Advertisement

ಸರ್ಕಾರಿ ಕೈಗಾರಿಕಾ ಕೇಂದ್ರಕ್ಕೆ ಬೇಕಿದೆ ಕಾಯಕಲ್ಪ

03:38 PM Jun 29, 2022 | Team Udayavani |

ಹುಬ್ಬಳ್ಳಿ: ರಾಜ್ಯದ ಎರಡನೇ ಹಳೆಯ ಹಾಗೂ ಜಿಲ್ಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ಕೈಗಾರಿಕೆ ತರಬೇತಿ ಕೇಂದ್ರಕ್ಕೆ ಕಾಯಕಲ್ಪ ಅಗತ್ಯವಿದೆ.

Advertisement

ಆರು ದಶಕಗಳ ಹಿಂದಿನ ಕಾರ್ಯಾಗಾರಕ್ಕೆ ಒಂದಿಷ್ಟು ದುರಸ್ತಿ ಭಾಗ್ಯ ದೊರೆಯಬೇಕಾಗಿದೆ. ಇದರ ದುರಸ್ತಿಗೆ ಆಗಾಗ ಸರಕಾರಕ್ಕೆ ಪತ್ರ ಬರೆದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ.

ರಾಜ್ಯದಲ್ಲಿ ಕೈಗಾರಿಕೆ ತರಬೇತಿ ನೀಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಮೊದಲ ಐಟಿಐ ಆರಂಭಿಸಲಾಯಿತು. ನಂತರ ಉತ್ತರ ಕರ್ನಾಟಕದ ಭಾಗದ ವಿದ್ಯಾಥಿಗಳಿಗೂ ತರಬೇತಿ ಅಗತ್ಯತೆ ಮನಗಂಡು 1957ರಲ್ಲಿ ರಾಜ್ಯದ ಎರಡನೇ ತರಬೇತಿ ಕೇಂದ್ರವಾಗಿ ಇಲ್ಲಿನ ವಿದ್ಯಾನಗರದಲ್ಲಿ ಆರಂಭಿಸಲಾಯಿತು. ಅಂದು ನಿರ್ಮಿಸಿದ ಕಾರ್ಯಾಗಾರದಲ್ಲಿಯೇ ಇಂದಿಗೂ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ, ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ. ಆದರೆ ವರ್ಷದಿಂದ ವರ್ಷಕ್ಕೆ ಕಟ್ಟಡಕ್ಕೆ ಒಂದಿಷ್ಟು ದುರಸ್ತಿ ಅಗತ್ಯವಿದೆ. ಇತ್ತೀಚಿನ ವರ್ಷಗಳಲ್ಲಿ ದುರಸ್ತಿಗೆ ಬೇಡಿಕೆ ಸಲ್ಲಿಸಿದರೂ ಸರಕಾರದಿಂದ ಸ್ಪಂದನೆ ದೊರೆಯದಂತಾಗಿದೆ.

ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಐಟಿಐ ಕಾಲೇಜುಗಳಿದ್ದರೂ ಇಲ್ಲಿನ ಕೇಂದ್ರದಲ್ಲಿ ಹಳೆಯ ಹಾಗೂ ಹೊಸದಾಗಿ ಸೇರಿ ಒಟ್ಟು 21ವೃತ್ತಿ ಘಟಕಗಳಿವೆ (ಟ್ರೇಡ್‌ಗಳು)ಎನ್ನುವ ಕಾರಣಕ್ಕೆ ಸಾಕಷ್ಟು ಬೇಡಿಕೆಯಿದೆ. ವಿಪರ್ಯಾಸ ಎಂದರೆ ಈ ಕಾಲೇಜು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಸಮರ್ಪಕ ಕಾರ್ಯಾಗಾರ ಇಲ್ಲದಂತಾಗಿದೆ. ಮಳೆ ಬಂದರೆ ಸಾಕು ವಿದ್ಯಾರ್ಥಿಗಳ ಪಾಡು ಹೇಳತೀರದು. ಮೇಲಿನ ಗಾಜು ಒಡೆದ ಪರಿಣಾಮ ಮಳೆ ನೀರು ಯಂತ್ರಗಳು, ವಿದ್ಯಾರ್ಥಿಗಳ ಮೇಲೆ ಸುರಿಯುತ್ತದೆ. ಇನ್ನೂ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸುವಂತಾಗಿದೆ.

ಆರು ದಶಕಗಳ ಹಿಂದಿನ ಕಟ್ಟಡ: ಸರಕಾರಿ ಐಟಿಐ ಕಾಲೇಜಿನಲ್ಲಿರುವ ಈ ಕಾರ್ಯಾಗಾರವನ್ನು 1957ರಲ್ಲಿ ನಿರ್ಮಿಸಲಾಗಿದೆ. ಅಂದಿನಿಂದ ಇಂದಿನವರೆಗೂ ಇದೇ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಆಸರೆ. ಈ ಬೃಹದಾಕಾರದ ಕಟ್ಟಡದ ಮೇಲ್ಭಾಗವನ್ನು ಗಾಜಿನಿಂದ ನಿರ್ಮಿಸಲಾಗಿದೆ. ವರ್ಷ ಕಳೆದಂತೆ ಗಾಜುಗಳು ಒಡೆದು ಬೀಳುತ್ತಿವೆ. ಹೀಗಾಗಿ ಮಳೆ ನೀರು, ಧೂಳು, ಗಾಳಿ ಎಲ್ಲವೂ ಕಾರ್ಯಾಗಾರದ ಕಟ್ಟಡದೊಳಗೆ ನುಗ್ಗುವಂತಾಗಿದೆ. ಮಳೆಗಾಲ ಶುರುವಾದರೆ ಸಾಕು ವಿದ್ಯಾರ್ಥಿಗಳು ಮಳೆ ಹನಿ ನೀರು ಬೀಳದ ಜಾಗ ನೋಡಿಕೊಂಡು ಕುಳಿತುಕೊಳ್ಳಬೇಕು. ಇನ್ನೂ ಅಳವಡಿಸಿರುವ ಯಂತ್ರಗಳ ಮೇಲೆ ಪ್ಲಾಸ್ಟಿಕ್‌ ಹಾಳೆ ಹೊದಿಸಿ ರಕ್ಷಿಸುವ ಕಾರ್ಯ ಉಪನ್ಯಾಸಕರು-ವಿದ್ಯಾರ್ಥಿಗಳದ್ದಾಗಿದೆ.

Advertisement

ಬಹು ದೊಡ್ಡ ಕೇಂದ್ರವಿದು: ಈ ಕೇಂದ್ರದಲ್ಲಿ ಹಳೆಯ ಹಾಗೂ ಹೊಸ ಸೇರಿ 18 ವೃತ್ತಿ ಘಟಕಗಳು (ಟ್ರೇಡ್‌ಗಳು), ಇತ್ತೀಚೆಗೆ 3 ಸೇರಿ 21 ಟ್ರೇಡ್‌ ಗಳಿವೆ. ಒಂದು ವರ್ಷ, ಎರಡು ವರ್ಷದ ಕೋರ್ಸ್‌ಗಳು ಇರುವುದರಿಂದ ಪ್ರತಿ ವರ್ಷ ಕನಿಷ್ಠ 500-600 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಇತರೆ ಎರಡು ಲ್ಯಾಬ್‌ ಇದ್ದರೂ ಬಹುತೇಕ ಟ್ರೇಡ್‌ಗಳ ಪ್ರಾಯೋಗಿಕ ತರಬೇತಿಗೆ ಇದೇ ಕಾರ್ಯಾಗಾರ ಬೇಕು. ಆರು ದಶಕ ಹಳೆಯದಾದ ಈ ಕಟ್ಟಡ ಇಂದಿಗೂ ಬಳಕೆ ಯೋಗ್ಯವಾಗಿದ್ದರೂ ದುರಸ್ತಿಯ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುವಂತಾಗಿದೆ.

ಹೊಸತನಕ್ಕಿರುವ ಕಾಳಜಿ ಹಳೆಯದಿಕ್ಕಿಲ್ಲ: ವಿದ್ಯಾರ್ಥಿಗಳಿಗೆ ಕೈಗಾರಿಕೆ ತರಬೇತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಸರಕಾರ ಹೊಸ ಕಾಲೇಜುಗಳ ಆರಂಭಕ್ಕೆ ಹೆಚ್ಚು ಆಸಕ್ತಿ ತೋರುತ್ತದೆ. ನಾಲ್ಕೈದು ಟ್ರೇಡ್‌ಗಳಿದ್ದರೂ ಭೂಮಿ ಖರೀದಿ, ಹೊಸ ಕಟ್ಟಡ ನಿರ್ಮಾಣಕ್ಕೆ ಕಾಳಜಿ ತೋರುತ್ತಿವೆ. ದುರಸ್ತಿ, ಮೇಲ್ದರ್ಜಗೇರಿಸುವ ಕಾರ್ಯಕ್ಕೆ ಮೀಸಲಿಡುವ ಅನುದಾನವನ್ನು ಹೊಸ ಕೇಂದ್ರಗಳ ಆರಂಭಕ್ಕೆ ವರ್ಗಾಯಿಸುತ್ತಿರುವುದರಿಂದ ಅನುದಾನ ಕೊರತೆ ಎನ್ನಲಾಗುತ್ತಿದೆ. ಹಲವು ವರ್ಷಗಳಿಂದ ಈ ಕೇಂದ್ರದ ಪ್ರಾಚಾರ್ಯರು ದುರಸ್ತಿ ಕೋರಿ ಪತ್ರಗಳನ್ನು ಬರೆದಿದ್ದಾರೆ. ಯಾವುದೂ ಫಲ ನೀಡದ ಪರಿಣಾಮ ಈ ಕ್ಷೇತ್ರದ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ನೇರವಾಗಿ ಮನವಿ ಮಾಡಿದ್ದಾರೆ.

ಮೂಲ ಸೌಲಭ್ಯ ಕೊರತೆ: ಈಗಾಗಲೇ ಹಳೆಯ ಶೌಚಾಲಯ ಬಳಕೆ ಯೋಗ್ಯವಿಲ್ಲದಂತಾಗಿದ್ದು, ಹೊಸದಾಗಿ 15 ಶೌಚಾಲಯದ ಬೇಡಿಕೆಯಿದೆ. ನಿರ್ವಹಣೆಗೆ ಸರಕಾರದಿಂದ ಒಂದಿಷ್ಟು ಅನುದಾನವಿದ್ದರೂ ವಿದ್ಯುತ್‌ ಬಿಲ್‌, ದೂರವಾಣಿ ಬಿಲ್‌, ಆಸ್ತಿ ಕರ, ನೀರಿನ ಕರ ಹೀಗೆ ಎಲ್ಲವನ್ನೂ ಇದರಲ್ಲಿ ನಿರ್ವಹಿಸಬೇಕು. ಈ ಅನುದಾನ ಪ್ರತಿ ವರ್ಷ ಸಕಾಲಕ್ಕೆ ದೊರೆಯದ ಪರಿಣಾಮ ಕಟ್ಟಡ ದುರಸ್ತಿ ಇಲ್ಲದಂತಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಈ ಎಲ್ಲಾ ಕಾರ್ಯಗಳು ಆಗಲಿವೆ ಎನ್ನುವ ಭರವಸೆ ಇಲ್ಲಿನ ವಿದ್ಯಾರ್ಥಿಗಳು, ಬೋಧಕರಲ್ಲಿದೆ.

ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಕಾರ್ಯಾಗಾರದ ಕಟ್ಟಡದ ದುರಸ್ತಿ ಕುರಿತು ಬೇಡಿಕೆ ಸಲ್ಲಿಸಿದ್ದಾರೆ. ಇದಕ್ಕೆ ತಗಲುವ ಅಂದಾಜು ವೆಚ್ಚದ ಕುರಿತು ವರದಿ ತಯಾರಿಸಿ ನೀಡುವಂತೆ ಸೂಚಿಸಿದ್ದೇನೆ. ಸಂಬಂಧಿಸಿದ ಇಲಾಖೆಯಿಂದ ಅನುದಾನ ಅಥವಾ ಇತರೆ ಯಾವುದಾದರೂ ಅನುದಾನದ ಮೂಲಕ ದುರಸ್ತಿ ಮಾಡಿಸುವ ಕೆಲಸ ಮಾಡಲಾಗುವುದು.  –ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ.

ಹಳೆಯ ಕಾರ್ಯಾಗಾರ ಕಟ್ಟಡ ಸುಸ್ಥಿತಿಯಲ್ಲಿದ್ದು, ಸಣ್ಣ ಪುಟ್ಟ ದುರಸ್ತಿಯಿದೆ. ಇಲ್ಲಿ 18 ವೃತ್ತಿಪರ ಘಟಕಗಳ ತರಬೇತಿ ನಡೆಯುತ್ತಿವೆ. ಅಗತ ದುರಸ್ತಿ ಕುರಿತು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅಂದಾಜು ವೆಚ್ಚದ ಪಟ್ಟಿ ತಯಾರಿಸುವಂತೆ ಸೂಚಿಸಿದ್ದಾರೆ. ಆದಷ್ಟು ಶೀಘ್ರದಲ್ಲಿ ದುರಸ್ತಿಯಾಗುವ ಭರವಸೆಯಿದೆ.  –ನಾಗರತ್ನಾ ಕೋಟೂರು, ಪ್ರಾಚಾರ್ಯರು, ಸರಕಾರಿ ಕೈಗಾರಿಕೆ ತರಬೇತಿ ಕೇಂದ್ರ.

ಮಳೆ ಬಂದರೆ ಸಾಕು ಎಲ್ಲವೂ ನಮ್ಮ ಮೇಲೆ, ಇಲ್ಲಿರುವ ಯಂತ್ರಗಳ ಮೇಲೆ ಬೀಳುತ್ತದೆ. ಅಲ್ಲಲ್ಲಿ ಗೋಡೆ ಬಿರುಕು ಬಿಟ್ಟಿದೆ. ಒಂದಿಷ್ಟು ರಿಪೇರಿ ಮಾಡಿದರೆ ಯಾವುದೇ ಸಮಸ್ಯೆಯಿಲ್ಲ. ಸರಕಾರಿ ಕೈಗಾರಿಕೆ ತರಬೇತಿ ಕೇಂದ್ರ ಎನ್ನುವ ಕಾರಣಕ್ಕೆ ಅಧಿಕಾರಿಗಳು, ಎಂಎಲ್‌ಎ, ಮಿನಿಸ್ಟರ್‌ಗಳು ನಿರ್ಲಕ್ಷ್ಯ ಮಾಡಬಾರದು. –ಶಹಾಬುದ್ದಿನ್‌ ಬೇಪಾರಿ, ವಿದ್ಯಾರ್ಥಿ

-ಹೇಮರಡ್ಡಿ ಸೈದಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next