Advertisement

ಸರ್ಕಾರಿ ಆಸ್ಪತ್ರೆಗಳಿಗೆ ಅನಾರೋಗ್ಯ

11:41 AM Jul 15, 2018 | |

ಬೆಂಗಳೂರು: ಸಾರ್ವಜನಿಕ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸರ್ಕಾರ ಮಾಡುವ ವೆಚ್ಚ ಅಷ್ಟಿಷ್ಟಲ್ಲ. ಆದರೆ ಅದೆಷ್ಟೇ ಕೋಟಿ ಖರ್ಚು ಮಾಡಿದರೂ ಸರ್ಕಾರಿ ಆಸ್ಪತ್ರೆಗಳ ದಯನೀಯ ಸ್ಥಿತಿ ಮಾತ್ರ ಇಂದಿಗೂ ಬದಲಾಗಿಲ್ಲ. ಪ್ರತಿ ವರ್ಷ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸಲಕರಣೆ ಒದಗಿಸಲು ಕೋಟ್ಯಂತರ ರೂ. ಅನುದಾನ ಒದಗಿಸಿದರೂ ಆಸ್ಪತ್ರೆಗಳಲ್ಲಿನ ಕೊರತೆಗಳು ಮಾತ್ರ ನೀಗಿಲ್ಲ. ರಾಜ್ಯದ ಇತರ ನಗರಗಳಲ್ಲಿನ ಆರೋಗ್ಯ ಕೇಂದ್ರಗಳ ವಿಷಯ ಬಿಡಿ, ಆರೋಗ್ಯ ಇಲಾಖೆ ಅಧಿಕಾರಿಗಳು, ಆರೋಗ್ಯ ಸಚಿವರ ಕಣ್ಣಳತೆಯಲ್ಲೇ ಇರುವ ರಾಜಧಾನಿಯ ಪ್ರಮುಖ ಆಸ್ಪತ್ರೆಗಳಲ್ಲೂ ಸೌಲಭ್ಯ ಸುಧಾರಣೆಯ ಸುಳಿವಿಲ್ಲ

Advertisement

ಈ ನಿಟ್ಟಿನಲ್ಲಿ “ಉದಯವಾಣಿ’ ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗತಿ ಕುರಿತು ರಿಯಾಲಿಟಿ ಚೆಕ್‌ ನಡೆಸಿದೆ. ಈ ವೇಳೆ ನಗರದ ಮಿಂಟೋ ಕಣ್ಣಿನ ಆಸ್ಪತ್ರೆ, ವಿಕ್ಟೋರಿಯಾ, ಬೌರಿಂಗ್‌ ಮತ್ತು ಲೇಡಿ ಕರ್ಜನ್‌, ಘೋಷಾ ಆಸ್ಪತ್ರೆಗಳಿಗೆ “ಉದಯವಾಣಿ’ ಭೇಟಿ ನೀಡಿದ್ದು, ಆಸ್ಪತ್ರೆಗಳ ಆವರಣದಲ್ಲಿ ಸ್ವತ್ಛತೆಗೆ ಆದ್ಯತೆ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಆಸ್ಪತ್ರೆ ಹೊರ ಆವರಣದಲ್ಲಿ ಸ್ವತ್ಛತೆ ಇರುವುದಿಲ್ಲ ಎಂದು ರೋಗಿಗಳು ದೂರಿದರೆ, “ಆಸ್ಪತ್ರೆ ಸಾರ್ವಜನಿಕರ ಆಸ್ತಿ. ಹೀಗಾಗಿ ಆವರಣದಲ್ಲಿ ಉಗುಳುವುದು, ಕಸ ಹಾಕುವುದನ್ನು ನಿಲ್ಲಿಸಬೇಕು. ಸ್ವತ್ಛತೆ ಬಗ್ಗೆ ರೋಗಿಗಳೂ ಕಾಳಜಿ ವಹಿಸಬೇಕು’ ಎನ್ನುತ್ತಾರೆ ವೈದ್ಯರು. 

ನೆಫ್ರೋ ಯುರಾಲಜಿ ಸಂಸ್ಥೆ ವಿಕ್ಟೋರಿಯಾ ಆವರಣದಲ್ಲಿರುವ ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ ತಜ್ಞ ವೈದ್ಯರ ಜತೆ ಸೌಲಭ್ಯಗಳಿವೆ. ಆದರೆ ರೋಗಿಗಳ ಸಂಖ್ಯೆ ಹೆಚ್ಚಿರುವ ಕಾರಣ ನೂತನ ಕಟ್ಟಡದ ಅಗತ್ಯವಿದೆ. ಇತ್ತೀಚಿಗೆ ಕಿಡ್ನಿ ಸಮಸ್ಯೆ ಹೊಂದಿದವರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಧುನಿಕ ಸಲಕರಣೆಗಳ ಅಗತ್ಯವಿದೆ. ಸಂಸ್ಥೆಗೆ ಸೇರಿದ 25 ಡಯಾಲಿಸಿಸ್‌ ಕೇಂದ್ರಗಳು ವಾರವಿಡಿ 24 ಗಂಟೆ  ಕಾರ್ಯನಿರ್ವಹಿಸುತ್ತವೆ. ಒಟ್ಟು 4 ಅವಧಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ರೋಗಿಗಳನ್ನು ಕಾಯಿಸದೇ ಶೀಘ್ರವಾಗಿ ಡಯಾಲಿಸಿಸ್‌ ನಡೆಸುತ್ತಾರೆ. 

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳೇ ಇಲ್ಲ ನಗರದ ಬಹುದೊಡ್ಡ ಆಸ್ಪತ್ರೆಗಳಲ್ಲಿ ಒಂದಾದ ವಿಕ್ಟೋರಿಯಾದಲ್ಲಿ ಉತ್ತಮ ವೈದ್ಯರಿದ್ದಾರೆ. ಸೇವೆಯೂ ಗುಣಮಟ್ಟದಿಂದ ಕೂಡಿದೆ. ಆದರೆ ಅಗತ್ಯ ಮೂಲ ಸೌಕರ್ಯಗಳಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ವೈದ್ಯಕೀಯ ಪರಿಕರಗಳು ಹಳೆಯದಾಗಿವೆ. ವಿಲ್‌ಚೇರ್‌ಗಳ ಕೊರತೆ ಇದೆ. ಸ್ಕಿನ್‌ ಬ್ಯಾಂಕ್‌ ಬಳಿ ಇರುವ ಲಿಫ್ಟ್ಗಳ ಮುಂದೆಯೇ ವಾಹನಗಳನ್ನು ನಿಲ್ಲಿಸುತ್ತಿದ್ದು, ರೋಗಿಗಳ ಓಡಾಟ ಕಷ್ಟವಾಗಿದೆ. 

ಎಲ್ಲಕ್ಕಿಂತ ಮುಖ್ಯವಾಗಿ ಸಂಜೆ 7ರ ನಂತರ ವಿಕ್ಟೋರಿಯಾ ಆವರಣದಲ್ಲಿ ಮಹಿಳೆಯರು ಓಡಾಡಲು ಪೂರಕ ವಾತಾವರಣವಿಲ್ಲ. ಹೀಗಾಗಿ ವಿಕ್ಟೋರಿಯಾ ಆವರಣದಲ್ಲಿ ಮತ್ತಷ್ಟು ವಿದ್ಯುತ್‌ ದೀಪಗಳನ್ನು ಅಳವಡಿಸುವ ಅಗತ್ಯವಿದೆ ಎಂದು ಮಹಿಳೆಯರು ತಿಳಿಸಿದ್ದಾರೆ. ಇದರೊಂದಿಗೆ ಶೌಚಾಲಯಗಳ ಸ್ವತ್ಛತೆಗೂ ಆದ್ಯತೆ ನೀಡಬೇಕು ಹಾಗೂ ಹೆಚ್ಚುವರಿ ಶೌಚಾಲಯಗಳನ್ನು ನಿರ್ಮಿಸಬೇಕಿದೆ ಎಂಬುದು
ರೋಗಿಗಳ ಒಕ್ಕೊರಲ ಅಭಿಪ್ರಾಯ. ಇಎನ್‌ಟಿ ವಿಭಾಗ ಮೂಲೆಯಲ್ಲಿ ಅಡಗಿ ಕುಳಿತಿದ್ದು, ತಕ್ಷಣಕ್ಕೆ ಅದು ಯಾರ ಕಣ್ಣಿಗೂ ಬೀಳದು. ಆಸ್ಪತ್ರೆ ನೂರಾರು ಎಕರೆಯಲ್ಲಿ ವ್ಯಾಪಿಸಿದ್ದರೂ ಚರ್ಮ ರೋಗಗಳ ಶಸ್ತ್ರಚಿಕಿತ್ಸಾ ವಿಭಾಗ ಮಾತ್ರ ಸಣ್ಣ ಗೂಡಂಗಡಿ ರೀತಿ ಇದೆ. ಅಲ್ಲದೆ ವಿಭಾಗಕ್ಕೆ ಅಗತ್ಯ ವೈದ್ಯಕೀಯ ಪರಿಕರಗಳು ಸರಬರಾಜಾಗುವುದಿಲ್ಲ. ಕೈ ಗವಸು (ಗ್ಲೌಸ್‌), ಲೋಷನ್‌ಗಳು ಹಾಗೂ ಮುಲಾಮುಗಳು ಸರಿಯಾದ ಕಾಲಕ್ಕೆ ಬರುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

Advertisement

ಶೌಚಾಲಯಗಳ ಸ್ತಿತಿ ಶೋಚನೀಯ ವಾಣಿ ವಿಲಾಸ ಹಾಗೂ ಬೌರಿಂಗ್‌ ಆಸ್ಪತ್ರೆಗಳ ಸ್ಥಿತಿ ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಶೌಚಾಲಯಗಳಲ್ಲಿ ನೀರು ನಿಲ್ಲುವುದು, ನಲ್ಲಿಗಳಿಂದ ಸದಾ ನೀರು ತೊಟ್ಟಿಕ್ಕುವುದು, ದುರ್ವಾಸನೆ ಸೇರಿ ಎರಡೂ ಆಸ್ಪತ್ರೆ ಶೌಚಾಲಯಗಳ ಪರಿಸ್ಥಿತಿ ಶೋಚನೀಯ. ಲಿಫ್ಟ್ಗಳಲ್ಲಿ ಜನ ಎಲೆ ಅಡಿಕೆ ಉಗಿಯುತ್ತಾರೆ. ಅಲ್ಲಲ್ಲಿ ಪ್ಲಾಸ್ಟಿಕ್‌ ಕಸ ಬಿದ್ದಿರುತ್ತದೆ. ಕೆಲವೆಡೆ ವಿಶ್ರಾಂತಿ ತಾಣಗಳ ಛಾವಣಿ ಮುರಿದಿದೆ. ಆಸ್ಪತ್ರೆಗಳಲ್ಲಿ ಅಗತ್ಯ ಸಿಬ್ಬಂದಿ ಕೊರತೆ ಇದೆ. ಬೌರಿಂಗ್‌ ಆಸ್ಪತ್ರೆಯಲ್ಲಿ ಪ್ರತಿ ದಿನ ಹೊರ ರೋಗಿಗಳ ಭಾಗಕ್ಕೆ 1300ರಿಂದ 1500 ಮಂದಿ ಭೇಟಿ ನೀಡುತ್ತಾರೆ. ಆದರೆ ಇಡೀ ಆಸ್ಪತ್ರೆಗೆ ಇರುವುದು 236 ನರ್ಸ್‌ಗಳು ಮಾತ್ರ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕೆಲವೊಂದು ಚಿಕಿತ್ಸೆ ಬೇಕೆಂದರೆ ಹಣ ನೀಡಬೇಕು ಎಂದು ರೋಗಿಗಳು ಆರೋಪಿಸುತ್ತಾರೆ. ವಾರ್ಡ್‌ಗಳಲ್ಲಿ ನೈರ್ಮಲ್ಯದ ಕೊರತೆಯಿದ್ದು, ಮಕ್ಕಳಿಗೆ ಸೋಂಕು ತಗಲುವ ಅಪಾಯವಿದೆ. ಜತೆಗೆ ಶೌಚಾಲಯಗಳು ಗರ್ಭಿಣಿಯರು ಬಳಸಲು ಯೋಗ್ಯವಾಗಿಲ್ಲ. ಎಲ್ಲೆಂದರಲ್ಲಿ ಸ್ಯಾನಿಟರಿ ತ್ಯಾಜ್ಯ ಬಿದ್ದಿರುವುದು ನಿರ್ವಹಣೆ ಕೊರತೆಗೆ ಕನ್ನಡಿಯಾಗಿದೆ.

ಬಿಪಿಎಲ್‌ ಕುಟುಂಬಗಳಿಗೆ ಬಹುತೇಕ ಚಿಕಿತ್ಸೆಗಳು ಹಾಗೂ ಔಷಧಗಳು ಉಚಿತವಾಗಿ ಸಿಗುತ್ತವೆ. ಎಪಿಲ್‌ ಕಾರ್ಡುದಾರರಿಗೆ ಜನರಿಕ್‌ ಮಳಿಗೆಗಳಲ್ಲಿ ರಿಯಾಯಿತಿ ದೊರೆಯದೇ, ಹೊರಗೆ ಖರೀದಿಸುವ ಅನಿವಾರ್ಯತೆ ಇದೆ.
  ವೀಣಾ, ರೋಗಿಯ ಸಂಬಂಧಿ

 ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ ನಾನು ಹಲವು ದಿನಗಳಿಂದ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದೇನೆ. ವೈದ್ಯರು ಉತ್ತಮ ರೀತಿಯಲ್ಲಿ ಡಯಾಲಿಸಿಸ್‌ ಮಾಡುತ್ತಾರೆ. ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. 
  ನಾಗಪ್ಪ, ಚಿಕಿತ್ಸೆಗೆ ಬಂದ ಕೈದಿ 

ಕಳೆದ 28 ದಿನಗಳಿಂದ ನೆಪ್ರೋ ಯುರಾಲಜಿ ಸಂಸ್ಥೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇವೆ.ಸ್ವತ್ಛತೆ ಹಾಗೂ ನೈರ್ಮಲ್ಯ ಉತ್ತಮವಾಗಿದೆ. ಆದರೆ ವ್ಹೀಲ್‌ ಚೇರ್‌ಗಳು ಹಳೆಯದಾಗಿವೆ. ಅವುಗಳನ್ನು ಬದಲಿಸುವ ಅಗತ್ಯವಿದೆ.
  ಸುಶೀಲಾ, ರೋಗಿಯ ಸಂಬಂಧಿ

ಇತ್ತೀಚಿಗೆ ಹೃದಯ, ಮೂತ್ರಪಿಂಡದ ಕಾಯಿಲೆಗಳು ಹೆಚ್ಚಾಗಿವೆ. ಇದಕ್ಕೆ ಆಧುನಿಕ ವೈದ್ಯಕೀಯ  ಪರಿಕರಗಳ ಅಗತ್ಯವಿದೆ. ಕಿಡ್ನಿ ಕಸಿಗಾಗಿ ರೋಬೋಟಿಕ್‌ ಯಂತ್ರ ಒದಗಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
  ಡಾ.ಶಿವಲಿಂಗಯ್ಯ, ನೆಪ್ರೋ ಯುರಾಲಜಿ ಸಂಸ್ಥೆ ನಿರ್ದೇಶಕ

ಘೋಷಾ ಆಸ್ಪತ್ರೆ
ಎಚ್‌ಎಸ್‌ಐಎಸ್‌ ಘೋಷಾ ಆಸ್ಪತ್ರೆಯಲ್ಲಿ ವಿದ್ಯುತ್‌ ಸರಬರಾಜಿನ ಕೊರತೆಯಿಂದಾಗಿ ಕ್ಷ-ಕಿರಣ (ಎಕ್ಸ್‌ರೇ ವಿಭಾಗ ಕಾರ್ಯ ನಿರ್ವಹಿಸುತ್ತಿಲ್ಲ. ಸದ್ಯ ಒಂದು ತಿಂಗಳಿಗೆ 500 ಹೆರಿಗೆಗಳಾಗುತ್ತಿವೆ. ಕನಿಷ್ಠ 8-10 ಸಿಜರಿಯೆನ್‌ ಹೆರಿಗೆಗಳಾಗುತ್ತವೆ. ಇದಕ್ಕೆ ತುರ್ತು ಶಸ್ತ್ರಚಿಕಿತ್ಸಾ ವಿಭಾಗದ ಅಗತ್ಯವಿದೆ. ಐಸಿಯು ಅನಿವಾರ್ಯವಾಗಿ ಬೇಕಿದೆ. ಇವುಗಳ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗಂಭೀರ ಪ್ರಕರಣಗಳ ಶಸ್ತ್ರಚಿಕಿತ್ಸಾ ವಿಭಾಗ, ಸ್ತ್ರೀ ರೋಗಗಳಿಗೆ ಸಂಬಂಧಿಸಿದ ಮಹಿಳಾ ವೈದ್ಯರು, ನರ್ಸ್‌ಗಳು ಹಾಗೂ ಭದ್ರತಾ ಸಿಬ್ಬಂದಿ ಕೊರತೆ ಹೆಚ್ಚಾಗಿ¨

ಇದ್ದೂ ಇಲ್ಲದಾದ ವಸತಿ ಸಮುತ್ಛಯ
ಮಿಂಟೋ, ವಿಕ್ಟೋರಿಯಾ ಹಾಗೂ ವಾಣಿ ವಿಲಾಸ ಆಸ್ಪತ್ರೆ ಶುಶ್ರೂಷಕಿಯರಿಗಾಗಿ 2 ವರ್ಷಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆ ಸಮೀಪ ವಸತಿ ಸಮುತ್ಛಯ ನಿರ್ಮಿಸಲಾಗಿದೆ. ದಕ್ಕೆ ಒಂದೂವರೆ ವರ್ಷದ ಹಿಂದೆಯೇ ಶುಶ್ರೂಷಕಿಯರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರಿಗಿನ್ನೂ ವಸತಿ ಸಮುತ್ಛಯ  ದೊರೆತಿಲ್ಲ. ಈ ಬಗ್ಗೆ ಬೆಂಗಳೂರು ಮೆಡಿಕಲ್‌ ಕಾಲೇಜ್‌ನಲ್ಲಿ ವಿಚಾರಿಸಿದರೆ, ಕಟ್ಟಡವನ್ನು ಲೋಕೋಪಯೋಗಿ ಇಲಾಖೆ ಇನ್ನೂ ನಮಗೆ ಹಸ್ತಾಂತರಿಸಿಲ್ಲ ಎಂದು ಶುಶ್ರೂಷಕಿಯರು ತಿಳಿಸಿದ್ದಾರೆ.

ಸ್ವತ್ಛತಾ ಪರೀಕ್ಷೆಯಲ್ಲಿ ಪಾಸ್‌
ಆಸ್ಪತ್ರೆಗಳಲ್ಲಿ ಸ್ವತ್ಛತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನ್ಯಾಷನಲ್‌ ಅಕ್ರಿಡಿಟೇಷನ್‌ ಬೋರ್ಡ್‌ ಫಾರ್‌ ಹಾಸ್ಪಿಟಲ್‌ ಆ್ಯಂಡ್‌ ಹೆಲ್ತ್‌ಕೇರ್‌ ಪ್ರೋವೈಡರ್ (ಎನ್‌ಎಬಿಎಚ್‌ ಪ್ರಾಥಮಿಕ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಯಲ್ಲಿ ನೆಪ್ರೋ ಯುರಾಲಜಿ ಸಂಸ್ಥೆ ತೇರ್ಗಡೆಯಾಗಿದೆ.

ಬೌರಿಂಗ್‌ ಆಸ್ಪತ್ರೆಗೆ ಇವೆಲ್ಲಾ ಬೇಕು ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಗೆ ಇಸಿಜಿ ಯಂತ್ರಗಳು, 24 ಶವಗಳನ್ನು ಇಡುವ ಶೈತ್ಯಾಗಾರ ವ್ಯವಸ್ಥೆ ಅಗತ್ಯವಾಗಿ ಬೇಕಿದೆ. ಅಲ್ಲದೆ ಮೂಳೆ ಚಿಕಿತ್ಸೆ ವಿಭಾಗದಲ್ಲಿ ಆರ್ತ್ರೋಸ್ಕೊಪಿ ಯಂತ್ರ, ಕಂಪ್ಯೂಟರ್‌ಗಳು, ಬಟ್ಟೆ ಒಗೆಯುವ ಯಂತ್ರ, 1.5 ಟೆಸ್ಲಾ ಎಂಆರ್‌ಐ ಯಂತ್ರಗಳನ್ನು ಶೀಘ್ರವಾಗಿ ಒದಗಿಸಬೇಕಿದೆ. ಈ ಬಗ್ಗೆ ಸರ್ಕಾರಕ್ಕೂ ಮನವಿ ಮಾಡಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

 ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next