ಮುದ್ದೇಬಿಹಾಳ: ಪಟ್ಟಣದ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮನುಷ್ಯರ ದೇಹದಲ್ಲಿ ಬೆಳೆದಿರುವಂಥ ವಿವಿಧ ರೀತಿಯ ಗಡ್ಡೆಗಳು, ಹರ್ನಿಯಾ, ಅಪೆಂಡಿಕ್ಸ್, ಹೈಡ್ರೋಸಿಲ್ ಮುಂತಾದವುಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಹಾಕುವ ಸೌಲಭ್ಯ ಆರಂಭಗೊಂಡಿದ್ದು ಈ ಭಾಗದ ಬಡ ರೋಗಿಗಳಿಗೆ ವರವಾಗಿ ಪರಿಣಮಿಸಿದೆ.
ಜನರಲ್ ಸರ್ಜರಿಯಲ್ಲಿ ಎಂಎಸ್ ಸ್ನಾತಕೋತ್ತರ ಪದವಿ ಪೂರೈಸಿರುವ ಡಾ| ಅಸ್ಪಾಕ್‌ಅಹ್ಮದ್ ಅವರು ಈ ಆಸ್ಪತ್ರೆಗೆ ಹೊಸದಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದಕ್ಕೂ ಮುನ್ನ ಬಹಳ ವರ್ಷಗಳವರೆಗೆ ಈ ಆಸ್ಪತ್ರೆಗೆ ಇಂಥ ತಜ್ಞರು ಬಂದಿರಲಿಲ್ಲ.
ಡಾ| ಅಸ್ಪಾಕ್ ಅವರ ಕೌಶಲ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮತ್ತು ಬಡಜನರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಪ್ರಯೋಜನ ಲಭ್ಯವಾಗಿಸಲು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿರುವ ಅರವಳಿಕೆ ತಜ್ಞ ಡಾ| ಅನಿಲಕುಮಾರ ಶೇಗುಣಸಿ ಅವರು ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ ಅವರ ಸಹಕಾರದೊಂದಿಗೆ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಸರ್ಜನ್ ಅವರನ್ನು ಸಂಪರ್ಕಿಸಿ, ಹಲವು ದಿನಗಳ ಎಡೆಬಿಡದ ಪರಿಶ್ರಮ ನಡೆಸಿ ಶಸ್ತ್ರ ಚಿಕೆತ್ಸೆಗೆ ಅಗತ್ಯವಾದ ಸಲಕರಣೆ, ಔಷ ಧ ಮುಂತಾದವುಗಳನ್ನು ಇಲ್ಲಿನ ಆಸ್ಪತ್ರೆಗೆ ತರಿಸಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಮೊದಲಿದ್ದ ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಇನ್ನಷ್ಟು ಆಧುನಿಕವಾಗಿ ತಯಾರು ಮಾಡಲಾಗಿದೆ. ಸ್ವತಃ ಡಾ| ಶೇಗುಣಸಿ ಅವರೇ ಶಸ್ತ್ರ ಚಿಕಿತ್ಸೆ ಅಗತ್ಯ ಇರುವ ರೋಗಿಗಳಿಗೆ ಅರವಳಿಕೆ ಮದ್ದು ನೀಡಿ ಶಸ್ತ್ರ ಚಿಕಿತ್ಸೆಯ ನೋವು ಬಾಧಿಸದಂತೆ ನೋಡಿಕೊಳ್ಳುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ. ಡಾ| ಅಸ್ಪಾಕ್ ಅವರು ಸಹಾಯಕರ ನೆರವಿನೊಂದಿಗೆ ಗಡ್ಡೆಗಳನ್ನು ಯಶಸ್ವಿಯಾಗಿ ದೇಹದಿಂದ ಬೇರ್ಪಡಿಸಿ ನಂತರ ಸೂಕ್ತ ಔಷಧೋಪಚಾರವನ್ನೂ ಮಾಡುತ್ತಾರೆ. ಶಸ್ತ್ರ ಚಿಕಿತ್ಸೆಗೊಳಗಾದ ರೋಗಿಗಳನ್ನು ಇತರೆ ರೋಗಿಗಳಿಂದ ಬೇರ್ಪಡಿಸಿ ಇಡಲು ಸದ್ಯ ಐಸಿಯು ಕೊಠಡಿಯನ್ನೇ ಬಳಸಿಕೊಳ್ಳಲಾಗುತ್ತಿದೆ.
ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವವರು, ಎಬಿಆರ್‌ಕೆ (ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ) ಅಡಿ ನೋಂದಾಯಿಸಿಕೊಂಡವರಿಗೆ ಈ ಸೌಲಭ್ಯ ಲಭ್ಯವಿದೆ. ಎಬಿಆರ್‌ಕೆ ಸೌಲಭ್ಯ ಪಡೆದುಕೊಂಡವರು ಇಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರೆ ವೈದ್ಯರು, ನರ್ಸಿಂಗ್ ಸಿಬ್ಬಂದಿಗೆ ಹೆಚ್ಚಿನ ಪ್ರಯೋಜನ ದೊರೆತಂತಾಗುತ್ತದೆ.
ಇದನ್ನೂ ಓದಿ: ಗ್ರಾಮ ಸಮಸ್ಯೆ ಹೈ ಅಂಗಳಕ್ಕೆ
ಕ್ಯಾನ್ಸರ್ ಗಂಟುಗಳಿಗೆ ಸದ್ಯಕ್ಕಿಲ್ಲ ಚಿಕಿತ್ಸೆ
ಕ್ಯಾನ್ಸರ್‌ನಿಂದ ದೇಹದಲ್ಲಿ ಗಂಟುಗಳಾಗಿದ್ದರೆ ಅವುಗಳಿಗೆ ಸದ್ಯಕ್ಕೆ ಇಲ್ಲಿ ಶಸ್ತ್ರಚಿಕಿತ್ಸೆ ಮಾಡುತ್ತಿಲ್ಲ. ಏಕೆಂದರೆ ಕ್ಯಾನ್ಸರ್ ಗಂಟುಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಹಾಕಿದ ಮೇಲೆ ಅದಕ್ಕೆ ಕಿಮೋಥೆರಪಿ ಚಿಕಿತ್ಸೆ ನೀಡಬೇಕು. ಆ ಚಿಕಿತ್ಸೆಯ ಸೌಲಭ್ಯ ತಾಲೂಕು ಆಸ್ಪತ್ರೆಗಳಲ್ಲಿ ಇಲ್ಲ. ಹೀಗಾಗಿ ಆ ಸೌಲಭ್ಯ ದೊರಕುವವರೆಗೂ ಕ್ಯಾನ್ಸರ್ ಗಂಟುಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಹಾಕುವುದಿಲ್ಲ. ಅದರ ಬದಲು ಸೂಕ್ತ ಸಲಹೆ, ಮಾರ್ಗದರ್ಶನ ನೀಡಲಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ಮಂಗಳವಾರ ಒಂದೇ ದಿನ ಮೂವರಿಗೆ ಶಸ್ತ್ರ ಚಿಕಿತ್ಸೆ ಮಾಡಿ ಗಂಟುಗಳನ್ನು ತೆಗೆಯಲಾಗಿದೆ. ಮಹಿಳೆಯೊಬ್ಬರ ಸ್ತನದಲ್ಲಿ ಬೆಳೆದಿದ್ದ ಅಂದಾಜು 200 ಗ್ರಾಂ ತೂಕದ ಗಂಟನ್ನು (ಫೈಬ್ರೋಅಡೆನೊಮಾ) ಯಶಸ್ವಿಯಾಗಿ ತೆಗೆಯಲಾಗಿದೆ. ಸಣ್ಣ ಗಾತ್ರದಿಂದ ಹಿಡಿದು ದೊಡ್ಡ ಗಾತ್ರದ, ದೇಹದ ಯಾವುದೇ ಭಾಗದಲ್ಲಿಯಾದರೂ ಬೆಳೆದಿರುವ ಗಂಟುಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯುವಲ್ಲಿ ಡಾ| ಅಸ್ಪಾಕ್ ವಿಶೇಷ ಪರಿಣಿತಿ ಹೊಂದಿದ್ದು ಬಡಜನರು ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಲು ಆಸ್ಪತ್ರೆಗೆ ಭೇಟಿ ನೀಡಬಹುದಾಗಿದೆ.
ಗಂಟುಗಳಿಗೆ ಶಸ್ತ್ರ ಚಿಕಿತ್ಸೆ ಸೌಲಭ್ಯ ಹೊಸದಾಗಿ ಆರಂಭಗೊಂಡಿರುವುದು ಬಡಜನರಿಗೆ ಅನುಕೂಲಕವಾಗಲಿದೆ. ಈ ಸೌಲಭ್ಯ ಇಲ್ಲಿಗೆ ತರಲು ಸಾಕಷ್ಟು ಶ್ರಮ ಪಟ್ಟಿದ್ದೇವೆ. ಬಡರೋಗಿಗಳು ಇದರ ಪ್ರಯೋಜನ ಪಡೆದುಕೊಂಡಲ್ಲಿ ನಮ್ಮ ಶ್ರಮ ಸಾರ್ಥಕ. ಯಾವುದೇ ರೋಗಿ, ಆತನ ಸಂಬಂಧಿಕರು ವೈದ್ಯರೊಂದಿಗೆ ಸಹನೆ ಮತ್ತು ಗೌರವದಿಂದ ನಡೆದುಕೊಂಡಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ನಮಗೂ ಉತ್ಸಾಹ ಹೆಚ್ಚಾಗುತ್ತದೆ.
-ಡಾ| ಅನಿಲಕುಮಾರ ಶೇಗುಣಸಿ, ಆಡಳಿತ ವೈದ್ಯಾಧಿಕಾರಿ, ತಾಲೂಕು ಆಸ್ಪತ್ರೆ, ಮುದ್ದೇಬಿಹಾಳ
ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಗಂಟುಗಳಿಗೆ ಶಸ್ತ್ರ ಚಿಕಿತ್ಸೆ ಸೌಲಭ್ಯ ಆರಂಭಗೊಂಡಿದ್ದು ಉತ್ತಮ ಬೆಳವಣಿಗೆ. ಇದಕ್ಕೆ ಕಾರಣರಾದ ವೈದ್ಯರನ್ನು ಅಭಿನಂದಿಸುತ್ತೇನೆ. ಬಡಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗೆ ಇನ್ನೂ ಹೆಚ್ಚಿನ ಸೌಲಭ್ಯ, ತಜ್ಞ ವೈದ್ಯರನ್ನು ತರಲು ಪ್ರಯತ್ನಿಸುತ್ತಿದ್ದೇನೆ.
-ಎ.ಎಸ್. ಪಾಟೀಲ ನಡಹಳ್ಳಿ, ಶಾಸಕರು, ಮುದ್ದೇಬಿಹಾಳ
-ಡಿ.ಬಿ. ವಡವಡಗಿ