ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಒಂದು ಶಾಖಾ ಕಚೇರಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ.
ಈ ಬಗ್ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರ ಜತೆಗೆ ಅಹ್ಮದಾಬಾದ್, ಪಾಟ್ನಾ, ಜೈಪುರ, ಭೋಪಾಲ, ಭುವನೇಶ್ವರದಲ್ಲಿ ಎನ್‌ಐಎ ಶಾಖಾ ಕಚೇರಿಗಳನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಕೇಂದ್ರ ತನಿಖಾ ಸಂಸ್ಥೆ ನಡೆಸುವ ದಾಳಿಯ ಸಂಖ್ಯೆ ಹೆಚ್ಚುತ್ತಿರುವಂತೆಯೇ ಕೇಂದ್ರ ಸರ್ಕಾರದ ಈ ನಿರ್ಧಾರ ಕೈಗೊಂಡಿದೆ.
ಬೆಂಗಳೂರು, ಪಾಟ್ನಾ ಮತ್ತು ಭೋಪಾಲದಲ್ಲಿರುವ ಕಚೇರಿಗಳು ಡೆಪ್ಯುಟಿ ಇನ್ಸೆ$³ಕ್ಟರ್ ಜನರಲ್ ಹುದ್ದೆಯ ಅಧಿಕಾರಿಯ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದ್ದರೆ, ಇನ್ನುಳಿದ ನಗರಗಳಲ್ಲಿರುವ ಕಚೇರಿಗಳಲ್ಲಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಯ ಅಧಿಕಾರಿಯ ನೇತೃತ್ವ ಇರಲಿದೆ.
ಇದನ್ನೂ ಓದಿ:ಶಬರಿಮಲೆಗೆ ಪಾದಯಾತ್ರೆ: ಬಂಟ್ವಾಳ ತಂಡದ ಜತೆ ಹೆಜ್ಜೆ ಹಾಕಿದ ದಾರಿಯಲ್ಲಿ ಸಿಕ್ಕ ಶ್ವಾನ !
ಆರು ಹೊಸ ಕಚೇರಿಗಳಿಗಾಗಿ 435 ಹುದ್ದೆಗಳನ್ನು ಹೊಸತಾಗಿ ಸೃಷ್ಟಿಸಬೇಕಾಗುತ್ತದೆ. ಬೆಂಗಳೂರು ಕಚೇರಿ ಸೇರಿದಂತೆ ಪ್ರತಿಯೊಂದು ಕಚೇರಿಯಲ್ಲಿ 70 ಸಿಬ್ಬಂದಿ ಮತ್ತು ಅಧಿಕಾರಿ ಹುದ್ದೆ ಸೃಷ್ಟಿಸಲು ಕೇಂದ್ರ ಗೃಹ ಸಚಿವಾಲಯ ವಿತ್ತ ಸಚಿವಾಲಯಕ್ಕೆ ಮನವಿ ಮಾಡಿತ್ತು. ಮನವಿ ಸ್ಪಂದಿಸಿದ ವಿತ್ತ ಸಚಿವಾಲಯ ಪ್ರತಿ ಕಚೇರಿಯಲ್ಲಿ 50 ಹುದ್ದೆಗಳ ಸೃಷ್ಟಿಗೆ ಅನುಮೋದನೆ ನೀಡಿದೆ.