ಬೀದರ: ಇತಿಹಾಸ ಬಿಂಬಿಸುವ ಜಿಲ್ಲೆಯ ಐತಿಹಾಸಿಕ ನಾಲ್ಕು ಕೋಟೆಗಳನ್ನು ಮಾದರಿ ಪ್ರವಾಸಿ ತಾಣಗಳಾಗಿ ರೂಪಿಸುವುದಾಗಿ ಅನುದಾನ ಘೋಷಿಸಿದ್ದ ಸರ್ಕಾರ ಇದೀಗ ನಿರ್ಲಕ್ಷ್ಯವಹಿಸಿದೆ. ಬಜೆಟ್‌ನಲ್ಲಿ ಯೋಜನೆಗೆ 10 ಕೋಟಿ ರೂ. ಅನುದಾನ ಘೋಷಿಸಿ ಎರಡು ವರ್ಷ ಕಳೆಯುತ್ತ ಬಂದರೂ ಅನುಷ್ಠಾನಗೊಳ್ಳದೇಹಳ್ಳ ಹಿಡಿದಿದೆ.
ಚಾರಿತ್ರಿಕ ಕೋಟೆ ಕೊತ್ತಲುಗಳು, ಪಳೆಯುಳಿಕೆಗಳು ಇಂದಿಗೂ ಪುರಾತನ ಇತಿಹಾಸ ಮತ್ತು ರಾಜ ಮಹಾರಾಜರ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿವೆ. ಆದರೆ, ಸದ್ಯ ಪಾಳು ಬೀಳುವ ಸ್ಥಿತಿಗೆ ತಲುಪಿವೆ. ಅದರಲ್ಲಿ ಜಿಲ್ಲೆಯ ಬೀದರ, ಬಸವಕಲ್ಯಾಣ, ಭಾಲ್ಕಿ ಮತ್ತು ಭಾತಂಬ್ರಾ ಕೋಟೆಗಳು ಸಹ ಪ್ರಮುಖವಾದವು. ಈ ಕೋಟೆಗಳಿಗೆ ಕಾಯಕಲ್ಪ ನೀಡಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ 2016ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು 10 ಕೋಟಿ ರೂ. ಅನುದಾನ ಪ್ರಕಟಿಸಿದ್ದು, ಅದು ಕೇವಲ ಘೋಷಣೆಯಾಗಿಯೇ ಉಳಿದಿದೆ.
ಬೀದರನ ಬಹುಮನಿ ಕೋಟೆಯು ದಕ್ಷಿಣ ಭಾರತದಲ್ಲೇ ಸುಭದ್ರವಾದ ಹಾಗೂ ಭವ್ಯವಾದ ಕೋಟೆಯಾಗಿದ್ದು, ಜಗತ್ತಿನಾದ್ಯಂತ ತಮ್ಮ ಹಿರಿಮೆ ಹೊಂದಿದೆ. ಆದರ್ಶ ಸ್ಮಾರಕ ಪಟ್ಟಿ ಹಾಗೂ ವರ್ಲ್ಡ್ ಮಾನ್ಯುಮೆಂಟ್ ಫಂಡ್‌ಗೆ ಆಯ್ಕೆಯಾಗಿರುವ ಬಹುಮನಿ ಕೋಟೆ ಹಲವು ಸ್ಮಾರಕಗಳನ್ನು ತನ್ನ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡಿದೆ. ಇನ್ನೂ ಕಲ್ಯಾಣ ಚಾಲುಕ್ಯರ ರಾಜಧಾನಿಯಾಗಿ ಮೆರೆದಿರುವ ಬಸವಕಲ್ಯಾಣ ಕೋಟೆ ಹಾಗೂ ಪುರಾತನ ಭಾಲ್ಕಿ, ಭಾತಂಬ್ರಾ ಕೋಟೆಗಳು ಗತಕಾಲದ ವೈಭವ ಸಾರುತ್ತಿವೆ.
ಆದರೆ, ಪುರಾತನ ಸ್ಮಾರಕಗಳು ನಿರ್ಲಕ್ಷ್ಯಕ್ಕೊಳಗಾಗಿ ಇಂದು ಅವಸಾನತದತ್ತ ಸಾಗಿರುವುದು ದುರಂತ. ಸುತ್ತು ಗೋಡೆಗಳ ತುಂಬ ವಿಪರೀತ ಬಳ್ಳಿ, ಗಿಡ-ಗಂಟಿ ಬೆಳೆದು ನಿಂತಿದ್ದು, ಅಲ್ಲಲ್ಲಿ ಗೋಡೆ ಕುಸಿದು ಬಿದ್ದಿವೆ. ಸುತ್ತಲಿನ ಕಂದಕದಲ್ಲಿ ಹೊಲಸು ನೀರು, ಕಸ- ತಾಜ್ಯ ತುಂಬಿಕೊಂಡುವ ಪರಿಸರವೇ ಮಲೀನವಾಗಿದೆ. ಪುರಾತನ ಕೋಟೆಗಳನ್ನು ಕಣ್ತುಂಬಿಕೊಳ್ಳಲೆಂದು ನಾಡಿನ ವಿವಿಧೆಡೆಯಿಂದ ಬರುವ ಸಾವಿರಾರು ಪ್ರವಾಸಿಗರಿಗೆ ಕೋಟೆಯ ಹೊಲಸು ಪರಿಸರ ಕಿರಿಕಿರಿಯನ್ನುಂಟು ಮಾಡುತ್ತಿದೆ.
ಅಳಿವಿನಂಚಿನಲ್ಲಿರುವ ಐತಿಹಾಸಿಕ ಕೋಟೆಗಳ ಸಂರಕ್ಷಣೆ ಜತೆಗೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಜಿಲ್ಲಾಡಳಿತ ಸರ್ಕಾರ ಅಗತ್ಯ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ಸರ್ಕಾರ 2016ರ ಬಜೆಟ್‌ನಲ್ಲಿ ಕೋಟೆಗಳ ಅಭಿವೃದ್ಧಿಗಾಗಿ 10 ಕೋಟಿ ರೂ. ಘೋಷಿಸಲಾಗಿತ್ತು. ಕೋಟೆಗಳಲ್ಲಿ ದುರಸ್ಥಿ ಕಾರ್ಯ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಸೌಲತ್ತುಗಳನ್ನು ನೀಡುವುದು ಯೋಜನೆಯ ಉದ್ದೇಶವಾಗಿತ್ತು.
ಪ್ರವಾಸೋದ್ಯಮ ಇಲಾಖೆಯಿಂದ ಕಳೆದ ಮಾರ್ಚ್ 31 ರಂದು ಪ್ರತಿ ಕೋಟೆಗೆ 2 ಕೋಟಿ ರೂ. ಗಳಂತೆ ಅನುದಾನ ಸಹ ಮಂಜೂರಾಗಿದೆ. ಆದರೆ, ಕೆಲಸ ಮಾತ್ರ ಆರಂಭಗೊಂಡಿಲ್ಲ. ಪುರಾತತ್ವ ಇಲಾಖೆ, ಮೈಸೂರು ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಗಳು ಈ ಯೋಜನೆಯ ಜವಾಬ್ದಾರಿ ಹೊತ್ತಿದ್ದು, ಅನುದಾನ ಮಂಜೂರಾಗಿ 9 ತಿಂಗಳು ನಂತರ ಕಾಮಗಾರಿ ಡಿಪಿಆರ್ ಸಹ ಆಗಿದೆ. ಆದರೆ, ಸರ್ಕಾರದ ಆಡಳಿತಾತ್ಮಕ ಒಪ್ಪಿಗೆ ದೊರೆತು ಟೆಂಡರ್ ಪ್ರಕ್ರಿಯೆ ಶುರುವಾಗಿಲ್ಲ. ಸರ್ಕಾರ, ಅಧಿಕಾರಿ ವರ್ಗ ಮುತುವರ್ಜಿ ತೋರದಿರುವುದು ಯೋಜನೆ ನನೆಗುದಿಗೆ ಬೀಳುವಂತೆ ಮಾಡಿದೆ.
ಬೀದರ ಜಿಲ್ಲೆಯ ಕೋಟೆಗಳ ಅಭಿವೃದ್ಧಿಗಾಗಿ ಸರ್ಕಾರ ಪ್ರವಾಸೋದ್ಯಮ ಇಲಾಖೆಗೆ ಅನುದಾನ ಬಿಡುಗಡೆ ಮಾಡಿದೆ. ಮೈಸೂರು ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಈಗಾಗಲೇ ಡಿಪಿಆರ್ ಮಾಡಿ ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಿದ್ದು, ಇಲಾಖೆಯಿಂದ ನಮಗೆ ಅನುದಾನ ನೀಡಿದ ಬಳಿಕ ಟೆಂಡರ್ ಪ್ರಕ್ರಿಯೆ ನಡೆಯುವುದು. ಸಧ್ಯ ಈ ಕಾರ್ಯ ಇನ್ನೂ ಪ್ರಗತಿಯಲ್ಲಿದೆ.
ಪ್ರೇಮಲತಾ, ಎಸಿಎ, ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ
ಶಶಿಕಾಂತ ಬಂಬುಳಗೆ