Advertisement

ತ್ರಿವಳಿ ತಲಾಖ್‌ಗೆ 3 ವರ್ಷ ಜೈಲು ಶಿಕ್ಷೆ, ದಂಡ

06:00 AM Dec 02, 2017 | Team Udayavani |

ನವದೆಹಲಿ: ಏಕಕಾಲದಲ್ಲಿ ತ್ರಿವಳಿ ತಲಾಖ್‌ ನೀಡುವುದು ಕಾನೂನುಬಾಹಿರವಾಗಿದ್ದು, ತಲಾಖ್‌ ಹೇಳುವ ವ್ಯಕ್ತಿಗೆ 3 ವರ್ಷಗಳ ಜೈಲು ಶಿಕ್ಷೆ ಖಚಿತ.

Advertisement

ಮುಸ್ಲಿಮರಲ್ಲಿರುವ ಒಂದೇ ಬಾರಿಗೆ ಮೂರು ಬಾರಿ ತಲಾಖ್‌ ಹೇಳುವ ಪದ್ಧತಿಗೆ ಕೊನೆ ಹಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾನೂನು ತರಲು ಇದೀಗ ಕರಡು ಸಿದ್ಧಪಡಿಸಿದೆ. ತ್ರಿವಳಿ ತಲಾಖ್‌ ನೀಡುವ ಪತಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪ ಅದರಲ್ಲಿದೆ. “ವಿವಾಹಕ್ಕೆ ಸಂಬಂಧಿಸಿ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ ವಿಧೇಯಕ’ ಎಂಬ ಹೆಸರಿನ ಈ ಕರಡು ಪ್ರತಿಯನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಕಳುಹಿಸಿದ್ದು, ಆದಷ್ಟು ಬೇಗನೆ ಪ್ರತಿಕ್ರಿಯೆ ನೀಡುವಂತೆ ಕೋರಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳೇ ತಿಳಿಸಿವೆ.

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ಅಂತರ್‌-ಸಚಿವರ ಸಮಿತಿಯು ಈ ಕರಡು ಸಿದ್ಧಪಡಿಸಿದೆ. ಸಮಿತಿಯಲ್ಲಿ ಸಚಿವರಾದ ಸುಷ್ಮಾ ಸ್ವರಾಜ್‌, ಅರುಣ್‌ ಜೇಟಿÉ, ರವಿಶಂಕರ್‌ ಪ್ರಸಾದ್‌ ಮತ್ತು ಪಿ.ಪಿ. ಚೌಧರಿ ಇದ್ದರು. ರಾಜ್ಯಗಳ ಪ್ರತಿಕ್ರಿಯೆ, ಸಲಹೆಗಳು ಬಂದ ಬಳಿಕ ವಿಧೇಯಕವನ್ನು ಚಳಿಗಾಲದ ಅಧಿವೇಶನದಲ್ಲೇ ಮಂಡಿಸಲು ನಿರ್ಧರಿಸಲಾಗಿದೆ.

ತ್ರಿವಳಿ ತಲಾಖ್‌ ಅನ್ನು ಅಸಿಂಧುಗೊಳಿಸಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬಳಿಕವೂ ಮುಸ್ಲಿಮರಲ್ಲಿ ಈ ಪದ್ಧತಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಕಾನೂನು ಜಾರಿ ಮಾಡಲು ಸರ್ಕಾರ ಉತ್ಸುಕವಾಗಿದೆ ಎಂದೂ ಮೂಲಗಳು ಹೇಳಿವೆ.

ಕರಡು ಪ್ರಸ್ತಾಪದಲ್ಲೇನಿದೆ?:
– ಎಲ್ಲ ರೀತಿಯ ತ್ರಿವಳಿ ತಲಾಖ್‌ (ಮಾತಿನಲ್ಲಿ ಹೇಳುವ, ಲಿಖೀತ ರೂಪದಲ್ಲಿರುವ ಅಥವಾ ಇಮೇಲ್‌, ಎಸ್ಸೆಮ್ಮೆಸ್‌, ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿರು) ಕೂಡ ಕಾನೂನುಬಾಹಿರ.
– ಪತ್ನಿಗೆ ಮನೆ ಬಿಟ್ಟು ಹೋಗುವಂತೆ ಪತಿ ಸೂಚಿಸಿದರೆ ಆಕೆ ಕಾನೂನಿನ ರಕ್ಷಣೆ ಪಡೆಯಬಹುದು
– ತ್ರಿವಳಿ ತಲಾಖ್‌ ಜಾಮೀನುರಹಿತ ಮತ್ತು ದಂಡಾರ್ಹ ಅಪರಾಧ. ತಪ್ಪಿತಸ್ಥನಿಗೆ 3 ವರ್ಷ ಜೈಲು ಮತ್ತು ದಂಡ
– ಕಾನೂನು ಜಾರಿಯಾಗುವ ಮೊದಲು ವಿಚ್ಛೇದನ ಪಡೆದವರೂ ಇದರ ಲಾಭ ಪಡೆಯಬಹುದು
– ಜಮ್ಮು-ಕಾಶ್ಮೀರ ಹೊರತುಪಡಿಸಿ ದೇಶದೆಲ್ಲೆಡೆ ಇದು ಅನ್ವಯ

Advertisement
Advertisement

Udayavani is now on Telegram. Click here to join our channel and stay updated with the latest news.

Next