ಮುದ್ದೇಬಿಹಾಳ: ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಆಧುನೀಕರಣಗೊಳ್ಳುತ್ತಿವೆ. ಇದಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿರುವ ರಮೇಶಕುಮಾರ ಅವರ ಕಾಳಜಿ, ಕಳಕಳಿ ಕಾರಣವಾಗಿದೆ. ಇವರ ಅವ ಧಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ ಎಂದು ಶಾಸಕ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್. ನಾಡಗೌಡ ಹೇಳಿದರು.
ಪಟ್ಟಣದ ಪಿಲೇಕೆಮ್ಮ ನಗರದ ಬಳಿ ಇರುವ ಸರ್ಕಾರಿ ಸಾರ್ವಜನಿಕ ತಾಲೂಕಾಸ್ಪತ್ರೆಯಲ್ಲಿ ಹೊಸದಾಗಿ ಪ್ರಾರಂಭಿಸಲಾಗಿರುವ 7 ನೂತನ ಸೌಲಭ್ಯಗಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಬೇಸಿಗೆಯ ಈ ದಿನಗಳಲ್ಲಿ ರೋಗ ರುಜಿನಗಳ ಹಾವಳಿ ಹೆಚ್ಚಾಗುವ ಸಂಭವ ಇದ್ದು ವೈದ್ಯರು, ಸಿಬ್ಬಂದಿ ಹೆಚ್ಚು ರಜೆ ಪಡೆಯದೆ ರೋಗಿಗಳ ಸೇವೆ ಮಾಡಬೇಕು. ಇಲ್ಲಿನ ಆಸ್ಪತ್ರೆಯಲ್ಲಿ ಸಾಕಷ್ಟು ಸುಧಾರಣೆಗಳಾಗಿದ್ದು ಖಾಲಿ ಹುದ್ದೆ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಆಸ್ಪತ್ರೆ ಇನ್ನೂ ಹೆಚ್ಚು ಆಧುನೀಕರಣಗೊಳ್ಳಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ನಿರ್ದೇಶನದಂತೆ ಎಂಬಿಬಿಎಸ್ ಮುಗಿಸಿದ ಹೊಸ ವೈದ್ಯರು ಗ್ರಾಮೀಣ ಆಸ್ಪತ್ರೆಗಳಲ್ಲಿ ಸೇವೆ
ಸಲ್ಲಿಸುವುದು ಕಡ್ಡಾಯವಾಗಿದ್ದರಿಂದ ವೈದ್ಯರ ಕೊರತೆ ನೀಗಲಿದೆ ಎಂದರು.
ಇದಕ್ಕೂ ಮುನ್ನ 3 ಹಾಸಿಗೆಯ ತುರ್ತುನಿಗಾ ಘಟಕವನ್ನು ಶಾಸಕ ನಾಡಗೌಡ, ಡಯಾಲಿಸಿಸ್ ಮತ್ತು ಶುದ್ಧ ಕುಡಿವ ನೀರಿನ ಘಟಕಗಳನ್ನು ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ, ಕ್ಷಯರೋಗ ಪತ್ತೆ ಕೇಂದ್ರ (ಸಿಬಿಎನ್‌ಎಎಟಿ) ಮತ್ತು ನವಜಾತ ಶಿಶುಗಳ (ಎನ್‌ಬಿಎಸ್‌ಯು) ಕೇಂದ್ರಗಳನ್ನು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಡಿಜಿಟಲ್ ಕ್ಷ ಕಿರಣ ಕೇಂದ್ರ ಮತ್ತು ಇ ಡಿಜಿಟಲ್ ಆಸ್ಪತ್ರೆ ಸೌಲಭ್ಯವನ್ನು ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ಲೋಕಾರ್ಪಣೆಗೊಳಿಸಿದರು. ಸಿಬಿಎನ್‌ಎಎಟಿ ಮತ್ತು ಇ ಡಿಜಿಟಲ್ ಆಸ್ಪತ್ರೆ ಸೌಲಭ್ಯ ಜಿಲ್ಲೆಯಲ್ಲೇ ಮೊದಲಿಗೆ ಹೊಂದಿದೆ ಹೆಗ್ಗಳಿಕೆ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ ದೊರಕಿದೆ ಎಂದು ಶಾಸಕರಿಗೆ ವೈದ್ಯಾಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದ ನಂತರ ಶಾಸಕ ನಾಡಗೌಡ, ಜಿಪಂ ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷ ಪ್ರಭುಗೌಡ, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಸೇರಿ ಜಂಟಿಯಾಗಿ ಆಸ್ಪತ್ರೆಯ ಎಲ್ಲ ವಾರ್ಡುಗಳು, ಹೊಸದಾಗಿ ಸೌಲಭ್ಯ ಒದಗಿಸಿದ ಘಟಕಗಳು,
ಆಸ್ಪತ್ರೆಯ ಹೊರ ಆವರಣದ, ಸ್ವತ್ಛತೆ ಮತ್ತಿತರ ಸೌಲಭ್ಯ ಪರಿಶೀಲಿಸಿದರು. ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ಮಾತನಾಡಿಸಿ ಗುಣಮಟ್ಟದ ಚಿಕಿತ್ಸೆ ದೊರಕುತ್ತಿರುವುದನ್ನು ಖಚಿತಪಡಿಸಿಕೊಂಡರು. ಇನ್ನೂ ಹೆಚ್ಚಿನ ಸುಧಾರಣೆಗೆ ಹಲವು ಸಲಹೆ ಸೂಚನೆ ನೀಡಿದರು.
ಗೋವಾ ಕನ್ನಡಿಗರ ಮಹಾಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ, ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ, ಎಪಿಎಂಸಿ ನಿರ್ದೇಶಕರಾದ ಬೀರಪ್ಪ ಯರಝರಿ, ವೈ.ಎಚ್. ವಿಜಯಕರ, ಆಡಳಿತ ವೈದ್ಯಾಧಿಕಾರಿ ಡಾ| ಎಸ್.ಎನ್. ಲಕ್ಕಣ್ಣವರ, ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ, ಸರ್ಕಾರಿ ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿಗಳಾದ ಡಾ| ಸಂಗಮೇಶ ಪಟ್ಟಣದ, ಡಾ| ಓಂಕಾರ ಬಿ.ಕೆ., ಸುರೇಶ ಪಾಟೀಲ, ಆಸ್ಪತ್ರೆ ವೈದ್ಯರು, ಸಿಬ್ಬಂದಿ ಸೇರಿದಂತೆ ಇತರರಿದ್ದರು.