Advertisement

ಆರ್‌ಟಿಇಗೆ ಸರ್ಕಾರ ಮೈನರ್‌ ಸರ್ಜರಿ

06:00 AM Dec 06, 2018 | Team Udayavani |

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ನಿಯಮಾವಳಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸರ್ಕಾರಿ ಶಾಲೆ ಇದ್ದ ಕಡೆ ಖಾಸಗಿ ಶಾಲೆ ಪ್ರವೇಶಕ್ಕೆ ಅವಕಾಶ ಕಲ್ಪಿಸದಿರಲು ನಿರ್ಧರಿಸಿದೆ.

Advertisement

ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಇದರಿಂದಾಗಿ ನಿಗದಿತ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಇದ್ದರೆ ಪೋಷಕರು ಸರ್ಕಾರಿ ಶಾಲೆಗೆ ಸೇರಿಸಬೇಕಾಗುತ್ತದೆ. ಅದೇ ವಾಪ್ತಿಯಲ್ಲಿರುವ ಖಾಸಗಿ ಶಾಲೆಗಳಿಗೆ ಆರ್‌ಟಿಇ ಅಡಿಯಲ್ಲಿ ಸೀಟು ಪಡೆಯಲು ಅರ್ಜಿ ಹಾಕುವಂತೆಯೂ ಇಲ್ಲ. ಸರ್ಕಾರ ಸಹ ಆರ್‌ಟಿಇ ಕಾಯ್ದೆಯಡಿ ಪ್ರವೇಶಕ್ಕೆ ಖಾಸಗಿ ಶಾಲೆಗೂ ಮಾನ್ಯತೆ ನೀಡುವುದಿಲ್ಲ.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ಪ್ರಸ್ತುತ ಸರ್ಕಾರಿ ಶಾಲೆಗಳಿದ್ದರೂ ಅದೇ ವ್ಯಾಪ್ತಿಯ ಖಾಸಗಿ ಶಾಲೆಗಳಲ್ಲಿ ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಪ್ರವೇಶಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಇದರಿಂದಾಗಿ ಎಲ್ಲ ಮಕ್ಕಳು ಖಾಸಗಿ ಶಾಲೆಯತ್ತಲೇ ಆಕರ್ಷಣೆಯಾಗುತ್ತಿದ್ದಾರೆ. ಜತೆಗೆ ಸರ್ಕಾರಕ್ಕೂ ಸಾಕಷ್ಟು ಹೊರೆಯಾಗುತ್ತಿದೆ. ಇದನ್ನು ತಪ್ಪಿಸಿ ಸರ್ಕಾರಿ ಶಾಲೆಗಳಿಗೆ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿ ಸರ್ಕಾರಿ ಶಾಲೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಕಡ್ಡಾಯ ಶಿಕ್ಷಣ ಕಾಯ್ದೆ ನಿಯಮಾವಳಿಗೆ ತಿದ್ದುಪಡಿ ತಂದು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸಲಾಗುವುದು. ಪ್ರತಿ ಗ್ರಾಮ, ನಗರ, ವಾರ್ಡ್‌ ವ್ಯಾಪ್ತಿಯಲ್ಲಿ ಇಂತಿಷ್ಟು ಅಂತರದಲ್ಲಿ ಸರ್ಕಾರಿ ಶಾಲೆ ಇಲ್ಲದಿದ್ದರೆ ಅಂತಹ ಸಂದರ್ಭದಲ್ಲಿ ಖಾಸಗಿ ಶಾಲೆಗೆ ಆರ್‌ಟಿಇಯಡಿ ಸೇರ್ಪಡೆಯಾಗಬಹುದು. ಸರ್ಕಾರಿ ಶಾಲೆ ಇದ್ದರೆ ಅಲ್ಲಿಗೆ ಸೇರಿಸುವುದು ಕಡ್ಡಾಯವಾಗಲಿದೆ. ಸಾರ್ವನಿಕ ಶಿಕ್ಷಣ ಇಲಾಖೆ, ಜಿಲ್ಲಾ ಉಪ ನಿರ್ದೇಶಕರ ವತಿಯಿಂದ ಯಾವ್ಯಾವ ಖಾಸಗಿ ಶಾಲೆಗೆ ಆರ್‌ಟಿಇಯಡಿ ಸೇರಿಸಬಹುದು ಎಂಬ ಬಗ್ಗೆಯೂ ಸ್ಥಳೀಯವಾಗಿ ಪ್ರಕಟಣೆ ನೀಡಲಿದೆ ಎಂದು ತಿಳಿಸಿದರು.

ಉಚಿತ ಶುಲ್ಕ:
ರಾಜ್ಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಬೋಧನಾ ಶುಲ್ಕ ಸರ್ಕಾರವೇ ಭರಿಸಲು ತೀರ್ಮಾನಿಸಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಯಾಗಲಿದೆ. ಒಂದೊಮ್ಮೆ ವಿದ್ಯಾರ್ಥಿನಿಯರು ಈಗಾಗಲೇ ಪಾವತಿಸಿದ್ದರೂ ಮರುಪಾವತಿ ಮಾಡಲಾಗುವುದು. ಈ ಯೋಜನೆಯಿಂದ ಸರ್ಕಾರಕ್ಕೆ ವಾರ್ಷಿಕ 95 ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಿದರು.

Advertisement

ಇದರಿಂದ ಪ್ರಥಮ ದರ್ಜೆ ಕಾಲೇಜುಗಳ 1.84 ಲಕ್ಷ, ಪದವಿಪೂರ್ವ ಕಾಲೇಜುಗಳ 1.33 ಲಕ್ಷ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ. ಅನುದಾನಿತ ಕಾಲೇಜುಗಳ ವಿಚಾರದಲ್ಲಿ ಈಗಿರುವ ವ್ಯವಸ್ಥೆಯೇ ಮುಂದುವರಿಯುತ್ತದೆ ಎಂದು ತಿಳಿಸಿದರು.

ಉಳಿದಂತೆ, ಚಿಕಿತ್ಸೆ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ವೈದ್ಯರು ತಪ್ಪು ಎಸಗಿದರೆ ಕ್ರಮ ಕೈಗೊಳ್ಳುವ ಕುರಿತ ನಿಯಮಾವಳಿಯಲ್ಲಿ ಉದ್ದೇಶ ಪೂರ್ವಕ ಎಂಬ ಪದ ತೆಗೆಯಲು ಕೇಂದ್ರ ಗೃಹ ಇಲಾಖೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಆ ಪದ ತೆಗೆಯಲು ಕಾಯ್ದೆಗೆ ತಿದ್ದುಪಡಿ ತರಲು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾವನೆ ಸಿದ್ಧಪಡಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.

ಭೂ ಕಂದಾಯ ಕಾಯ್ದೆ ನಿಯಮಾವಳಿಗೆ ತಿದ್ದುಪಡಿ
ಕೈಗಾರಿಕೆ ಉದ್ದೇಶಕ್ಕಾಗಿ ರೈತರಿಂದ ವಶಪಡಿಸಿಕೊಳ್ಳುವ ಜಮೀನು ಕೃಷಿಯಿಂದ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಪ್ರಕ್ರಿಯೆ ಸರಳೀಕರಣಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ-1964, 95 ಕಲಂ (2) ನಿಯಮಾವಳಿಗೆ ತಿದ್ದುಪಡಿ ತರಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ.

ಕಂದಾಯ ಇಲಾಖೆಗೆ ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಸಿದರೆ ಕನಿಷ್ಠ ಒಂದು ತಿಂಗಳಲ್ಲಿ ಏಕಗವಾಕ್ಷಿ ಯೋಜನೆಯಡಿ ಪ್ರಕ್ರಿಯೆ ಪೂರ್ಣಗೊಳಿಸುವ ವ್ಯವಸ್ಥೆ ಇದಾಗಿದೆ. ಸಂಬಂಧಿಸಿದ ಪ್ರಾಧಿಕಾರ ಅಥವಾ ಸ್ಥಳೀಯ ಸಂಸ್ಥೆಗಳು ಇಂತಹ ಅರ್ಜಿಗಳ ಬಗ್ಗೆ 1 ತಿಂಗಳಲ್ಲಿ ಸಕಾರಣ ತಿಳಿಸದೇ ಕ್ರಮ ಕೈಗೊಳ್ಳದಿದ್ದರೆ ಅವರಿಂದ ಒಪ್ಪಿಗೆ ಸಿಕ್ಕಿದೆ ಎಂದೇ ಪರಿಗಣಿಸಿ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದು. ಪ್ರಸ್ತುತ ಇದು ವರ್ಷದವರೆಗೂ ವಿಳಂಬವಾಗುತ್ತಿದೆ. ಇದನ್ನು ತಪ್ಪಿಸಲು ಈ ಕ್ರಮಕ್ಕೆ ಮುಂದಾಗಿದ್ದೇವೆ. ಕೈಗಾರಿಕೆಗಳಿಗೆ ರಾಜ್ಯ ಸರ್ಕಾರವೇ ಭೂಮಿ ಸ್ವಾಧೀನಪಡಿಸಿ ಕೊಡುವುದು ಕಷ್ಟವಾಗುತ್ತಿದೆ. ಹೀಗಾಗಿ, ಕೈಗಾರಿಕೆಗಳು ತಮಗೆ ಅಗತ್ಯವಾದ ಜಮೀನು ರೈತರಿಂದ ನೇರವಾಗಿ ಖರೀದಿಸಿದರೆ ಭೂ ಪರಿವರ್ತನೆ ಪ್ರಕ್ರಿಯೆ ಸರಳ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಪ್ರಮುಖಾಂಶಗಳು
* ಆರ್ಥಿಕ ಸಂಕಷ್ಟದಲ್ಲಿರುವ ಬೀದರ್‌ ಸಹಕಾರಿ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ 20 ಕೋಟಿ ರೂ. ಆರ್ಥಿಕ ನೆರವು ನೀಡುವುದು.
* ಘಟಪ್ರಭಾ ಎಡದಂಡೆ ನಾಲೆ ಆಧುನೀಕರಣಕ್ಕೆ 573 ಕೋಟಿ ರೂ. ಯೋಜನೆಗೆ ಒಪ್ಪಿಗೆ
* ಕೆ.ಆರ್‌.ನಗರದ ಹಾಡ್ಯ ಗ್ರಾಮ ಸೇರಿ 12 ಕೆರೆ ತುಂಬಿಸುವ ಯೋಜನೆಗೆ 15 ಕೋಟಿ ರೂ. ನೆರವು
* ಮುಧೋಳ ತಾಲೂಕು ಎಡಹಳ್ಳಿಯಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ 3.24 ಕೋಟಿ ರೂ. ನೆರವು
* ಕನಕಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒಪ್ಪಿಗೆ. ಪ್ರಾರಂಭಿಕವಾಗಿ 90 ಕೋಟಿ ರೂ. ಬಿಡುಗಡೆ
* ಏರ್‌ ಶೋ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಸುತ್ತಮುತ್ತಲ ರಸ್ತೆ ಅಭಿವೃದ್ಧಿಗೆ 30 ಕೋಟಿ ರೂ.
* ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ಕ್ವಿಂಟಲ್‌ ಅಕ್ಕಿ ಪೂರೈಕೆಗೆ 87 ರೂ. ಇದ್ದ ಕಮೀಷನ್‌ 100 ರೂ.ಗೆ ಏರಿಕೆ

Advertisement

Udayavani is now on Telegram. Click here to join our channel and stay updated with the latest news.

Next