Advertisement

ಗಾರ್ಡನ್‌ ಸಿಟಿ ಖ್ಯಾತಿ ಮರುಸ್ಥಾಪನೆ ಸರ್ಕಾರದ ಉದ್ದೇಶ: ಸಿದ್ದರಾಮಯ್ಯ 

12:22 PM May 20, 2017 | Team Udayavani |

ಬೆಂಗಳೂರು: “ಬೆಂಗಳೂರಿನ ಖ್ಯಾತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮರುಸ್ಥಾಪಿಸುವುದು ಸರ್ಕಾರದ ಉದ್ದೇಶವಾಗಿದೆ. ನಗರದ ಅಭಿವೃದ್ಧಿಗಾಗಿ ಸರ್ಕಾರ ಬಿಡುಗಡೆ ಮಾಡುವ ಅನುದಾನವನ್ನು ಜನಪ್ರತಿನಿಧಿಗಳು ಸಮರ್ಪಕವಾಗಿ ಬಳಸಿಕೊಂಡು ನಗರವನ್ನು ಪ್ರಗತಿಯತ್ತ ಕೊಂಡೊಯ್ಯಬೇಕು,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

Advertisement

ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಲಗ್ಗೆರೆ ವಾರ್ಡ್‌ ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಳೆ ನೀರುಗಾಲುವೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, “ನಗರದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಇದರೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಅನುದಾನ ನೀಡಲು ಸರ್ಕಾರ ಸಿದ್ಧವಿದೆ. ಅದನ್ನು ಸಮರ್ಪಕವಾಗಿ ಬಳಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಜನಪ್ರತಿನಿಧಿಗಳು ಪ್ರಮಾಣಿಕ ವಾಗಿ ಪ್ರಯತ್ನಿಸಬೇಕು,’ ಎಂದು ಹೇಳಿದರು. 

“ಪ್ರತಿವರ್ಷ ಮಳೆಗಾಲದಲ್ಲಿ ವಸತಿ ಪ್ರದೇಶಗಳಿಗೆ ನೀರು ನುಗ್ಗಿ ತೊಂದರೆಯಾಗುತ್ತಿತ್ತು. ಕಳೆದ ವರ್ಷವೂ ಕೆಲವು ಭಾಗಗಳಲ್ಲಿ ಜನರು ಮಳೆ ನೀರಿನಿಂದ ತೊಂದರೆ ಅನುಭವಿಸಿದ್ದರು. ಅದರ ಹಿನ್ನೆಲೆಯಲ್ಲಿ ರಾಜಕಾಲುವೆಗಳ ಅಭಿವೃದ್ಧಿಗೆ ಸರ್ಕಾರದಿಂದ 800 ಕೋಟಿ ರೂ. ಅನುದಾನ ನೀಡಲಾಗಿದೆ. ವೇಗವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,’ ಎಂದು ತಿಳಿಸಿದರು. 

ನಗರದಲ್ಲಿ 842 ಕಿಲೋ ಮೀಟರ್‌ ಉದ್ದದ 633 ರಾಜಕಾಲುವೆಗಳಿದ್ದು, ಈಗಾಗಲೇ 152 ಕಿಲೋ ಮೀಟರ್‌ ನೀರುಗಾಲುವೆ ಅಭಿವೃದ್ಧಿಗೆ ಕೆಲಸ ಪೂರ್ಣಗೊಂಡಿವೆ. ನಾಗರಿಕರಿಗೆ ತೊಂದರೆಯಾಗುತ್ತಿರುವ ಅಪಾಯದ ಸ್ಥಳಗಳಲ್ಲಿ ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇದರೊಂದಿಗೆ ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನವನ್ನು ಮೀಸಲಿರಿಸಲಾಗಿದೆ. ಒಟ್ಟಾರೆ ದಾಖಲೆಯ 7300 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

ಗಾರ್ಡನ್‌ ಸಿಟಿ ಖ್ಯಾತಿ ಅಳಿಸಿದ್ದು ಬಿಜೆಪಿ 
ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾರ್ಡನ್‌ ಸಿಟಿ ಬಿರುದು ಹೊಂದಿದ್ದ ಬೆಂಗಳೂರನ್ನು ಬಿಜೆಪಿಯವರು ಗಾಬೇìಟ್‌ ಸಿಟಿ ಎಂಬ ಅಪಖ್ಯಾತಿ ಹೊಂದುವಂತೆ ಮಾಡಿದರು.

Advertisement

ಕೇವಲ 220 ಕಿ.ಮೀ.ವ್ಯಾಪ್ತಿಯಿದ್ದ ಬೆಂಗಳೂರಿಗೆ ದೂರದೃಷ್ಟಿಯಿಲ್ಲದೆ 110 ಹಳ್ಳಿಗಳು, ಏಳು ಸಿಎಂಸಿ ಮತ್ತು ಒಂದು ಟಿಎಂಸಿ ಪ್ರದೇಶಗಳನ್ನು ಸೇರಿಸಿ ಸಮಸ್ಯೆಗಳನ್ನು ಸೃಷ್ಟಿಸಿದರು ಎಂದು ದೂರಿದರು. ಬಿಜೆಪಿಯವರ ಪರಿಸ್ಥಿತಿ ಕೈಲಾಗದವರು ಮೈ ಪರಚಿಕೊಂಡರು ಎಂಬಂತಾಗಿದ್ದು, ಕಾಂಗ್ರೆಸ್‌ ಸರ್ಕಾರವನ್ನು ದೂಷಿಸುವ ಮೊದಲು ಅವರ ಕಾಲದಲ್ಲಿ ಏನೆಲ್ಲಾ ಅಭಿವೃದ್ಧಿಯಾಗಿದೆ ಎಂದು ಒಮ್ಮೆ ನೋಡಲಿ.

ಬಿಜೆಪಿಯವರು ತಮ್ಮ ಅಧಿಕಾರದಲ್ಲಿ ನಗರದ ಅಭಿವೃದ್ಧಿಗೆ 4,200 ಕೋಟಿ ರೂ. ಮಾತ್ರ ನೀಡಿದ್ದರು. ಆದರೆ, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ 12,500 ಕೋಟಿಯಷ್ಟು ಅನುದಾನ ನೀಡಲಾಗಿದೆ. ಇದರೊಂದಿಗೆ ನಗರದಲ್ಲಿ ಬಡವರಿಗೆ 1 ಲಕ್ಷ ಮನೆಗಳು, ಕೊಳೆಗೇರಿಯ ನಿವಾಸಿಗಳಿಗೆ ಉಚಿತ ನೀರು ನೀಡಲಾಗುತ್ತಿದ್ದು, ಇದಕ್ಕಾಗಿ ಹೆಚ್ಚುವರಿ ಅನುದಾನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next