Advertisement

ನೇಕಾರರ ಅಭಿವೃದ್ಧಿಗೆ ಸರಕಾರ ಯತ್ನ

04:20 PM Aug 11, 2022 | Team Udayavani |

ಹುಬ್ಬಳ್ಳಿ: ರಾಜ್ಯ ಸರಕಾರ ನೇಕಾರರನ್ನು ಉಳಿಸಿ-ಬೆಳೆಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪಿಸಲು ಯೋಜಿಸಲಾಗಿದೆ ಎಂದು ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

Advertisement

ಇಲ್ಲಿನ ಹಳೇಹುಬ್ಬಳ್ಳಿ ನೇಕಾರ ನಗರದ ಛಬ್ಬಿ ಪ್ಲಾಟ್‌ನಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಸ್ಥಾಪನೆಯಾದ ಹುಬ್ಬಳ್ಳಿ ವಿದ್ಯುತ್‌ ಮಗ್ಗ ನೇಕಾರರ ಉತ್ಪಾದಕರ ಕಂಪನಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರದಲ್ಲಿ ನೇಕಾರರಿಗೆ ಸಾಕಷ್ಟು ಸೌಲಭ್ಯವಿದೆ. ಶೇ. 50 ಸಬ್ಸಿಡಿ ನೀಡಲಾಗುತ್ತದೆ. ನೇಕಾರರ ಉಳಿಸಿ ಬೆಳೆಸಲು ಯತ್ನಿಸುತ್ತಿದೆ. ಅವರು ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನೇಕಾರರು ಮತ್ತು ಅವರ ಮಕ್ಕಳಿಗಾಗಿ ಯೋಜನೆ ರೂಪಿಸಲಾಗಿದೆ. 2024ರವರೆಗೆ ಜವಳಿ ನೀತಿ ಜಾರಿಯಲ್ಲಿದ್ದು, ಅದನ್ನು ಯಾರು ಬಳಕೆ ಮಾಡಿಕೊಳ್ಳುತ್ತಿಲ್ಲ. ನೇಕಾರ ಸಮ್ಮಾನ ಯೋಜನೆ ಮೂಲಕ 50 ಲಕ್ಷ ಮಂದಿಗೆ ತಲಾ 5 ಸಾವಿರ ರೂ. ನೀಡಲಾಗುತ್ತಿದೆ. ಮಕ್ಕಳಿಗೆ ಶಿಷ್ಯವೇತನ ನೀಡುತ್ತಿದ್ದರೂ ಅದನ್ನು ಬಳಸಿಕೊಳ್ಳುತ್ತಿಲ್ಲ. ಸಬ್ಸಿಡಿ ದರದಲ್ಲಿ ದಾರ ಒದಗಿಸಲಾಗುತ್ತಿದೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ನೇಕಾರರ ಉತ್ಪನ್ನಗಳ ಮಾರಾಟಕ್ಕೆ ಮಳಿಗೆ ನೀಡಲಾಗಿದೆ. ಅವರು ಜವಳಿ ನೀತಿಯ ಉಪಯೋಗ ಪಡೆಯಲು ಮುಂದಾಗಬೇಕು. ಬ್ಯಾಂಕ್‌ನಿಂದ ಸಾಲ ನೀಡುವ ಕುರಿತು ಅಧಿಕಾರಿಗಳೊಂದಿಗೆ ಸಭೆ ಮಾಡುವೆ. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಹಾವೇರಿ, ಹುಬ್ಬಳ್ಳಿ, ನವಲಗುಂದಗೆ ಜವಳಿ ಪಾರ್ಕ್‌ ಘೋಷಿಸಲಾಗಿದೆ. ಜವಳಿ ನೀತಿ ಮತ್ತು ಸಿದ್ಧ ಉಡುಪು 2024ರವರೆಗೆ ಇದೆ. ರಾಜ್ಯಕ್ಕೆ ಮೆಗಾ ಟೆಕ್ಸಟೈಲ್‌ ಪಾರ್ಕ್‌ ಬಂದರೆ ದೊಡ್ಡ ಪ್ರಮಾಣದಲ್ಲಿ ಬದಲಾವಣೆಯಾಗಲಿದೆ ಎಂದರು.

ನೇಕಾರರನ್ನು ಉಳಿಸಿ ಬೆಳೆಸುವ ಕೆಲಸಗಳಾಗಬೇಕು. ಅವರ ಕುಂದುಕೊರತೆ ಹಾಗೂ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಪಾಲಿಕೆಯಿಂದ ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ನೇಕಾರ ಕಾಲೋನಿಗೆ ಒದಗಿಸಿ, ಮಾದರಿ ನೇಕಾರ ಕಾಲೋನಿ ನಿರ್ಮಾಣಕ್ಕೆ ಶ್ರಮ ವಹಿಸಲಾಗುವುದು. ಈ ಕುರಿತು ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸುವೆ. ಜವಳಿ ಇಲಾಖೆಯ ಮಾಹಿತಿಗಳು ನೇಕಾರರಿಗೆ ತಲುಪಬೇಕು. ಉತ್ಪಾದನೆ ಮಾಡಿದ ಸೀರೆಗಳನ್ನು ತ್ವರಿತವಾಗಿ ಮಾರಾಟ ಮಾಡಬೇಕು. ಹುಬ್ಬಳ್ಳಿ ಸೀರೆ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ದೇವೇಂದ್ರ ಚುಂಚ್ಯಾ ಅವರ ಬಾಲಾಜಿ ಟೆಕ್ಸಟೈಲ್ಸ್‌ ಹಾಗೂ ಹನುಮಂತ ಪೂಜಾರಿ ಅವರ ಮಾರುತಿ ಟೆಕ್ಸಟೈಲ್ಸ್‌ ಕೈಮಗ್ಗ ಕಾರ್ಖಾನೆಗಳಿಗೆ ಭೇಟಿ ನೀಡಿ, ಸೀರೆ ನೇಯ್ಗೆ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ನೇಕಾರರು ಸಚಿವರ ಎದುರು ತಮ್ಮ ಅಳಲು ತೋಡಿಕೊಳ್ಳುತ್ತ, ಮಾಲನ್ನು ಯಾರೂ ಪಡೆಯುತ್ತಿಲ್ಲ. 2-3ಸಾವಿರ ಸೀರೆ ಹಾಗೆ ಉಳಿದಿವೆ. ಪವರ್‌ಲೂಮ್‌ನ ಶಬ್ದದಿಂದಾಗಿ ಅಕ್ಕಪಕ್ಕದ ನಿವಾಸಿಗಳು ಕಿರಿಕಿರಿ ಮಾಡುತ್ತಿದ್ದಾರೆ. ಇದಕ್ಕಾಗಿ ಪೊಲೀಸ್‌ ಠಾಣೆಗೆ ಹೋಗಬೇಕಾಯಿತು. 600 ನೇಕಾರರಲ್ಲಿ ಈಗ 200-300 ಮಾತ್ರ ಇದ್ದಾರೆ. 20 ಎಕರೆ ಜಮೀನು ನೀಡಿದರೆ ಅಲ್ಲಿಯೇ ಉದ್ಯೋಗ ಮಾಡುತ್ತೇವೆ ಎಂದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶೀಘ್ರ ಸಭೆ ಕರೆದು ಮಾರುಕಟ್ಟೆ ದರದಲ್ಲೆ ನೇಕಾರರ ಮಾಲು ಖರೀದಿಸಲು ಯತ್ನಿಸಲಾಗುವುದು. ಸರಕಾರ ಯಾವೆಲ್ಲ ಸೌಲಭ್ಯ ಬೇಕು ಹೇಳುತ್ತೇವೆ. ಯಂತ್ರಗಳು ಶಬ್ದವಾಗದಂತೆ ಕೆಲವು ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಜವಳಿ ಪಾರ್ಕ್‌ನಿಂದ 80 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ನೇಕಾರಿಕೆಯನ್ನು ನಶಿಸಲು ಬಿಡಲ್ಲ. ನೇಕಾರರು ಒಂದೇ ಕಡೆ ಉದ್ಯೋಗ ಮಾಡಲೆಂದು ಕೆಐಡಿಬಿಗೆ ಪ್ರಸ್ತಾವನೆ ಸಲ್ಲಿಸುವೆ. ಸಂಘದಿಂದ ಒಂದು ಮನವಿ ನೀಡಿದರೆ, ಸೂಕ್ತ ಕ್ರಮ ಕೈಗೊಳ್ಳುವೆ ಎಂದರು.

ಪಾಲಿಕೆ ಸದಸ್ಯೆ ಶಾಂತಕ್ಕ ಹಿರೇಮಠ, ಕೆಎಚ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಪೂಜಾರ, ಕಾರ್ಯ ನಿರ್ವಾಹಕ ಅಧಿಕಾರಿ ಸೌಂದರ್ಯ ಡಿ., ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ ಎನ್‌.ಟಿ. ನೆಗಳೂರ, ಉಪ ನಿರ್ದೇಶಕ ಕೀರ್ತಪ್ಪ ಗೋಟೂರ, ಜವಳಿ ಪ್ರವರ್ಧನಾ ಅಧಿಕಾರಿ ಅಶೋಕ ಸುರಪುರ, ಪಾಲಿಕೆ ಮಾಜಿ ಸದಸ್ಯ ಚಿತ್ತಗಿಂಜಲ, ಬಿಜೆಪಿ ಮುಖಂಡ ಬಸವರಾಜ ಅಮ್ಮಿನಬಾವಿ ಮೊದಲಾದವರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next