Advertisement
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಈ ವಿಚಾರಗಳ ಕುರಿತು ಚರ್ಚೆಗಳು ನಡೆದಿದ್ದು, ಸಭೆ ಬಳಿಕ ಸಚಿವ ದಿನೇಶ್ ಸುದ್ದಿಗಾರರಿಗೆ ವಿವರಣೆ ನೀಡಿದರು.
ಇತ್ತೀಚೆಗೆ ಪತ್ತೆಯಾದ ಭ್ರೂಣಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ನಿಗಾ ಇಡಲು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಕ್ಷಮ ಪ್ರಾಧಿಕಾರಗಳಿವೆ. ಸ್ಕ್ಯಾನಿಂಗ್ ಸೆಂಟರ್‌ಗಳ ತಪಾಸಣೆ, ಅಲ್ಲಿ ಕಂಡುಬರುವ ಲೋಪಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸಹಿತ ಇತರ ಪ್ರಕ್ರಿಯೆಗಳಿಗಾಗಿ ಆರೋಗ್ಯ ಇಲಾಖೆ ಆಯುಕ್ತರ ನೇತೃತ್ವದಲ್ಲಿ ರಾಜ್ಯ ಮಟ್ಟದ ಕಾರ್ಯಪಡೆ ಇದ್ದು, ಇದಕ್ಕೆ ಪೊಲೀಸ್ ಇಲಾಖೆಯ ಸಹಕಾರ ಬೇಕಿದೆ. ಹೀಗಾಗಿ ಪಿಸಿ ಆ್ಯಂಡ್ ಪಿಎನ್‌ಡಿಟಿ ಕಾಯ್ದೆಯಡಿ ಕಾರ್ಯಾಚರಣೆ ನಡೆಸಲು ಎಸಿಪಿ ಹಾಗೂ ಇಬ್ಬರು ಸಬ್ ಇನ್‌ಸ್ಪೆಕ್ಟರ್ ಒಳಗೊಂಡ ಅಧಿಕಾರಿಗಳ ತಂಡವನ್ನು ಪ್ರತ್ಯೇಕವಾಗಿ ನೀಡಬೇಕೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಇದಲ್ಲದೆ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿ, ಆರೋಗ್ಯಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಇರುತ್ತಾರೆ. ಇವುಗಳ ಮೇಲುಸ್ತುವಾರಿಗಾಗಿ ಶಾಸಕಿಯರಾದ ರೂಪಕಲಾ ಶಶಿಧರ್, ನಯನಾ ಮೋಟಮ್ಮ, ಲತಾ ಮಲ್ಲಿಕಾರ್ಜುನ ಹಾಗೂ ಮಾಜಿ ಸಚಿವೆ ಉಮಾಶ್ರೀ ಅವರನ್ನು ಒಳಗೊಂಡ ರಾಜ್ಯ ಮಟ್ಟದ ಸಮಿತಿ ರಚಿಸಲಾಗಿದೆ. ಇದರಲ್ಲಿ ರೇಡಿಯಾಲಜಿಸ್ಟ್, ತಜ್ಞ ವೈದ್ಯರೂ ಇರಲಿದ್ದಾರೆ. ದಂಡ ಪ್ರಮಾಣ ಹೆಚ್ಚಿಸಲೂ ಸಲಹೆ
ಗರ್ಭಿಣಿಯರ ಮಾಹಿತಿಯು ಆರೋಗ್ಯಾಧಿಕಾರಿಗಳ ಬಳಿ ಇದ್ದರೂ ಎಷ್ಟು ಜನರಿಗೆ ಹೆರಿಗೆ ಆಯಿತು? ಎಷ್ಟು ಮಂದಿಗೆ ಗರ್ಭಪಾತ ಆಯಿತು? ಅದಕ್ಕಿದ್ದ ಕಾರಣಗಳೇನು? ಹೆರಿಗೆ ಆದ ಪ್ರಕರಣಗಳು ಎಷ್ಟು? ಗರ್ಭಪಾತ ಆದ ಪ್ರಕರಣಗಳು ಎಷ್ಟು ಮುಂತಾದ ಮಾಹಿತಿ ಇರುವುದೇ ಇಲ್ಲ. ಹೀಗಾಗಿ ಏಜೆನ್ಸಿಯೊಂದರ ಮೂಲಕ ಈ ಬಗ್ಗೆ ಆಡಿಟ್ ಮಾಡಿಸಲು ಚಿಂತನೆ ನಡೆದಿದ್ದು, ಆಡಿಟ್ ವರದಿಯನ್ನು 6 ತಿಂಗಳಿಗೊಮ್ಮೆ ಮೇಲುಸ್ತುವಾರಿ ಸಮಿತಿಗೆ ಸಲ್ಲಿಸಬೇಕು. ಅಕ್ರಮ ಗರ್ಭಪಾತದಲ್ಲಿ ಭಾಗಿಯಾದ ಸ್ಕ್ಯಾನಿಂಗ್ ಸೆಂಟರ್ ಸಹಿತ ಯಾರೇ ಆರೋಪಿ ಇದ್ದರೂ 10 ಸಾವಿರ ರೂ. ದಂಡ ಮತ್ತು ಜೈಲು ಶಿಕ್ಷೆ ಇದೆ. ಇದನ್ನು ಹೆಚ್ಚಿಸುವ ಸಲಹೆಗಳು ಬಂದಿದ್ದು, ಕಾನೂನು ಇಲಾಖೆಯೊಂದಿಗೆ ಚರ್ಚಿಸಿ ಮುಂದುವರಿಯುತ್ತೇವೆ ಎಂದು ಸಚಿವರು ತಿಳಿಸಿದರು.
Related Articles
ಎಆರ್‌ಟಿ ಕೇಂದ್ರ ಮತ್ತು ಐವಿಎಫ್ ಕೇಂದ್ರಗಳು ಕೆಎಂಪಿಯಿಂದ ಪರವಾನಗಿ ಪಡೆಯುತ್ತಿದ್ದವು. ಇನ್ನು ಮುಂದೆ ಆರೋಗ್ಯ ಇಲಾಖೆಯಲ್ಲೂ ನೋಂದಾಯಿಸಿಕೊಳ್ಳುವಂತೆ ನಿಯಮದಲ್ಲಿ ಮಾರ್ಪಾಡು ಮಾಡಲಾಗುತ್ತದೆ. ಅಂತೆಯೇ ಬಾಡಿಗೆ ತಾಯಿ ವಿಚಾರವಾಗಿ ಸಾಕಷ್ಟು ಗೊಂದಲಗಳಿದ್ದು, ಅವುಗಳನ್ನು ನಿವಾರಿಸುವ ಕುರಿತೂ ಸಮಾಲೋಚನೆ ನಡೆದಿದೆ. ಬಾಡಿಗೆ ತಾಯಿ ಮೂಲಕ ಮಗು ಪಡೆಯಬೇಕಾದವರು ಇಷ್ಟು ದಿನ ಪ್ರಮಾಣಪತ್ರ ಪಡೆಯಲು ಬೆಂಗಳೂರಿಗೇ ಹೋಗಬೇಕಿತ್ತು. ಈ ಅಧಿಕಾರವನ್ನು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ)ಗೇ ನೀಡುವ ಚಿಂತನೆ ಇದ್ದು, ಇದರಿಂದ ಅಧಿಕಾರ ವಿಕೇಂದ್ರೀಕರಣವೂ ಆಗಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.
Advertisement