Advertisement

ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡೋಣ: ಪ್ರತಿಪಕ್ಷಗಳಿಗೆ ಪ್ರಧಾನಿ ಮೋದಿ ಭರವಸೆ

09:47 AM Feb 01, 2020 | Team Udayavani |

ಹೊಸದಿಲ್ಲಿ: ಸಂಸತ್‌ನ ಬಜೆಟ್‌ ಅಧಿವೇಶನ ಜ.31ರಂದು ಶುರುವಾಗಲಿರುವ ಹಿನ್ನೆಲೆಯಲ್ಲಿ ಗುರುವಾರ ಹೊಸದಿಲ್ಲಿಯಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು. ಈ ವೇಳೆ ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು, ಕುಸಿಯುತ್ತಿರುವ ಅರ್ಥವ್ಯವಸ್ಥೆಯ ಪರಿಸ್ಥಿತಿ ಬಗ್ಗೆ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳು ಪ್ರಸ್ತಾವ ಮಾಡಿವೆ.

Advertisement

ಸಭೆಯಲ್ಲಿ ಹಾಜರಿದ್ದ ಪ್ರಧಾನಿ ಮೋದಿ, ಅರ್ಥ ವ್ಯವಸ್ಥೆ ಸೇರಿದಂತೆ ಎಲ್ಲಾ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಗೆ ಸರಕಾರ ಸಿದ್ಧ ಎಂಬ ಭರವಸೆ ನೀಡಿದ್ದಾರೆ. ಕೇಂದ್ರ ಸರಕಾರ ಪೌರತ್ವ ವಿರೋಧಿ ಹೋರಾಟಗಾರರ ಮಾತುಗಳನ್ನು ಕೇಳಲೂ ಸಿದ್ಧವಿಲ್ಲ ಎಂದು ಪ್ರತಿಪಕ್ಷಗಳ ನಾಯಕರು ಸಭೆಯಲ್ಲಿ ದೂರಿದ್ದಾರೆ.

ಸಭೆಯ ವಿವರ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ‘ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳ ಬಗ್ಗೆ ವಿಪಕ್ಷಗಳು ಪ್ರಸ್ತಾಪಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧನದಲ್ಲಿ ಇರುವ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಬೇಕು ಎಂಬ ಒತ್ತಾಯವನ್ನೂ ಮಾಡಿವೆ’ ಎಂದಿದ್ದಾರೆ.

‘ಯಾವುದೇ ವಿಚಾರಗಳ ಬಗ್ಗೆ ತಮ್ಮೊಳಗೇ ಮಾತನಾಡಿಕೊಳ್ಳದೆ, ಸಂಸತ್‌ನಲ್ಲಿ ಚರ್ಚೆ ನಡೆಸುವಂತೆ ರಾಜಕೀಯ ಪಕ್ಷಗಳಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಅರ್ಥ ವ್ಯವಸ್ಥೆಯ ಮೇಲೆ ಉಂಟಾಗಿರುವ ಪ್ರತಿಕೂಲ ಪರಿಸ್ಥಿತಿ ಬಗ್ಗೆ ಚರ್ಚೆಗಳು ನಡೆಯಬೇಕು ಎಂದು ಕೆಲವು ಸದಸ್ಯರು ಬಯಸಿದಾಗ ಅದಕ್ಕೂ ಮೋದಿ ಸ್ವಾಗತಿಸಿದರು’ ಎಂದು ಜೋಶಿ ಹೇಳಿದ್ದಾರೆ.

ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಗಳ ಬಗ್ಗೆ ಸರಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಮಗ್ರ ಚರ್ಚೆಯ ಬಳಿಕವೇ ಅದನ್ನು ಅಂಗೀಕರಿಸಲಾಗಿದೆ. ಸದ್ಯ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲಿಸುವವರೇ ಈ ಬಗ್ಗೆ ಪ್ರಶ್ನೆಗಳನ್ನು ಕೇಳಬೇಕು ಎಂದಿದ್ದಾರೆ.

Advertisement

ನಾಳೆ ವಿಪಕ್ಷಗಳ ಸಭೆ: ಸಂಸತ್‌ ಅಧಿವೇಶನದಲ್ಲಿ ರಣತಂತ್ರದ ಬಗ್ಗೆ ಚರ್ಚೆ ನಡೆಸಲು ಫೆ.1ರಂದು ವಿಪಕ್ಷಗಳ ಸಭೆ ನಡೆಯಲಿದೆ. ಸಿಎಎ, ಅರ್ಥ ವ್ಯವಸ್ಥೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next