Advertisement

ಲೇಡಿಗೋಶನ್‌ ಆಸ್ಪತ್ರೆ ಮತ್ತಷ್ಟು ಸುಸಜ್ಜಿತ ! ಸೇರ್ಪಡೆಗೊಳ್ಳಲಿದೆ ಹೈರಿಸ್ಕ್ ಪ್ರೆಗ್ನೆನ್ಸಿ ವಾರ್ಡ್‌

01:21 AM Nov 28, 2022 | Team Udayavani |

ಮಂಗಳೂರು: ಕೆಲವು ವರ್ಷಗಳ ಹಿಂದಿನವರೆಗೂ ಮೂಲಸೌಕರ್ಯದಿಂದ ವಂಚಿತವಾಗಿದ್ದ ಮಂಗಳೂರಿನ ಲೇಡಿಗೋಶ‌ನ್‌ ಸರಕಾರಿ ಆಸ್ಪತ್ರೆ ಇಂದು ಖಾಸಗಿ ಆಸ್ಪತ್ರೆಗಳಿಗೆ ಸಮನಾಗಿ ಸುಸುಜ್ಜಿತವಾಗಿ ಅಭಿವೃದ್ಧಿಯಾಗಿದೆ. ಇದೀಗ ನೂತನವಾಗಿ ಹೈರಿಸ್ಕ್ ಪ್ರೆಗ್ನೆನ್ಸಿ ವಾರ್ಡ್‌ ಮತ್ತು ಎಂಸಿಎಚ್‌ (ಮೆಟರ್ನಿಟಿ ಆ್ಯಂಡ್‌ ಚೈಲ್ಡ್‌ ಹೆಲ್ತ್‌) ವಿಭಾಗಗಳು ಹೊಸದಾಗಿ ಸೇರ್ಪಡೆಗೊಳ್ಳಲು ಸಿದ್ಧವಾಗಿದೆ.

Advertisement

ಹಳೆ ಲೇಡಿಗೋಶನ್‌ ಕಟ್ಟಡ ಇರುವಾಗ ಐಸಿಯು ತೆರೆಯುವ ಯೋಜನೆ ಇರಲಿಲ್ಲ. ಕಟ್ಟಡ, ಜಾಗವೂ ಇರಲಿಲ್ಲ. ಆವಶ್ಯಕತೆ ಇದ್ದಲ್ಲಿ ವೆನ್ಲಾಕ್‌ ಅಥವಾ ಇತರ ಆಸ್ಪತ್ರೆಗಳಿಗೆ ಕಳುಹಿ ಸಲಾಗುತ್ತಿತ್ತು. ಹೊಸದಾಗಿ ಎಂಆರ್‌ಪಿಎಲ್‌ ಕಟ್ಟಡ ನಿರ್ಮಾಣವಾದ ಬಳಿಕ ವೆಂಟಿಲೇಟರ್‌ ಸಹಿತ 4 ಐಸಿಯು ಬೆಡ್‌ ಆರಂಭಿಸಲಾಗಿತ್ತು. ಇದೀಗ ಹೈರಿಸ್ಕ್ ವಾರ್ಡ್‌ ನಿರ್ಮಾಣವಾಗಿ ದ್ದರಿಂದ ಆಧುನಿಕ ಉಪಕರಣಗಳನ್ನು ಒಳಗೊಂಡ ಐಸಿಯು ವಾರ್ಡ್‌ ವಿಶಾಲವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್‌ ವಿಭಾಗದಿಂದ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ.

ವಾರ್ಡ್‌ನಲ್ಲಿ ಏನೇನಿದೆ ?
ಹೈರಿಸ್ಕ್ ಪ್ರಗ್ನೆನ್ಸಿ ವಾರ್ಡ್‌ನಲ್ಲಿ 4 ಐಸಿಯು ಬೆಡ್‌ಗಳು, 7 ಹೈ ಡಿಪೆಂಡೆನ್ಸಿ ಯುನಿಟ್‌, ಅದಕ್ಕೆ ಬೇಕಾಗಿರುವ ಹೈಡ್ರಾಲಿಕ್‌ ಕಾಟ್‌, 11 ಮಾನಿಟರ್‌, ತಾಯಿಯ ಗರ್ಭಕೋಶ ಮತ್ತು ಮಗುವಿನ ಸ್ಥಿತಿಗತಿಗಳನ್ನು ಪತ್ತೆ ಹಚ್ಚುವ ಕಂಪ್ಯೂಟರೈಸ್ಡ್ ಸಿಸ್ಟಮ್‌ 11, ಆಟೋಕ್ಲೇವ್‌ ಯಂತ್ರಗಳು, 15 ಕಂಪ್ಯೂಟರ್‌ಗಳನ್ನು ಸಿಸ್ಟಮ್‌ ಒಳಗೊಂಡಿದೆ. ರೋಟರಿ ಸಂಸ್ಥೆಯಿಂದ 48 ಲಕ್ಷ ರೂ. ವೆಚ್ಚದಲ್ಲಿ ಇವುಗಳನ್ನು ಒದಗಿಸಲಾಗಿದೆ.

ಎಂಸಿಎಚ್‌ ವಿಭಾಗ
ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಎಂಸಿಎಚ್‌ ವಿಭಾಗವನ್ನು 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 60 ಬೆಡ್‌ಗಳ ಸಾಮರ್ಥ್ಯ ಹೊಂದಿದೆ. ನೆಲ, ಮೊದಲ ಮಹಡಿಯಲ್ಲಿ ವಾರ್ಡ್‌ಗಳು, ಓಪಿಡಿ, ಶಸ್ತ್ರಚಿಕಿತ್ಸಾ ಕೊಠಡಿ, ಕನ್ಸಲ್ಟೆನ್ಸಿ ವಿಭಾಗಗಳಿವೆ. ಸ್ಮಾರ್ಟ್‌ ಸಿಟಿಯಿಂದ ಎರಡನೇ ಮಹಡಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಅಧೀಕ್ಷಕರ ಕಚೇರಿ ಹಾಗೂ ಸಖೀ ಕೇಂದ್ರವನ್ನೂ ಕಟ್ಟಡದಲ್ಲಿ ತೆರೆಯಲಾಗಿದೆ.

ಡಯಾಲಿಸಿಸ್‌ ಘಟಕ ಆರಂಭಿಸುವ ಉದ್ದೇಶ
ಪ್ರಸೂತಿ ರೋಗ ಅಥವಾ ಕೆಲವು ಕ್ಲಿಷ್ಟಕರ ಪ್ರಕರಣಗಳು ಬಂದಾಗ ಕಿಡ್ನಿಗೆ ಹಾನಿಯಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಡಯಾಲಿಸಿಸ್‌ ಯೂನಿಟ್‌ ಆರಂಭಿಸಿ ಲೇಡಿಗೋಶನ್‌ನಲ್ಲೇ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಸಂಬಂದಿಸಿದ ಉಪಕರಣಗಳು ಇನ್ನಷ್ಟೇ ಬರಬೇಕಾಗಿವೆ. ಸದ್ಯ ಇಂತಹ ಪ್ರಕರಣಗಳನ್ನು ವೆನ್ಲಾಕ್‌ ಡಯಾಲಿಸಿಸ್‌ ಸೆಂಟರ್‌ಗೆ ಕಳು ಹಿ ಸ ಲಾಗುತ್ತಿದೆ. ವೆಂಟಿಲೇಟರ್‌ನಲ್ಲಿ ಇರುವ ರೋಗಿಗಳನ್ನು ಆ ರೀತಿ ಸ್ಥಳಾಂತ ರಿ ಸುವುದು ಕೂಡ ಸರಿಯಲ್ಲ ಎನ್ನುತ್ತಾರೆ ವೈದ್ಯಕೀಯ ಅಧೀಕ್ಷಕ ಡಾ| ದುರ್ಗಾ ಪ್ರಸಾದ್‌.

Advertisement

ಎಂಆರ್‌ಡಿ – ಗ್ರಂಥಾಲಯ
ಪ್ರಸ್ತುತ ವೈದ್ಯಕೀಯ ಅಧೀಕ್ಷಕರ ಕಚೇರಿ ಇರುವ ಕಟ್ಟಡವನ್ನು ಎಂಆರ್‌ಡಿ (ವೈದ್ಯಕೀಯ ದಾಖಲೆಗಳ ವಿಭಾಗ) ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿದ ಪುಸ್ತಕಗಳ ಗ್ರಂಥಾಲಯವಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಇದರ ಜತೆಗೆ ಹೈರಿಸ್ಕ್ ವಾರ್ಡ್‌ನ ಮೇಲ್ಭಾಗದಲ್ಲಿ ರೋಗಿಗಳೊಂದಿಗೆ ಬರುವವರಿಗಾಗಿ ಕುಳಿತುಕೊಳ್ಳಲು ಕುರ್ಚಿ, ಕುಡಿಯುವ ನೀರು, ಶೌಚಾಲಯ, ಬಾತ್‌ರೂಮ್‌ ಮೊದಲಾದ ಸೌಲಭ್ಯಗಳನ್ನೊಳಗೊಂಡ ಕೊಠಡಿ ನಿರ್ಮಿಸಲಾಗಿದೆ.

ಲೇಡಿಗೋಶನ್‌ ಆಸ್ಪತ್ರೆ ಮತ್ತಷ್ಟು ಸುಸಜ್ಜಿತಗೊಂಡಿದ್ದು, ಹೆಚ್ಚಿನ ಸೌಕರ್ಯಗಳನ್ನು ಪಡೆದುಕೊಂಡಿದೆ. ಹೈರಿಸ್ಕ್ ವಾರ್ಡ್‌ ಮತ್ತು ಎಂಸಿಎಚ್‌ ವಿಭಾಗ ನಿರ್ಮಾಣ ಪೂರ್ಣಗೊಂಡಿದ್ದು, ಡಿಸೆಂಬರ್‌ ತಿಂಗಳಲ್ಲಿ ಉದ್ಘಾಟನೆಗೆ ಉದ್ದೇಶಿಸಲಾಗಿದೆ. ಸದ್ಯ ಪರಿಕರಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ. ಸರಕಾರದ ವತಿಯಿಂದಲೂ ಸುಮಾರು 40 ಲಕ್ಷ ರೂ. ವೆಚ್ಚದ ಪರಿಕರ-ಪೀಠೊಪಕರಣಗಳು ಬಂದಿವೆ.
-ಡಾ| ದುರ್ಗಾ ಪ್ರಸಾದ್‌
ಲೇಡಿಗೋಶನ್‌ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ

– ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next