೂಚನೆ ನಂತರವೂ ಇಂಗ್ಲಿಷ್‌ನಲ್ಲೇ ಟಿಪ್ಪಣಿ ಬರೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ
ಕಾರ್ಯದರ್ಶಿ ಉಮಾ ಮಹಾದೇವನ್‌ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡ ರೀತಿ ಇದು. ವಿಕಾಸಸೌಧದಲ್ಲಿ ಬುಧವಾರ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದ ಅವರು, “ಸರ್ಕಾರದ ಆದೇಶ ಜಾರಿಗೊಳಿಸುವವರೇ ಆದೇಶಗಳನ್ನು ಉಲ್ಲಂ ಸುವುದು ಹಕ್ಕುಚ್ಯುತಿ ಆಗುತ್ತದೆ. ಸಚಿವರು ನಿಮಗೆ 3 ಬಾರಿ ಅವಕಾಶ ನೀಡಿದರೂ ಇಂಗ್ಲಿಷ್‌ನಲ್ಲೇ ಟಿಪ್ಪಣಿ ಬರೆಯುತ್ತಿದ್ದೀರಾ. ಇದು ಕನ್ನಡಕ್ಕೆ ಮಾಡಿದ ಅಪಚಾರ. ನಿಮ್ಮ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಹೇಳಿ’ ಎಂದು ಪ್ರಶ್ನಿಸಿದರು.

ಅಧಿಕಾರಿ ಸಮಜಾಯಿಷಿ: ಆಗ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್‌ ಮಾತನಾಡಿ, “ಅಂತಾರಾಜ್ಯ ಅಥವಾ ಕೇಂದ್ರ
ದೊಂದಿಗೆ ಪತ್ರ ವ್ಯವಹಾರ ಸಂದರ್ಭದಲ್ಲಿ ಇಂಗ್ಲಿಷ್‌ನಲ್ಲಿ ಪತ್ರ ವ್ಯವಹಾರ ಮಾಡಬೇಕಾ ಗುತ್ತದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಕಾನೂನುಗಳ ಅನುಷ್ಠಾನ ವೇಳೆಯೂ ಇಂಗ್ಲಿಷ್‌ನಲ್ಲಿ ಬರೆದಿರಬಹುದು. ಆದರೆ, ಇಲಾಖೆಯಲ್ಲಿ ಶೇ. 95ರಷ್ಟು ಕನ್ನಡ ಅನುಷ್ಠಾನ ಆಗಿದೆ’ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,  “ಅಂತಾರಾಜ್ಯ ಅಥವಾ ಕೇಂದ್ರದೊಂದಿಗಿನ ಇಂಗ್ಲಿಷ್‌ ಪತ್ರ ವ್ಯವಹಾರದ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಆಂತರಿಕ ವ್ಯವಹಾರದಲ್ಲೂ ಇಂಗ್ಲಿಷ್‌ ಇರುವುದು ಸರಿ ಅಲ್ಲ’ ಎಂದು ಹೇಳಿದರು.

ಗಂಭೀರವಾಗಿ ಪರಿಗಣಿಸಿ: ನಂತರ ಮಾತನಾಡಿದ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ,  “ಅಧಿಕಾರಿಗಳಿಗೆ ಆ ಸಂದರ್ಭದಲ್ಲಿ ಕನ್ನಡ ಮರೆತು ಹೋಗುತ್ತಾ? ಅದೇನೇ ಇರಲಿ, ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಅಧ್ಯಕ್ಷರಿಗೆ ಮನವಿ ಮಾಡಿದರು.

ಕನ್ನಡದಲ್ಲಿ ಸಹಿ, ಇಂಗ್ಲಿಷ್‌ನಲ್ಲಿ ಟಿಪ್ಪಣಿ!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕಡತಗಳಲ್ಲಿ ಕನ್ನಡದಲ್ಲೇ ಸಹಿ ಮಾಡಿದ್ದಾರೆ. ಆದರೆ, ಟಿಪ್ಪಣಿ ಮಾತ್ರ ಇಂಗ್ಲಿಷ್‌ನಲ್ಲೇ ಬರೆದಿರುವುದು ಪರಿಶೀಲನೆ ವೇಳೆ ಕಂಡುಬಂತು. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಪ್ರೊ. ಸಿದ್ಧರಾಮಯ್ಯ,
“ತಪ್ಪಿಲ್ಲದಂತೆ ಕನ್ನಡ ಮಾತನಾಡುತ್ತೀರಾ. ಸಹಿ ಕೂಡ ಕನ್ನಡದಲ್ಲೇ ಮಾಡುತ್ತೀರಿ. ಆದರೆ, ಟಿಪ್ಪಣಿ ಮಾತ್ರ ಯಾಕೆ ಇಂಗ್ಲಿಷ್‌ನಲ್ಲಿರುತ್ತೆ’ ಎಂದು ಕೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next