ಬೆಂಗಳೂರು: ದಪ್ಪ ಚರ್ಮದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರವಾಹ ಸಂತ್ರಸ್ತರ ಗೋಳು ನೋಡಲು, ಕೇಳಲು ಕಣ್ಣು, ಕಿವಿ ಇಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಉದ್ಯಮಿಗಳೊಂದಿಗೆ ನಡೆದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಪ್ರವಾಹ ಪರಿಸ್ಥಿತಿಯ ಸಮೀಕ್ಷೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಪ್ರಧಾನಿ ಬಂದು ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾತನಾಡದೆ ಹೋಗಿದ್ದಾರೆ. ಬಿಜೆಪಿಯವರಿಗೆ ಪ್ರಧಾನಿಯನ್ನು ಮಾತನಾಡಿಸುವ ತಾಕತ್ ಇಲ್ಲ ಎಂದು ದೂರಿದರು.
ರಾಜ್ಯದಲ್ಲಿ ಪ್ರವಾಹದಿಂದ 38 ಸಾವಿರ ಕೋಟಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಸುಮಾರು 1 ಲಕ್ಷ ಕೋಟಿ ಆಸ್ತಿ, ಪಾಸ್ತಿ ಹಾನಿಯಾಗಿದೆ. ಪ್ರವಾಹದಿಂದ ಇಡೀ ರಾಜ್ಯ ತತ್ತರಿಸಿ ಹೋಗಿದೆ. ಒಂದು ಲಕ್ಷ ಕುಟುಂಬಗಳು ಕಷ್ಟದಲ್ಲಿ ಸಿಲುಕಿವೆ. ಪ್ರಧಾನಿ ರಾಜ್ಯಕ್ಕೆ ಬಂದು ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ಮಾಡದಿದ್ದರೂ, ಪರಿಹಾರವಾದರೂ ಘೋಷಣೆ ಮಾಡಬಹುದಿತ್ತು. ವಿದೇಶದಲ್ಲಿ ಶೋ ಮಾಡುವುದೇ ಮೋದಿಯ ಮೊದಲ ಅದ್ಯತೆಯಾಗಿದೆ ಎಂದರು.
ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾಗಿದ್ದಾರೆ. ಅವರಿಗೆ ಕೇಂದ್ರದ ಮೇಲೆ ಒತ್ತಡ ಹೇರಲು ಆಗುತ್ತಿಲ್ಲ. ಸರ್ವ ಪಕ್ಷಗಳ ನಿಯೋಗ ಕರೆದುಕೊಂಡು ಹೋಗುವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಪ್ರವಾಹ ಪರಿಹಾರ ನೀಡುವ ಕುರಿತು ಚರ್ಚಿಸಲು ಅಧಿವೇಶನ ಕರೆಯುವಂತೆ ಆಗ್ರಹಿಸಿದರೂ ಕರೆಯುತ್ತಿಲ್ಲ. ಈ ಸರ್ಕಾರಕ್ಕೆ ಕಣ್ಣು, ಕಿವಿ ಏನೂ ಇಲ್ಲ. ಬಿಜೆಪಿಯದು ದಪ್ಪ ಚರ್ಮದ ಸರ್ಕಾರ ಎಂದು ವಾಗ್ಧಾಳಿ ನಡೆಸಿದರು.
ಪ್ರವಾಹ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಕೇವಲ 10 ಸಾವಿರ ರೂಪಾಯಿ ಮಾತ್ರ ನೀಡಿದೆ. ಇನ್ನೂ ಕೆಲವರಿಗೆ ಆ ಹಣವೂ ತಲುಪಿಲ್ಲ. ಇಂತಹ ಗಂಭೀರ ಸಮಸ್ಯೆಯನ್ನು ಯಾವ ಸರ್ಕಾರವೂ ಇಷ್ಟೊಂದು ಲಘುವಾಗಿ ತೆಗೆದುಕೊಂಡಿಲ್ಲ ಎಂದರು. ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸುವುದಾಗಿ ತಿಳಿಸಿದರು.
ಬಿಜೆಪಿ ಸರ್ಕಾರ ರಾಜ್ಯದ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದೆ. ಬಿಜೆಪಿಯವರು ಇಲ್ಲಿಯೇ ಶಾಶ್ವತವಾಗಿ ಗೂಟ ಹೊಡೆದುಕೊಂಡು ಕುಳಿತುಕೊಳ್ಳುತ್ತೇವೆ ಎಂದುಕೊಂಡಿದ್ದಾರೆ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರು. ಈಗ ಹಳೆಯ ಪ್ರಕರಣಗಳನ್ನು ಸಿಬಿಐಗೆ ನೀಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದೇ ಬಿಜೆಪಿಗೆ ತಿರುಗುಬಾಣವಾಗಲಿದೆ ಎಂದರು.