Advertisement

ಪ್ರತಿ ರಾತ್ರಿ ಈ ವಿದ್ಯಾರ್ಥಿನಿಲಯ ಖಾಲಿ ಖಾಲಿ!

06:25 AM Sep 10, 2017 | |

ಕಲಬುರಗಿ: ಈ ವಿದ್ಯಾರ್ಥಿ ನಿಲಯದಲ್ಲಿ ರಾತ್ರಿಯಾಗುತ್ತಿದ್ದಂತೆ ಒಂಥರಾ ಭಯ ಆವರಿಸುತ್ತದೆ. ಊಟ ಆದ ನಂತರವಂತೂ ಯಾರೊಬ್ಬರೂ ಇಲ್ಲಿ ಮಲಗೋದೇ ಇಲ್ಲ. ಇಡೀ ವಿದ್ಯಾರ್ಥಿ ನಿಲಯ ಖಾಲಿ, ಖಾಲಿ… ಹಾಗಾದ್ರೆ ಈ ವಿದ್ಯಾರ್ಥಿ ನಿಲಯದಲ್ಲಿ ಏನಾದರೂ ಸಮಸ್ಯೆಯಿರಬಹುದೇ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಇದಕ್ಕೆ ಕಾರಣ ದೆವ್ವ!


ಹೌದು, ಇದೊಂಥರಾ ಅಚ್ಚರಿ ಎನ್ನಿಸಿದರೂ ಸತ್ಯ. ತಾಲೂಕಿನ ಸೊಂತ ಗ್ರಾಮದಲ್ಲಿರುವ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿ ನಿಲಯದಲ್ಲಿ ಕಳೆದ 10 ವರ್ಷಗಳಿಂದ ರಾತ್ರಿ ಹೊತ್ತಿನಲ್ಲಿ ವಿದ್ಯಾರ್ಥಿಗಳು ಸೇರಿ ಯಾವ ಸಿಬ್ಬಂದಿಯೂ ಇರುವುದಿಲ್ಲ. ಬೆಳಗಾದರೆ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ಎಂದಿನಂತೆ ಚಾಚೂ ತಪ್ಪದೆ ನಡೆಯುತ್ತವೆ. ಆದರೆ, ಕತ್ತಲಾಗುತ್ತಿದ್ದಂತೆ ಇಲ್ಲಿ ಎಲ್ಲವೂ ನಿಷಿದ್ಧ. ಯಾಕೆಂದರೆ ಇಲ್ಲಿ ರಾತ್ರಿ ದೆವ್ವಗಳು ಬಂದು ಮಲಗುತ್ತವೆ ಎನ್ನುವ ನಂಬಿಕೆ ಜನರಲ್ಲಿ ಬೇರೂರಿದೆ. ಇದೇ ಕಾರಣಕ್ಕೆ ಕಳೆದ 10 ವರ್ಷಗಳಿಂದ ಇಲ್ಲಿ ಯಾರೂ ಮಲಗುತ್ತಿಲ್ಲ.


ಸರಕಾರ ಈ ಭಾಗದಲ್ಲಿನ ಮಕ್ಕಳಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ವಸತಿ ನಿಲಯ ನಿರ್ಮಿಸಿದೆ. ಈ ನಿಲಯದಲ್ಲಿ ನೀರು, ಗಾಳಿ, ಬೆಳಕು, ಹಾಸಿಗೆ, ಊಟ, ಶೌಚಾಲಯ ಸೇರಿ ಸೌಕರ್ಯಗಳು ಇವೆ. ಈ ವಸತಿ ನಿಲಯದ ಪಕ್ಕದಲ್ಲಿಯೇ ಸ್ಮಶಾನವಿದೆ. ಇಷ್ಟೆಲ್ಲ ರಾದ್ಧಾಂತಕ್ಕೆ ಸ್ಮಶಾನವೇ ಕಾರಣ ಎನ್ನಲಾಗುತ್ತಿದೆ. ಸ್ಮಶಾನದಲ್ಲಿನ ಆತ್ಮಗಳು ರಾತ್ರಿಯಾಗುತ್ತಿದ್ದಂತೆ ವಸತಿ ನಿಲಯದಲ್ಲಿ ಬಂದು ಮಲಗುತ್ತವೆ ಎನ್ನುವುದು ಇಲ್ಲಿನ ಜನರ ಅನಿಸಿಕೆ. ಹೀಗಾಗಿ, ವಿದ್ಯಾರ್ಥಿ ನಿಲಯದಲ್ಲಿ 60 ವಿದ್ಯಾರ್ಥಿಗಳಿದ್ದರೂ ರಾತ್ರಿ ಮಾತ್ರ ಯಾರೂ ಮಲಗುವುದಿಲ್ಲ.

Advertisement

ಸಂಜೆ 7ಕ್ಕೆ ಊಟ ಮುಗಿಯುತ್ತದೆ. ಬಳಿಕ ಎಲ್ಲರೂ ಸೇರಿ ಸೊಂತ ಗ್ರಾಮಕ್ಕೆ ಹೋಗಿ ಮಲಗುತ್ತಾರೆ. ಬಹುತೇಕ ಸೊಂತ ಗ್ರಾಮದ ಮಕ್ಕಳೆ ಈ ವಸತಿ ನಿಲಯದಲ್ಲಿ ಪ್ರವೇಶ ಪಡೆದಿದ್ದಾರೆ. ಹೀಗಾಗಿ ರಾತ್ರಿ ತಮ್ಮ ಮನೆಗಳಿಗೆ ಹೋಗುತ್ತಾರೆ. ಹೀಗಾಗಿ ರಾತ್ರಿಯಾಗುತ್ತಿದ್ದಂತೆ ಇಡೀ ವಸತಿ ನಿಲಯ ಖಾಲಿ ಖಾಲಿ.

ಹೀಗಾಗಿ, ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಮುತುವರ್ಜಿ ವಹಿಸಿ ಮೂಢನಂಬಿಕೆಯನ್ನು ಹೋಗಲಾಡಿಸಿ ಸುತ್ತಲಿನ ಮಕ್ಕಳಿಗೆ ವಿದ್ಯಾರ್ಜನೆ ನೀಡಲು ಮುಂದಾಗಬೇಕಿದೆ.

ನಾವೇ ಮಲಗಿ ಮೂಢನಂಬಿಕೆ ತೊಲಗಿಸೋಣ
ಹೌದು, ಇದೊಂದು ಸಮಸ್ಯೆಯಾಗಿದೆ. ಸ್ಮಶಾನದ ಪಕ್ಕದಲ್ಲೇ ಇರೋದ್ರಿಂದ ಮಕ್ಕಳು ರಾತ್ರಿ ವಸತಿ ನಿಲಯದಲ್ಲಿ ಮಲಗುತ್ತಿಲ್ಲ. ಸರಕಾರ ಸ್ವಂತ ಕಟ್ಟಡ ಕಟ್ಟಿದೆ. ಅದರ ಉಪಯೋಗ ಅಲ್ಲಿನ ಮಕ್ಕಳಿಗೆ ಸಿಗಬೇಕಿದೆ. ಕೆಲವು ಮನೋರೋಗ ತಜ್ಞರನ್ನು ಹಾಗೂ ಪವಾಡ ಬಯಲು ಮಾಡುವ ತಜ್ಞರನ್ನು ಕರೆದು ನಾವೂ ವಸತಿ ನಿಲಯದಲ್ಲಿ ಮಲಗಿ ಜನರಲ್ಲಿ ಇರುವ ಮೂಢನಂಬಿಕೆ ತೊಲಗಿಸಬೇಕಿದೆ.
-ಮೊಹಮ್ಮದ್‌ ಪಾಶಾ, ಉಪ ನಿರ್ದೇಶಕರು ಹಿಂದುಳಿದ ವರ್ಗಗಳ ಇಲಾಖೆ.

ಸರಕಾರವೇನೋ ಹಾಸ್ಟೆಲ್‌ ಮಾಡ್ಯಾದ. ಆದ್ರ ರಾತ್ರಿ ಇಲ್ಲಿ ದೆವ್ವ ಬಂದು ಮಲಗ್ತಾವ. ನಮ್ಮ ಮಕ್ಕಳನ್ನು ನಾವು ಅಲ್ಲಿ ಹ್ಯಾಂಗ್‌ ಬಿಡಬೇಕ್ರಿ. ಮಕ್ಕಳಂದ್ರ ಜೀವ ಇರಂಗಿಲ್ಲೇನು ನಮY, ಹಿಂದಕ್‌ ಎರಡು ಮೂರು ಬಾರಿ ರಾತ್ರಿ ದೆವ್ವ ಕಂಡು ಸಾಯೋ ಮಕ್ಕಳು ಉಳದಾವ. ಅದಕ್ಕ ಯಾರೂ ಅಲ್ಲಿ ರಾತ್ರಿ ಮಕ್ಕಳನ್ನ ಬಿಡಂಗಿಲ್ಲ.
– ಶರಣಪ್ಪ, ಸೊಂತ ಗ್ರಾಮ ನಿವಾಸಿ.

Advertisement

– ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next