Advertisement

ನೌಕರಶಾಹಿಯ ದಕ್ಷತೆಗೆ ಸರಕಾರದ ಪ್ರೋತ್ಸಾಹ ಅಗತ್ಯ

11:31 PM Jan 19, 2022 | Team Udayavani |

ಯಾವುದೇ ಸರಕಾರಿ ಅಧಿಕಾರಿ ಅಥವಾ ನೌಕರ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಎಡವಿದ್ದಾನೆ ಅಥವಾ ಲೋಪ ಎಸಗಿದ್ದಾನೆ ಎಂದಾದಲ್ಲಿ ಸೇವಾ ನಿಯಮಾವಳಿಗಳ ಪ್ರಕಾರ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಜನರನ್ನು ಸಮಾಧಾನಿಸುವ ಭರದಲ್ಲಿ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬೇಕಾಬಿಟ್ಟಿಯಾಗಿ ಹೇಳಿಕೆ ನೀಡಿದಲ್ಲಿ ಇಡೀ ಅಧಿಕಾರಿ ಮತ್ತು ನೌಕರ ವರ್ಗದ ಬಗೆಗೆ ಜನರು ತಾತ್ಸಾರ ಮನೋಭಾವ ತಾಳುವ ಸಾಧ್ಯತೆ ಇದೆ. ಇದು ಅಧಿಕಾರಿ ವರ್ಗದ ಕರ್ತವ್ಯ ನಿರ್ವಹಣೆ ಮತ್ತು ಕಾರ್ಯ ದಕ್ಷತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಸಾರ್ವ ಜನಿಕ ಹಿತಾಸಕ್ತಿ ರಕ್ಷಣೆಯ ಜತೆಜತೆಯಲ್ಲಿ ಅಧಿಕಾರಿ ವರ್ಗದ ರಕ್ಷಣೆಯೂ ಅತೀ ಮುಖ್ಯವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳಾಗಲೀ, ಹಿರಿಯ ಅಧಿಕಾರಿಗಳಾಗಲೀ ಒಂದಿಷ್ಟು ವಿವೇಚನೆ ಯಿಂದ ಮುಂದಿನ ಹೆಜ್ಜೆ ಇಡುವುದು ಅತ್ಯಗತ್ಯ. ಇಲ್ಲಿ ಸೇವಾ ನಿಯಮಾವಳಿಗಳು ಮತ್ತು ಕಾನೂನಿಗನುಸಾರವಾಗಿ ಕಾರ್ಯ ನಿರ್ವಹಿಸಬೇಕು.

Advertisement

ನಮ್ಮ ಆಡಳಿತಕ್ಕೆ ನಾವು ರೂಪಿಸಿಕೊಂಡ ಸಂಹಿತೆ ಯಂತೆ ಮೂರು ಶಾಖೆಗಳು ಪ್ರತ್ಯಪ್ರತ್ಯೇಕವಾದರೂ ಒಂದೇ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸುತ್ತವೆ. ಆ ಶಾಖೆಗಳೆಂದರೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ. ಈ ಅಂಗಗಳು ಸ್ವತಂತ್ರವಾದರೂ ಒಂದಕ್ಕೊಂದು ಪೂರಕವಾಗಿರಬೇಕು ಎಂಬುದು ಸಂವಿಧಾನದ ಆಶಯ. ಈ ಅಭಿಪ್ರಾಯವನ್ನು ಸರ್ವೋಚ್ಚ ನ್ಯಾಯಾಲಯ ಅನೇಕ ಬಾರಿ ಉತ್ಛರಿಸಿದೆ. ಇದು ನಮ್ಮ ಆಡಳಿತ ಯಂತ್ರದ ವಿವಿಧ ಭಾಗಗಳು ಹಾಗೂ ಕಾರ್ಯ ವಿಧಾನ.

ನಮ್ಮ ಆಡಳಿತ ಯಂತ್ರದ ಚಲನೆ ಆರಂಭ ವಾಗುವುದೇ ಶಾಸಕಾಂಗದಿಂದ. ಶಾಸನ ಸಭೆಗೆ ಚುನಾವಣೆಯಾಗುತ್ತಲೇ ಬಹುಮತವುಳ್ಳ ರಾಜ ಕೀಯ ಪಕ್ಷ ಆಡಳಿತಕ್ಕೆ ಬರುವುದು ಸಹಜವಷ್ಟೇ! ಆ ಪಕ್ಷದ ಅಥವಾ ಗುಂಪಿನ ಮುಖಂಡನನ್ನು ಕೇಂದ್ರದಲ್ಲಿ ಪ್ರಧಾನ ಮಂತ್ರಿಯಾಗಿಯೂ ರಾಜ್ಯದಲ್ಲಿ ಮುಖ್ಯಮಂತ್ರಿಯನ್ನಾಗಿ ಕ್ರಮವಾಗಿ ರಾಷ್ಟ್ರಪತಿ ಮತ್ತು ರಾಜ್ಯಪಾಲರು ನೇಮಕ ಮಾಡುತ್ತಾರೆ. ಹಾಗೆ ನೇಮಕಗೊಂಡ ಪ್ರಧಾನಿ ಮತ್ತು ಮುಖ್ಯಮಂತ್ರಿಯ ಶಿಫಾರಸಿನಂತೆ ಉಳಿದ ಸಚಿವರ ನೇಮಕವನ್ನು ರಾಷ್ಟ್ರಪತಿ ಮತ್ತು ರಾಜ್ಯಪಾಲರೇ ಮಾಡುತ್ತಾರೆ. ಈ ಸಚಿವ ಸಂಪುಟ ಕೇಂದ್ರದಲ್ಲಿ ಸಂಸತ್‌ಗೆ ಮತ್ತು ರಾಜ್ಯದಲ್ಲಿ ವಿಧಾನಮಂಡಲದ ಉಭಯ ಸದನಗಳಿಗೆ ಉತ್ತರದಾಯಿ.

ಚುನಾವಣೆ ಮೂಲಕ ಕಾಲಕಾಲಕ್ಕೆ ಹೊಸ ಹೊಸ ಸಚಿವ ಸಂಪುಟ ಆಡಳಿತಕ್ಕೆ ಬರುವುದಾದರೂ ಸೋಜಿಗವೆಂಬಂತೆ ಅಲ್ಲೊಂದು ನೌಕರಶಾಹಿ ರೂಪದ ಖಾಯಂ ವ್ಯವಸ್ಥೆ ಇರುತ್ತದೆ. ಇದು ಆಗಾಗ ವಿಸರ್ಜನೆಗೆ ಗುರಿಯಾಗುವಂತದ್ದಲ್ಲ. ಇಲ್ಲಿ ನೇಮಕಗೊಂಡ ಅಧಿಕಾರಿ/ನೌಕರರು ಸೇವಾವಧಿ ಮುಗಿಯುವ ತನಕ ಕರ್ತವ್ಯ ನಿರತರಾಗಿರುತ್ತಾರೆ. ಇವರ ನೇಮಕಕ್ಕೆ ಪ್ರತ್ಯೇಕ ವಿಧಿವಿಧಾನಗಳಿವೆ. ಇಲ್ಲಿ ಗಮನಿಸತಕ್ಕ ವಿಶಿಷ್ಟ ವಿದ್ಯಮಾನವೆಂದರೆ ಈ ಖಾಯಂ ವ್ಯವಸ್ಥೆಯ ಅಧಿಕಾರಿ/ ನೌಕರರು ಕಾಲಕಾಲಕ್ಕೆ ಚುನಾವಣೆ ಮೂಲಕ ಅಧಿಕಾರಕ್ಕೆ ಬರುವ ಜನಪ್ರತಿನಿಧಿಗಳೊಡನೆ ಸ್ಥಾಪಿತ ಕಾನೂನಿನ ಅನುಷ್ಠಾನದಲ್ಲಿ ತೊಡಗಿಸಿಕೊಂಡು, ತಾವು ಯಾವ ರಾಜಕಾರಣಕ್ಕೂ ಒಳಗಾಗದೆ ತಟಸ್ಥರಾಗಿ ಸಾಮರಸ್ಯ ಸಾಧಿಸುತ್ತಾರೆ. ಇದು ಮಹತ್ವಪೂರ್ಣವಾದ ಅಂಶ. ಈ ಬಗ್ಗೆ ಅಧಿಕಾರಿಗಳಲ್ಲಿ ಸಾಕಷ್ಟು ಪರಿಣತಿ, ದೃಢತೆ, ಚತುರತೆ ಹಾಗೂ ಆತ್ಮಸ್ಥೆರ್ಯ ಇರಬೇಕು. ಯಾವ ಕಾಲಕ್ಕೂ ಸಾರ್ವಜನಿಕ ಹಿತಾಸಕ್ತಿ ಕಾಪಾಡುವಂತಿರ ಬೇಕು. ಹಾಗಾಗಿ ಅವರ ನೇಮಕಾತಿಗೆ ಸಂವಿಧಾನ ದಲ್ಲಿ ಪ್ರತ್ಯೇಕ ವ್ಯವಸ್ಥೆ ಇದೆ.

ಸರಕಾರಿ ನೌಕರರ ನೇಮಕಾತಿ ನಡೆಸುವ ಲೋಕಸೇವಾ ಆಯೋಗದ ರಚನೆಗೆ ಸಂವಿಧಾನದ ಆರ್ಟಿಕಲ್‌ 315ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದು ಸ್ವತಂತ್ರ ಪ್ರಾಧಿಕಾರವಾಗಿದ್ದು ಪರಿಣತ ಸಂಸ್ಥೆ. ಈ ಪ್ರಾಧಿಕಾರದ ರಚನೆಗೆ ಸಂವಿಧಾನದಲ್ಲಿ ಅಗತ್ಯ ಸೂಚನೆಗಳಿವೆ. ಅಧ್ಯಕ್ಷರ ಹಾಗೂ ಸದಸ್ಯರ ನೇಮಕಕ್ಕೆ ಅರ್ಹತಾ ಮಾನದಂಡ ನಿಗದಿಪಡಿಸಲಾಗಿದೆ. ಕರ್ತವ್ಯಲೋಪಕ್ಕೆ ಸದಸ್ಯತ್ವ ರದ್ದತಿ ಹಾಗೂ ಇತರ ಕ್ರಮಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಪ್ರಾಧಿಕಾರದ ಮೂಲಕ ಕ್ರಮಬದ್ಧವಾಗಿ ನೇಮಕಗೊಂಡ ಅಧಿಕಾರಿ ರಾಜ್ಯದಲ್ಲಿ ರಾಜ್ಯಪಾಲರ ಇಚ್ಛೆಗೆ ತಕ್ಕಂತೆ ಕರ್ತವ್ಯ ನಿರ್ವಹಿಸುತ್ತಾನೆ ಹಾಗೂ ತಾನು ಸಂವಿಧಾನಕ್ಕೂ ಬದ್ದನಾಗಿ ಸೇವೆ ಸಲ್ಲಿಸುತ್ತೇನೆ ಎಂಬ ಲಿಖೀತ ಪ್ರತಿಜ್ಞಾ ವಿಧಿಯನ್ನು ಕರ್ತವ್ಯಕ್ಕೆ ಸೇರ್ಪಡೆಗೊಳ್ಳುವ ದಿನದಂದೇ ಸಲ್ಲಿಸತಕ್ಕದ್ದು. ಲೋಕಸೇವಾ ಆಯೋಗಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರ ಮಾತ್ರ. ಸರಕಾರಿ ಸೇವೆಗೆ ನೇಮಕ ಮಾಡುವ ಅಧಿಕಾರ ಹಾಗೂ ಸೇವಾ ನಿಯಮಾವಳಿಗಳನ್ನು ರೂಪಿಸುವ ಬಗ್ಗೆ ಸಂವಿಧಾನದ ಆರ್ಟಿಕಲ್‌ 309ರಲ್ಲಿ ಸರಕಾರಕ್ಕೆ ಅಧಿಕಾರ ದತ್ತವಾಗಿದೆ. ಸೇವಾ ನಿಯಮಾವಳಿಗಳನ್ನು ರೂಪಿಸುವಾಗ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಯಾಗದ ಹಾಗೆ ನೌಕರರ ಹಿತಾಸಕ್ತಿಯನ್ನು ಕಾಪಾ ಡುವುದು ವಾಡಿಕೆ. ಸೇವಾ ನಿಷ್ಠೆಯಂತೆ ನೌಕರರ ಆತ್ಮಸ್ಥೈರ್ಯವೂ ಅತೀ ಅಗತ್ಯ. ಇವೆರಡರ ನಡುವೆ ಸಮತೋಲನ ಕಾಯ್ದುಕೊಳ್ಳುವ ಗುರುತರ ಜವಾ ಬ್ದಾರಿ ಸರಕಾರದ್ದಾಗಿದೆ.

Advertisement

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೆಲವು ಘಟನೆಗ ಳನ್ನು ಗಮನಿಸಿದಾಗ ಸರಕಾರ ಅಧಿಕಾರಿ/ನೌಕರರ ಆತ್ಮಸ್ಥೈರ್ಯಕ್ಕೆ ಕುಂದುತರುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಅನುಮಾನಗಳು ಕಾಡುವಂತೆ ಮಾಡಿವೆ. ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಶಿಸ್ತು ಕ್ರಮ ಕೈಗೊಳ್ಳಲೇಬೇಕು. ಅದರಲ್ಲಿ ರಾಜಿ ಮಾಡಿಕೊಳ್ಳಬಾರದು. ಸಮಗ್ರ ತನಿಖೆ ಬಾಕಿ ಇರುವಾಗ ಆಪಾದನೆಗೆ ಒಳಗಾದ ಅಧಿಕಾರಿಯನ್ನು ಅಮಾನತಿನಲ್ಲಿಡುವುದು ಶಿಸ್ತು ಕ್ರಮದ ಭಾಗವೇ ಸರಿ. ಇಂತಹ ಪ್ರಕರಣಗಳ ಸಂದರ್ಭದಲ್ಲಿ ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರನ್ನುದ್ದೇಶಿಸಿ ಸರಕಾರವನ್ನು ಪ್ರತಿನಿಧಿಸುವ ಸಚಿವ, ಸಂಸದರು, ಶಾಸಕರು ಒಟ್ಟು ನೌಕರಶಾಹಿಯ ಆತ್ಮಸ್ಥೈರ್ಯ ಕುಗ್ಗಿಸುವಂಥ ಹೇಳಿಕೆ ನೀಡುವುದು ಉಚಿತವಲ್ಲ. ತಪ್ಪು ಮಾಡಿದ್ದರೆ ಆ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಕೆಲವೊಂದು ಅಧಿಕಾರಿ ಅಥವಾ ಸಿಬಂದಿ ಮಾತ್ರ ತಾನೇ! ತಪ್ಪಿತಸ್ಥರ ವಿರುದ್ಧ ನಡತೆ, ಸೇವಾ ನಿಯಮಾವಳಿಗಳಂತೆ ಕ್ರಮ ಜರಗಿಸಲೇಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ತನಿಖೆ ಪೂರ್ಣವಾಗದಿರುವ ಹಂತದಲ್ಲಿ ಬಳಸುವ ಪದ ಪ್ರಯೋಗ ನೌಕರಶಾಹಿಯ ಆತ್ಮಸ್ಥೈರ್ಯ ಕುಂದದಂತಿರಬೇಕಲ್ಲವೇ! ನಿಜ.

ರಾಜಕಾರಣಿಗಳು ಸಂತ್ರಸ್ತರನ್ನು ಕಂಡು ಅವರನ್ನು ಸಂತೈಸುವುದು ಅವರ ಹೊಣೆಗಾರಿಕೆಯಾಗಿದೆ. ಇದೇ ವೇಳೆ ನೌಕರಶಾಹಿಯ ಮನೋಬಲ ಕುಸಿ ಯದಂತೆ ಮತ್ತು ಆಡಳಿತದ ದಕ್ಷತೆ ಹೆಚ್ಚಿಸುವ ಜವಾಬ್ದಾರಿಯೂ ಈ ಜನನಾಯಕರ ಮೇಲಿದೆ ಎಂಬುದನ್ನು ಮರೆಯಬಾರದು. ಯಾರೋ ಒಂದಿಬ್ಬರು ಅಥವಾ ಮೂರ್‍ನಾಲ್ಕು ಮಂದಿ ಅಧಿಕಾರಿ ಗಳು ಅಥವಾ ಸಿಬಂದಿಯಿಂದಾದ ಪ್ರಮಾದಕ್ಕೆ ಇಡೀ ನೌಕರಶಾಹಿಯ ದೂಷಣೆ ಸರಿಯಲ್ಲ. ದಕ್ಷ, ಪ್ರಾಮಾಣಿಕ ಮತ್ತು ಕರ್ತವ್ಯಬದ್ಧತೆಯುಳ್ಳ ನೌಕರಶಾಹಿಗೆಪ್ರೋತ್ಸಾಹ ನೀಡಬೇಕಾದ ಕಾರ್ಯ ಕೇವಲ ಸರಕಾರದಿಂದ ಮಾತ್ರವಲ್ಲ ಜನಪ್ರತಿನಿಧಿಗಳಾದಿ ಯಾಗಿ ಇಡೀ ಸಮಾಜ ದಿಂದಾಗಬೇಕಿದೆ. ಸರಕಾರ ಮತ್ತು ಸಮಾಜ ತಮ್ಮ ಮೇಲಿಟ್ಟಿರುವ ವಿಶ್ವಾಸ, ಗೌರವವನ್ನು ಉಳಿಸಿಕೊಳ್ಳುವ ಮಹತ್ತರ ಹೊಣೆ ನೌಕರಶಾಹಿಯ ಮೇಲಿದೆ.

– ಬೇಳೂರು ರಾಘವ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next