Advertisement

Government Order: ಪೊಲೀಸರಿಗೆ ಅರ್ಧ ಕೋಟಿ ರೂ. ಜೀವವಿಮೆ! ವಿಮಾ ಮೊತ್ತ ಇಲಾಖೆಯಿಂದಲೇ ಪಾವತಿ

12:17 AM Sep 26, 2024 | Team Udayavani |

 

Advertisement

ಚಿಕ್ಕಬಳ್ಳಾಪುರ: ಕಾನೂನು ಸುವ್ಯವಸ್ಥೆ ಕಾಪಾಡುವ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಆಕಸ್ಮಿಕವಾಗಿ ಅಪಘಾತಕ್ಕೀಡಾದ ಅಥವಾ ಮೃತಪಡುವ ಆರಕ್ಷಕ ಅಧಿಕಾರಿ, ಸಿಬಂದಿಯ ಕುಟುಂಬಸ್ಥರಿಗೆ ರಾಜ್ಯ ಸರಕಾರ ಜೀವ ವಿಮಾ ಮೊತ್ತವನ್ನು 20 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗೆ ಏರಿಸುವ ಮಹತ್ವದ ಆದೇಶವನ್ನು ಹೊರಡಿಸಿದೆ.

ಫಾಲೋಯರ್‌ ಹುದ್ದೆಯಿಂದ ಮಹಾ ನಿರ್ದೇಶಕರ ಹಾಗೂ ಆರಕ್ಷಕ ನಿರೀಕ್ಷಕರ ಹುದ್ದೆವರೆಗೂ ಈ ಜೀವ ವಿಮಾ ಸೌಲಭ್ಯ ಅನ್ವಯ ಆಗಲಿದೆ. ರಾಜ್ಯದಲ್ಲಿ ಒಟ್ಟು 93,449 ಅಧಿಕಾರಿ, ಸಿಬಂದಿಗೆ ಅನ್ವಯವಾಗಲಿದೆ. ಸರಕಾರದ ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎನ್‌. ವನಜಾ ಈ ಮಹತ್ವದ ಆದೇಶ ಹೊರಡಿಸಿದ್ದಾರೆ.

ಇದರ ಮತ್ತೊಂದು ವಿಶೇಷವೆಂದರೆ, ಈ ಯೋಜನೆಯನ್ನು ವಿಮಾ ಕಂಪೆನಿಗೆ ವಹಿಸದೆ ಆಕಸ್ಮಿಕ ಅಥವಾ ಅಪಘಾತದಲ್ಲಿ ಮೃತಪಟ್ಟ ಕರ್ತವ್ಯ ನಿರತ ಪೊಲೀಸ್‌ ಇಲಾಖೆ ಉದ್ಯೋಗಿಗಳ ಕುಟುಂಬಗಳಿಗೆ ನೀಡುವ ವಿಶೇಷ ಗುಂಪು ವಿಮಾ ಮೊತ್ತವನ್ನು ನೇರವಾಗಿ ಇಲಾಖೆಯ ಸಂಬಂಧಪಟ್ಟ ಲೆಕ್ಕ ಶೀರ್ಷಿಕೆಯಡಿ ಪಾವತಿಸಲು ಸರಕಾರ ಸೂಚಿಸಿದೆ.

ಮನೋಸ್ಥೆರ್ಯ ಹೆಚ್ಚಿಸಲು ಈ ಕ್ರಮ
ಪೊಲೀಸ್‌ ಅಧಿಕಾರಿ, ಸಿಬಂದಿ ತಮ್ಮ ಪ್ರಾಣದ ಹಂಗು ತೊರೆದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಹಾಗೂ ಕರ್ತವ್ಯ ನಿರತ ಸಿಬಂದಿ/ಅಧಿಕಾರಿಗಳ ಮತ್ತು ಅವರ ಕುಟುಂಬವರ ಏಳಿಗೆಗೆ ಇಲಾಖೆಯು ಮೊದಲ ಆದ್ಯತೆ ನೀಡಬೇಕಿದೆ. ಸಿಬಂದಿ, ಅಧಿಕಾರಿಗಳ ಮತ್ತು ಅವರ ಕುಟುಂಬದವರ ಮನೋಸ್ಥೈರ್ಯವನ್ನು ಹೆಚ್ಚಿಸಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕರ್ತವ್ಯ ನಿರೀಕ್ಷಿಸಬಹುದೆಂದು ಹೇಳಿ ಸರಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. 2023ರ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಗುಂಪು ವಿಮಾ ಮೊತ್ತವನ್ನು ಏರಿಸುವುದಾಗಿ ಘೋಷಿಸಿದ್ದರು.

Advertisement

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next