Advertisement

ತಲಾಖ್‌, ತಲಾಖ್‌, ತಲಾಖ್‌ಗೆ ಕೊಕ್‌

06:00 AM Dec 29, 2017 | Team Udayavani |

ನವದೆಹಲಿ: ಸುಪ್ರೀಂಕೋರ್ಟ್‌ನ “ತ್ರಿವಳಿ ತಲಾಖ್‌ ಅಸಂವಿಧಾನಿಕ’ ಎಂಬ ತೀರ್ಪಿಗೆ ಲೋಕಸಭೆಯ ಬೆಂಬಲವೂ ಸಿಕ್ಕಿದೆ. ಇನ್ನು ಸೋಮವಾರ ಮುಸ್ಲಿಂ ಮಹಿಳೆೆ(ವಿವಾಹದ ಹಕ್ಕುಗಳಿಗೆ ರಕ್ಷಣೆ)ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡನೆಯಾಗಲಿದ್ದು, ಅಲ್ಲೂ ಒಪ್ಪಿಗೆ ಸಿಕ್ಕರೆ ಶೀಘ್ರವೇ ಕಾನೂನಾಗಿ ಬದಲಾಗಲಿದೆ.

Advertisement

ಈ ಮಸೂದೆ ಪ್ರಕಾರ, ತ್ರಿವಳಿ ತಲಾಖ್‌ ಅಥವಾ ತಲಾಖ್‌ಎ ಬಿದ್ದತ್‌ ಹೇಳಿದ ಪತಿಗೆ ಮೂರು ವರ್ಷ ಜೈಲು ಶಿಕ್ಷೆ ನೀಡಬಹುದಾಗಿದೆ. ಅಲ್ಲದೆ ದಿಢೀರ್‌ ತಲಾಖ್‌ ಹೇಳಿದಾಕ್ಷಣ ಪತ್ನಿ ಮ್ಯಾಜಿಸ್ಟ್ರೇಟ್‌ಗೆ ಪತಿ ವಿರುದ್ಧ ದೂರು ನೀಡಬಹುದಾಗಿದೆ. ಅಲ್ಲದೆ ತನ್ನ ಅಪ್ರಾಪ್ತ ವಯಸ್ಸಿನ ಮಕ್ಕಳಿಗೂ ಮ್ಯಾಜಿಸ್ಟ್ರೇಟ್‌ ಕಡೆಯಿಂದಲೇ ರಕ್ಷಣೆ ಕೊಡಿಸಬಹುದಾಗಿದೆ.

ಎನ್‌ಡಿಎ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಮಸೂದೆ ಎಂದೇ ಬಿಂಬಿತವಾಗಿದ್ದ ಮುಸ್ಲಿಂ ಮಹಿಳೆ(ವಿವಾಹದ ಹಕ್ಕುಗಳಿಗೆ ರಕ್ಷಣೆ)ಮಸೂದೆಯನ್ನು ಗುರುವಾರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ಕೆಳಮನೆಯಲ್ಲಿ ಮಂಡಿಸಿದರು. ಬಳಿಕ ಸುದೀರ್ಘ‌ ಚರ್ಚೆ ನಡೆದು, ಮುಸ್ಲಿಂ ಲೀಗ್‌, ಆರ್‌ಜೆಡಿ, ಬಿಜೆಡಿ, ಎಐಎಡಿಎಂಕೆಗಳ ವಿರೋಧದ ನಡುವೆಯೂ ಮಸೂದೆಗೆ ಅಂಗೀಕಾರ ಸಿಕ್ಕಿತು. ಗುರುವಾರ ರಾತ್ರಿ 7.30ರ ಸುಮಾರಿಗೆ ಧ್ವನಿಮತದ ಮೂಲಕ ಮಸೂದೆಗೆ ಒಪ್ಪಿಗೆ ದೊರೆಯಿತು. ವಿಶೇಷವೆಂದರೆ, ಕಾಂಗ್ರೆಸ್‌ ಈ ಮಸೂದೆಗೆ ಸಂಪೂರ್ಣ ಬೆಂಬಲ ನೀಡಿತು.

ಗುರುವಾರ ಬೆಳಗ್ಗೆಯೇ ಬಿಜೆಪಿ ಸಂಸದೀಯ ಪಕ್ಷದ ಸಭೆ ಬಳಿಕ ಈ ಮಸೂದೆ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಎಲ್ಲಾ ಪಕ್ಷಗಳೂ ಈ ಮಸೂದೆ ಬೆನ್ನಿಗೆ ನಿಲ್ಲಲಿ ಎಂದು ಮನವಿ ಮಾಡಿದ್ದರು. ಈ ಮೂಲಕ ಮುಸ್ಲಿಂ ಮಹಿಳೆಯರ ಗೌರವ ಕಾಪಾಡುವ ಮಹತ್ವದ ಹೊಣೆ ನಮ್ಮ ಮೇಲಿದೆ ಎಂದೂ ಅವರು ಹೇಳಿದ್ದರು.

ಕಾಂಗ್ರೆಸ್‌ ಮೇಲೆ ಕರ್ನಾಟಕ ಎಫೆಕ್ಟ್!
ಈಗಾಗಲೇ ಈ ವಿಚಾರವಾಗಿಯೇ ಕಾಂಗ್ರೆಸ್‌ ಹಲವಾರು ಬಾರಿ ಏಟು ತಿಂದಿದೆ. 30 ವರ್ಷಗಳ ಹಿಂದಿನ ಶಾ ಬಾನೋ ಪ್ರಕರಣದಲ್ಲಿ ರಾಜೀವ್‌ ಗಾಂಧಿ ಸರ್ಕಾರ ಸುಪ್ರೀಂಕೋರ್ಟ್‌ನ ತೀರ್ಪು ಪಕ್ಕಕ್ಕೆ ಸರಿಸಿ, ಸಂಸತ್‌ ಮೂಲಕ ಕಾಯ್ದೆ ಮಾಡಿ ತ್ರಿವಳಿ ತಲಾಖ್‌ಗೆ ರಕ್ಷಣೆ ನೀಡಿತ್ತು. ಶಾ ಬಾನೋ ಕೇಸನ್ನೇ ಆಧಾರವಾಗಿಟ್ಟುಕೊಂಡಿದ್ದ ಎನ್‌ಡಿಎ ಸರ್ಕಾರ, ಸುಪ್ರೀಂಕೋರ್ಟ್‌ನ ತೀರ್ಪಿನ ಆಧಾರದಲ್ಲಿ ಮಸೂದೆ ರೂಪಿಸಿತ್ತು. ಅಲ್ಲದೆ ಸುಪ್ರೀಂನಲ್ಲೂ ತ್ರಿವಳಿ ತಲಾಖ್‌ಗೆ ಬಹುವಾಗಿಯೇ ವಿರೋಧಿಸಿತ್ತು. 

Advertisement

ಬಿಜೆಪಿಯ ಈ ನಡೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಲಾಭ ತಂದುಕೊಟ್ಟಿತ್ತು. ಇದೇ ಕಾರಣಕ್ಕೆ ಈ ಬಾರಿ ಎಚ್ಚರಿಕೆಯ ನಡೆ ಇಟ್ಟ ಕಾಂಗ್ರೆಸ್‌, ತ್ರಿವಳಿ ತಲಾಖ್‌ ರದ್ದು ಮಾಡುವ ಮಸೂದೆಗೆ ಬೆಂಬಲಿಸುವ ನಿರ್ಧಾರ ತೆಗೆದುಕೊಂಡಿದೆ. ಅಲ್ಲದೇ ಸದ್ಯದಲ್ಲೇ ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳ ವಿಧಾನಸಭೆ ಚುನಾವಣೆ ಇರುವುದರಿಂದ ಮುಸ್ಲಿಂ ಮಹಿಳೆಯರ ಸಿಟ್ಟಿಗೆ ಒಳಗಾಗಬಾರದು ಎಂಬ ಕಾರಣಕ್ಕೆ ಈ ತೀರ್ಮಾನ ತೆಗೆದುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.

ಲೋಕಸಭೆಯಲ್ಲಿ ಚರ್ಚೆ
ವಿರೋಧದ ನಡುವೆಯೂ ಅನುಮೋದನೆ: ಗುರುವಾರ ಮಂಡಿಸಿದ ನಂತರದಲ್ಲಿ ಕಾಂಗ್ರೆಸ್‌, ಆರ್‌ಜೆಡಿ, ಎಂಐಎಂ, ಬಿಜೆಡಿ, ಎಐಎಡಿಎಂಕೆ ಮತ್ತು ಮುಸ್ಲಿಮ್‌ ಲೀಗ್‌ ವಿರೋಧ ವ್ಯಕ್ತಪಡಿಸಿದ್ದವು. ಮಸೂದೆಯಲ್ಲಿ ವಿಧವೆಯರಿಗೆ ಭದ್ರತೆ ಒದಗಿಸಿಲ್ಲ. ಹೀಗಾಗಿ ಇದನ್ನು ಈಗಲೇ ಮತಕ್ಕೆ ಹಾಕುವುದರ ಬದಲಿಗೆ ಸ್ಥಾಯೀ ಸಮಿತಿಗೆ ಕಳುಹಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿತ್ತು. ಇನ್ನು ಈ ಮಸೂದೆ ಸಂಪೂರ್ಣ ದೋಷಯುಕ್ತವಾಗಿದೆ. ಮುಸ್ಲಿಂ ವೈಯಕ್ತಿಕ ಕಾನೂನಿಗೆ ವಿರುದ್ಧವಾಗಿದೆ ಎಂದು ಇತರ ಪಕ್ಷಗಳು ವಿರೋಧಿಸಿದ್ದವು. ಇನ್ನು ಟಿಎಂಸಿ ಮಸೂದೆ ಮಂಡನೆಗೂ ಮುನ್ನ ವಿರೋಧಿಸಿತ್ತಾದರೂ, ಮಂಡಿಸಿದ ನಂತರ ವಿರೋಧವನ್ನಾಗಲೀ ಅನುಮೋದನೆಯನ್ನಾಗಲೀ ವ್ಯಕ್ತಪಡಿಸಿಲ್ಲ. ಕಾಂಗ್ರೆಸ್‌ ಈ ಬಗ್ಗೆ ಚರ್ಚೆ ನಡೆಸಲು ನೋಟಿಸ್‌ ನೀಡಿಲ್ಲದಿದ್ದರಿಂದ ಸಂಸದರಿಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಕೂಡ ಮಸೂದೆಯನ್ನು ವಿರೋಧಿಸಿದರು.

ಬಿದ್ದು ಹೋದ ತಿದ್ದುಪಡಿಗಳು
ಎಂಐಎಂ ಮುಖಂಡ ಅಸಾದುದ್ದೀನ್‌ ಓವೈಸಿ ಮತ್ತು ಬಿಜೆಡಿಯ ಭತೃìಹರಿ ಮಹ್ತಾಬ್‌ ಸೇರಿದಂತೆ ಇತರರು ಮಂಡಿಸಿದ ನಾಲ್ಕು ತಿದ್ದುಪಡಿಗಳು ಧ್ವನಿಮತದ ವೇಳೆ ಅನುಮೋದನೆ ಪಡೆಯಲಿಲ್ಲ. ನಂತರ ಧ್ವನಿಮತದಿಂದ ಮಸೂದೆಯನ್ನು ಅನುಮೋದಿಸಲಾಯಿತು. ಇನ್ನು ಮಸೂದೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಬೇಕಿದ್ದು, ರಾಷ್ಟ್ರಪತಿ ಸಹಿ ಹಾಕಿದ ನಂತರ ಕಾನೂನಾಗಿ ಜಾರಿಗೆ ಬರಲಿದೆ.

ಕಾನೂನಿನಲ್ಲೇನಿದೆ?
– ಈ ಕಾನೂನು ಕೇವಲ ತಲಾಖ್‌ ಎ ಬಿದ್ದತ್‌ ಅಥವಾ ತ್ರಿವಳಿ ತಲಾಖ್‌ಗೆ ಮಾತ್ರ ಅನ್ವಯ
– ತ್ರಿವಳಿ ತಲಾಖ್‌ಅನ್ನು ಯಾವುದೇ ರೂಪದಲ್ಲಿ ಅಂದರೆ, ಮಾತಿನಲ್ಲಿ, ಲಿಖೀತವಾಗಿ ಅಥವಾ ಎಲೆಕ್ಟ್ರಾಕ್‌ ರೂಪದಲ್ಲಿ ನೀಡಿದರೂ ಅದು ಅಕ್ರಮ ಮತ್ತು ಅನರ್ಹ. ಇಮೇಲ್‌, ಎಸ್‌ಎಂಎಸ್‌ ಅಥವಾ ವಾಟ್ಸಾಪ್‌ನಲ್ಲೂ ತ್ರಿವಳಿ ತಲಾಖ್‌ ನೀಡುವಂತಿಲ್ಲ
– ತ್ರಿವಳಿ ತಲಾಖ್‌ ನೀಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಇದು ಜಾಮೀನು ರಹಿತ ಅಪರಾಧವಾಗಿರಲಿದೆ.
– ಪತ್ನಿಯು ತನಗೆ ಹಾಗೂ ಮಕ್ಕಳಿಗೆ ಜೀವನಾಂಶ ಕೋರಿ ಮ್ಯಾಜಿಸ್ಟ್ರೇಟ್‌ ಮೊರೆ ಹೋಗಬಹುದು
– ಕಾನೂನು ಜಮ್ಮು ಕಾಶ್ಮೀರಕ್ಕೆ ಅನ್ವಯವಾಗದು. ಉಳಿದಂತೆ ಎಲ್ಲ ರಾಜ್ಯಗಳಿಗೂ ಅನ್ವಯ.

ಇದು ಐತಿಹಾಸಿಕ ದಿನವಾಗಿದೆ. ತ್ರಿವಳಿ ತಲಾಖ್‌ ಎಂಬುದು ಮಾನವೀಯತೆಯ ವಿಚಾರ. ಇದು ರಾಜಕೀಯವಲ್ಲ. ಮುಸ್ಮಿಂ ದೇಶಗಳೇ ಈ ತ್ರಿವಳಿ ತಲಾಖ್‌ಅನ್ನು ನಿಯಂತ್ರಿಸಿವೆ.
– ರವಿಶಂಕರ್‌ ಪ್ರಸಾದ್‌, ಸಚಿವ

ವಿವಾಹ ಎನ್ನುವುದು ಸಾಮಾಜಿಕ ಬಂಧ. ಇದನ್ನು ಹೇಗೆ ನೀವು ಅಪರಾಧ ಎನ್ನುತ್ತೀರಿ? ಸಾಮಾಜಿಕ ಕಾನೂನುಗಳು ಸಮಸ್ಯೆ ಪರಿಹರಿಸುವುದಿಲ್ಲ. ಸಮಾಜವನ್ನೇ ಸುಧಾರಿಸಬೇಕು.
– ಅಸಾದುದ್ದೀನ್‌ ಓವೈಸಿ, ಎಂಐಎಂ ಮುಖಂಡ

ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಿಶ್ವಾಸಾರ್ಹತೆಯೇನು? ಸಮುದಾಯದ ಪ್ರತಿನಿಧಿ -ಎಂದು ಯಾರು ಅವರನ್ನು ಆಯ್ಕೆ ಮಾಡಿದವರು?
– ಎಂ.ಜೆ.ಅಕºರ್‌, ವಿದೇಶಾಂಗ ರಾಜ್ಯ ಖಾತೆ ಸಚಿವ

ತ್ರಿವಳಿ ತಲಾಖ್‌ಗೆ ಎಲ್ಲರೂ ವಿರೋಧಿಸುತ್ತಾರೆ. ಆದರೆ ಕುಟುಂಬ ವಿವಾದವನ್ನು ಅಪರಾಧ ಎನ್ನಲಾಗದು. ಇದನ್ನು ಅಪರಾಧವನ್ನಾಗಿಸಿದರೆ ಇಡೀ ಕುಟುಂಬ ಸಮಸ್ಯೆಗೊಳಗಾಗುತ್ತದೆ.
– ಸುಪ್ರಿಯಾ ಸುಳೆ, ಎನ್‌ಸಿಪಿ

ಪರಿಹಾರ ಬಯಸಿ ಕಾಯುತ್ತಿರುವ ಮಹಿಳೆಯರ ನೆರವಿಗೆ ಸರ್ಕಾರವು ನಿಧಿಯನ್ನು ರೂಪಿಸುತ್ತದೆಯೇ?
– ಸುಷ್ಮಿತಾ ದೇವ್‌, ಕಾಂಗ್ರೆಸ್‌

Advertisement

Udayavani is now on Telegram. Click here to join our channel and stay updated with the latest news.

Next