ಹುಣಸೂರು: ಸರ್ಕಾರ ನೀಡಿರುವ ಲ್ಯಾಪ್‌ಟಾಪ್ ದುರ್ಬಳಕೆ ಮಾಡಿಕೊಳ್ಳದೇ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಶಾಸಕ ಎಚ್.ಪಿ.ಮಂಜುನಾಥ್ ಸೂಚಿಸಿದರು.
ನಗರದ ಡಿ.ಡಿ.ಅರಸ್ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ನಾಲ್ಕು ಸರ್ಕಾರಿ ಕಾಲೇಜುಗಳ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಪ್ರಗತಿಗಾಗಿ ಅಂಗನವಾಡಿಯಿಂದ ಉನ್ನತ ಶಿಕ್ಷಣದವರೆಗೂ ಅನೇಕ ಕೊಡುಗೆ ನೀಡಿದೆ. ಲ್ಯಾಪ್‌ಟಾಪ್‌ನ್ನು ದುರುಪಯೋಗ ಪಡಿಸಿಕೊಳ್ಳದೆ ನಿಮ್ಮ ಉನ್ನತ ಶಿಕ್ಷಣ-ಹುದ್ದೆಗೆ ನೆರವಾಗಲೆಂದು ಆಶಿಸಿದರು.
ಇತರರಿಗೂ ಲ್ಯಾಪ್‌ಟಾಪ್: ಈಗಾಗಲೇ ಇತರೆ ವರ್ಗದ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್ ವಿತರಿಸಲು ಸರ್ಕಾರ ಮುಂದಾಗಿತ್ತು, ಆದರೆ ಕೆಲ ತಾಂತ್ರಿಕ ತೊಂದರೆಯಿಂದ ಯೋಜನೆ ಸ್ಥಗಿತಗೊಂಡಿದ್ದು, ಮುಂದೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲೂ ಪ್ರತ್ಯೇಕ ಟೆಂಡರ್ ನಡೆಸಿ ವಿತರಿಸಲು ಸರ್ಕಾರ ಮುಂದಾಗಿದೆ. ಇದರಿಂದ ಇತರೆ ವರ್ಗದ ವಿದ್ಯಾರ್ಥಿಗಳು ಸಿಕ್ಕಿಲ್ಲವೆಂದು ಬೇಸರಿಸದಿರಿ ಎಂದರು.
ಕಾರ್ಯಕ್ರಮಕ್ಕೆ ಪೋಷಕರ ಹಾಜರಿ ಕುರಿತು ಪ್ರಸ್ತಾಪಿಸಿ, ಮುಂದೆಯೂ ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆಯೂ ಇದೇ ಆಸಕ್ತಿ ಇರಲಿ ಎಂದು ಆಶಿಸಿದರು. ಕಾರ್ಯಕ್ರಮಕ್ಕೂ ಮುನ್ನ ಜಿಪಂ ಸದಸ್ಯೆ ಡಾ.ಪುಷ್ಪ ಅಮರ್‌ನಾಥ್ ಲ್ಯಾಪ್‌ಟಾಪ್ ಸೇರಿದಂತೆ ಅನೇಕ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾಲೇಜಿನ ಪ್ರಾಂಶುಪಾಲ ವೆಂಕಟೇಶಯ್ಯ ಡಿ.ಡಿ.ಅರಸ್ ಕಾಲೇಜಿಗೆ 133, ಮಹಿಳಾ ಕಾಲೇಜಿಗೆ 128, ಬಿಳಿಕೆರೆ ಕಾಲೇಜಿಗೆ 42 ಹಾಗೂ ಹನಗೋಡು ಕಾಲೇಜಿಗೆ 26 ಸೇರಿದಂತೆ ಒಟ್ಟು 339 ಲ್ಯಾಪ್‌ಟಾಪ್ ವಿತರಿಸುವ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಿಡಿಸಿ ಸಮಿತಿಯ ಪೊ›.ಸಿದ್ದೇಗೌಡ, ಗೋವಿಂದರಾಜಗುಪ್ತ, ಜಯರಾಂ, ರಾಜಶೇಖರ್, ಪ್ರಾಂಶುಪಾಲರಾದ ಡಾ.ಹನುಮಂತರಾಯ, ಜ್ಞಾನಪ್ರಕಾಶ್, ಪಶುಪತಿ, ಉಪನ್ಯಾಸಕರಾದ ಪುಟ್ಟಶೆಟ್ಟಿ, ಡಾ.ಮೋಹನ್ ಸೇರಿದಂತೆ ಉಪನ್ಯಾಸಕ ವರ್ಗ ಹಾಗೂ ಪೋಷಕರು ಭಾಗವಹಿಸಿದ್ದರು.