ಉಡುಪಿ: ಅರಣ್ಯ ಇಲಾಖೆಯು ಸಾರ್ವಜನಿಕರಿಗೆ ವಿತರಿಸುವ ಗಿಡಗಳಿಗೆ ಇತ್ತೀಚೆಗೆ ರಿಯಾಯಿತಿಯನ್ನು ಕಡಿತಗೊಳಿಸಿತ್ತು. ಇದಕ್ಕೆ ವಿರೋಧ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ದರ ಕಡಿಮೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಸಸಿಗಳಿಗೆ ಇದ್ದ ಶೇ. 80ರಿಂದ 90ರಷ್ಟು ರಿಯಾಯಿತಿ ದರವನ್ನು ಶೇ. 50ಕ್ಕೆ ಇಳಿಸಲಾಗಿತ್ತು. ವಿವಿಧ ಅಳತೆಗೆ ಸಂಬಂಧಿಸಿ 1 ರೂ., 3 ರೂ. ದರಕ್ಕೆ ಸಿಗುತ್ತಿದ್ದ ಗಿಡಗಳಿಗೆ ಇನ್ನೂ 5 ರೂ., 6 ರೂ., 23 ರೂ. ಹೆಚ್ಚಿಸಲಾಗಿತ್ತು. ಮಳೆಗಾಲದಲ್ಲಿ ಗಿಡ ನೆಡುವ ರೈತರು ಮತ್ತು ಇತರ ಸಾರ್ವಜನಿಕರು ರಿಯಾಯಿತಿ ದರ ಕಡಿತಗೊಳಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಉದಯವಾಣಿಯಲ್ಲಿ ಮೇ 22ರಂದು “ಅರಣ್ಯ ಇಲಾಖೆ ಸಸಿಗಳಿಗೆ ರಿಯಾಯಿತಿ ಕಡಿತ’ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.
ಸಸಿಗಳು ದರ ಹೆಚ್ಚಳಗೊಂ ಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿವಿಧ ವಲಯ ಗಳಲ್ಲಿರುವ ನರ್ಸರಿ ಮತ್ತು ಸಾಮಾಜಿಕ ಅರಣ್ಯ ಇಲಾಖೆ ವಲಯದ ನರ್ಸರಿಗಳಲ್ಲಿ ಜನರು ಸಸಿಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದರು. ಗಿಡಗಳನ್ನು ನೆಟ್ಟು ಬೆಳೆಸುವ ಸಾರ್ವಜನಿಕರಿಗೆ ರಿಯಾಯಿತಿ ದರವನ್ನು ಮುಂದುವರಿಸಿ ಪ್ರೋತ್ಸಾಹ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಸಿಗಳ ಉತ್ಪಾದನ ವೆಚ್ಚಕ್ಕೆ ಶೇಕಡವಾರು ರಿಯಾಯಿತಿ ನಿಗದಿಪಡಿಸಲು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಪ್ರಸ್ತಾವನೆ ಪರಿಶೀಲಿಸಿದ ಸರಕಾರ ಉತ್ಪಾದನೆ ವೆಚ್ಚದ ಮೇಲೆ ಶೇ. 70ರಿಂದ 80ರಷ್ಟು ರಿಯಾಯಿತಿ ನೀಡಿದ್ದು, ಅರಣ್ಯ, ಪರಿಸರ ಇಲಾಖೆ ಅಧೀನ ಕಾರ್ಯದರ್ಶಿ ಅವರು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರು, ರೈತರ ಬೇಡಿಕೆಯಂತೆ ಅರಣ್ಯ ಇಲಾಖೆ ಸಸಿಗಳ ಮಾರಾಟ ದರವನ್ನು ಪರಿಷ್ಕರಿಸಿ ಸರಕಾರ ಆದೇಶಿಸಿದೆ. ಸಾರ್ವಜನಿಕರಿಗೆ ಇಲಾಖೆಯ ನರ್ಸರಿಗಳಲ್ಲಿ ಪರಿಷ್ಕೃತ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಕಡಿಮೆ ದರದಲ್ಲಿ ಸಸಿಗಳನ್ನು ಖರೀದಿಸಬಹುದಾಗಿದೆ.
– ಉದಯ ನಾಯ್ಕ, ಡಿಎಫ್ಒ, ಕುಂದಾಪುರ ಉಪ ವಿಭಾಗ
– ಕ್ಲಿಫರ್ಡ್ ಲೋಬೊ, ಡಿಎಫ್ಒ, ಸಾಮಾಜಿಕ ಅರಣ್ಯವಿಭಾಗ, ಉಡುಪಿ ಜಿಲ್ಲೆ