ನವದೆಹಲಿ: ಭಾರತಕ್ಕೆ ಅತಿದೊಡ್ಡ ಹಿನ್ನಡೆಯೆಂಬಂತೆ, ಬ್ರಿಟನ್‌ನ ಕೇರ್ನ್ ಎನರ್ಜಿ ಸಂಸ್ಥೆಗೆ ಫ್ರಾನ್ಸ್‌ನ ಕೋರ್ಟ್‌ನಲ್ಲಿ ಗೆಲುವು ಸಿಕ್ಕಿದೆ. ಪ್ಯಾರಿಸ್‌ನಲ್ಲಿರುವ ಭಾರತ ಸರ್ಕಾರದ ಸುಮಾರು 20 ಸ್ಥಿರಾಸ್ತಿಗಳನ್ನು ಜಪ್ತಿ ಮಾಡುವಂತೆ ಮತ್ತು ಆ ಮೂಲಕ ಸರ್ಕಾರ ಪಾವತಿಸಲು ಬಾಕಿಯಿರುವ 12,800 ಕೋಟಿ ರೂ. ಮೊತ್ತವನ್ನು ಪಡೆಯುವಂತೆ ಕೇರ್ನ್ ಎನರ್ಜಿಗೆ ಕೋರ್ಟ್ ಆದೇಶಿಸಿದೆ.
ಪ್ಯಾರಿಸ್‌ನ ಪ್ರಮುಖ ಭಾಗದಲ್ಲಿ ಈ ಆಸ್ತಿಪಾಸ್ತಿಗಳಿದ್ದು, ಅವುಗಳು 177.10 ಕೋಟಿ ರೂ.ಗಿಂತಲೂ ಹೆಚ್ಚಿನ ಮೌಲ್ಯ ಹೊಂದಿವೆ. ಅನೇಕ ಫ್ಲ್ಯಾಟ್‌ಗಳೂ ಇದರಲ್ಲಿದ್ದು, ಅವುಗಳನ್ನು ಫ್ರಾನ್ಸ್ ನಲ್ಲಿರುವ ಭಾರತ ಸರ್ಕಾರದ ಅಧಿಕಾರಿಗಳು ಬಳಸಿಕೊಳ್ಳುತ್ತಿವೆ.
ಜೂ.11ರಂದೇ ಈ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್‌ನಿಂದ ಒಪ್ಪಿಗೆ ಸಿಕ್ಕಿದ್ದು, ಬುಧವಾರ ಕಾನೂನಾತ್ಮಕ ಪ್ರಕ್ರಿಯೆ ಆರಂಭವಾಗಿದೆ. ಇದೇ ವೇಳೆ, ನಾವು ಆ ಆಸ್ತಿಗಳಲ್ಲಿ ವಾಸವಿರುವ ಭಾರತೀಯ ಅಧಿಕಾರಿಗಳನ್ನು ಅಲ್ಲಿಂದ ಹೊರಹೋಗುವಂತೆ ಸೂಚಿಸುವುದಿಲ್ಲ. ಆದರೆ, ಕೋರ್ಟ್ ಆದೇಶವಿರುವ ಕಾರಣ ಭಾರತ ಸರ್ಕಾರ ಆ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಲಾಗದು ಎಂದು ಕೇರ್ನ್ ತಿಳಿಸಿದೆ.
ಇದೇ ವೇಳೆ, ಕೋರ್ಟ್ ಆದೇಶದ ಪ್ರತಿ ಇನ್ನೂ ನಮ್ಮ ಕೈ ಸೇರಿಲ್ಲ. ಅದು ಸಿಕ್ಕಿದ ಮೇಲೆ ಸೂಕ್ತ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ವಿತ್ತ ಸಚಿವಾಲಯ ಹೇಳಿದೆ. ತೆರಿಗೆ ವಿವಾದಕ್ಕೆ ಸಂಬಂಧಿಸಿ ಕೇರ್ನ್ ಎನರ್ಜಿಗೆ ಭಾರತ ಸರ್ಕಾರ 12,800 ಕೋಟಿ ರೂ. ಮೊತ್ತವನ್ನು ಪಾವತಿಸುವಂತೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಧಿಕರಣ ಇತ್ತೀಚೆಗೆ ತೀರ್ಪು ನೀಡಿತ್ತು.