Advertisement

ಶತಮಾನ ಕಂಡ ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆ

07:12 PM Oct 11, 2021 | Team Udayavani |

ಅಜೆಕಾರು: ಸುಮಾರು 106 ವರ್ಷಗಳ ಇತಿಹಾಸ ಹೊಂದಿರುವ ಮುನಿಯಾಲು ಪ್ರಾಥಮಿಕ ಶಾಲೆ ಗುಣಮಟ್ಟದ ಶಿಕ್ಷಣವನ್ನು ಇಂದಿಗೂ ನೀಡುತ್ತ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಿಸಿ ಕೊಳ್ಳುತ್ತಿದೆ. ಆದರೆ ಶಾಲೆಯಲ್ಲಿ ಅಗತ್ಯ ಇರುವ ಮೂಲ ಸೌಕರ್ಯಗಳೆ ಇಲ್ಲವಾಗಿದೆ.

Advertisement

ಹೆಬ್ರಿ ತಾಲೂಕಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಶಾಲೆ ಇದಾಗಿದ್ದು ಈ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 421 ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದು ಕಳೆದ ವರ್ಷಕ್ಕಿಂತ ಈ ಬಾರಿ 62 ಮಕ್ಕಳು ಹೆಚ್ಚುವರಿಯಾಗಿ ದಾಖಲಾತಿ ಮಾಡಿಕೊಂಡಿದ್ದಾರೆ.

ದಾಖಲೆಯ ದಾಖಲಾತಿ
1915ರಲ್ಲಿ ಪ್ರಾರಂಭಗೊಂಡ ಶಾಲೆಯಲ್ಲಿ ಈ ವರೆಗೆ ವಿದ್ಯಾರ್ಥಿಗಳ ಕೊರತೆ ಕಂಡು ಬಂದಿಲ್ಲ. 2019-20ನೇ ಸಾಲಿನಲ್ಲಿ 292 ವಿದ್ಯಾರ್ಥಿಗಳಿದ್ದರೆ, 2020-21ನೇ ಸಾಲಿನಲ್ಲಿ 359 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ಪ್ರಸ್ತುತ 2021-22ನೇ ಸಾಲಿನಲ್ಲಿ 421 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಎರಡೇ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗಿರುವುದು ಸರಕಾರಿ ಶಾಲೆಯ ಹೆಮ್ಮೆಯಾಗಿದೆ.

ಶಿಕ್ಷಕರ ಕೊರತೆ
2018-19ನೇ ಸಾಲಿನಿಂದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಆಗಿ ಪರಿವರ್ತನೆಗೊಂಡ ಈ ಶಾಲೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಮೂಲ ಸೌಕರ್ಯಗಳ ಕೊರತೆ ಹಾಗೆ ಇದೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ 14 ಶಿಕ್ಷಕರು ಇರಬೇಕಾಗಿದೆ. ಆದರೆ ಕೇವಲ 7 ಶಿಕ್ಷಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ವಿಭಾಗಳಿವೆ. ಎಲ್‌ಕೆಜಿ, ಯುಕೆಜಿಗಳಲ್ಲಿ 103 ವಿದ್ಯಾರ್ಥಿಗಳಿದ್ದಾರೆ.

ಕುಸಿಯುತ್ತಿರುವ ಕಟ್ಟಡ
ಶಾಲೆಯ ಸಭಾಭವನದ ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿದ್ದು ಕುಸಿಯುವ ಭೀತಿ ಶಿಕ್ಷಕರು ಹಾಗೂ ಮಕ್ಕಳ ಪಾಲಕರದ್ಧಾಗಿದೆ. ಶಾಲೆಯಲ್ಲಿ ತರಗತಿ ಕೊಠಡಿಗಳ ಕೊರತೆ ಇರುವುದರಿಂದ ಈ ಸಭಾಭವನದಲ್ಲಿ ಹಲವು ತರಗತಿಗಳನ್ನು ನಡೆಸಲಾಗುತ್ತಿದೆ. ಅಲ್ಲದೆ ಬಿಸಿ ಊಟದ ಸಾಮಾಗ್ರಿಗಳ ದಾಸ್ತಾನು ಕೊಠಡಿ ಶಾಲೆಯಲ್ಲಿ ಇಲ್ಲದೆ ಇರುವುದರಿಂದ ಈ ಸಭಾಭವನದಲ್ಲಿಯೇ ಇಡಲಾಗುತ್ತಿದೆ.ಪುಟ್ಟ ಮಕ್ಕಳ ನಲಿ ಕಲಿ ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ತೀರಾ ಅಪಾಯಕಾರಿಯಾಗಿದೆ. ತಳಪಾಯ, ಕಿಟಕಿಗಳು ಬಿರುಕುಬಿಟ್ಟಿವೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕಟ್ಟಡ ನಿರ್ಮಾಣವಾಗ ಬೇಕಿದೆ.

Advertisement

ಇದನ್ನೂ ಓದಿ:ಪ್ರಿಯಾಂಕಾ ಹಿಂದೂ ಆಗಿದ್ದು ಯಾವಾಗ?…ಆಕೆ ಊಸರವಳ್ಳಿ: ತೆಲಂಗಾಣ ಬಿಜೆಪಿ ಮುಖಂಡ

ಶೌಚಾಲಯ ಕೊರತೆ
ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅನುಗುಣವಾಗಿ ಶೌಚಾಲಯ ಇಲ್ಲ. ಹಿಂದೆ ನಿರ್ಮಿಸಲಾದ ಶೌಚಾಲಯ ದುಸ್ಥಿತಿಯಲ್ಲಿದೆ.

ಆಟದ ಮೈದಾನ ಇಲ್ಲ
ಶಾಲೆಯಲ್ಲಿ ಆಟದ ಮೈದಾನ ಕೊರತೆಯಿದ್ದು ಮಕ್ಕಳು ಕ್ರೀಡಾ ಚಟುವಟಿಕೆಯಿಂದ ವಂಚಿತರಾಗುವಂತಾಗಿದೆ. ವಿದ್ಯಾರ್ಥಿಗಳು ದೂರದಲ್ಲಿರುವ ಸಾರ್ವಜನಿಕ ಮೈದಾನ ಆಶ್ರಯಿಸಬೇಕಾಗಿದ್ದು ರಸ್ತೆ ದಾಟಿ ಹೋಗಬೇಕಾಗಿದೆ.

ಗುಣಮಟ್ಟದ ಶಿಕ್ಷಣ ಊರಿನ ದಾನಿಗಳು, ಹಳೆವಿದ್ಯಾರ್ಥಿಗಳು ಶಾಲಾಭಿವೃದ್ಧಿ ಸಮಿತಿ ನಿರಂತರ ಸಹಕಾರ ಮಾಡುತ್ತಿದ್ದು ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಿದೆ. ಇವರ ಸಹಕಾರದಿಂದ 2017ರಲ್ಲಿ ಶಾಲೆ ಶತಮಾನೋತ್ಸವವನ್ನು ಆಚರಿಸಿತ್ತು. ಈ ಸಂದರ್ಭ ಶಾಲೆಯ ಸ್ವಲ್ಪ ಮಟ್ಟಿನ ದುರಸ್ತಿಯು ನಡೆದಿತ್ತು.

ಪೀಠೊಪಕರಣ ಕೊರತೆ
ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವುದರಿಂದ ಮಕ್ಕಳಿಗೆ ಕುಳಿತುಕೊಳ್ಳುವ ಬೆಂಚು, ಡೆಸ್ಕ್ ಗಳ ಕೊರತೆ ಕಾಡುತ್ತಿದೆ. ಕೆಲವೇ ಕೆಲವು ಪೀಠೊಪಕರಣ ಗಳಿರುವುದರಿಂದ ವಿದ್ಯಾರ್ಥಿಗಳು ನೆಲದ ಮೇಲೆಯೇ ಕುಳಿತುಕೊಳ್ಳ ಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಸಾಮಾಜಿಕ ಅಂತರ ಸಾಧ್ಯವೇ ಇಲ್ಲ. ತಕ್ಷಣ ಸುಮಾರು 50 ಬೆಂಚು,ಡೆಸ್ಕ್ ಗಳ ಅಗತ್ಯ ಇದ್ದು ಪೂರೈಕೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಬೇಕಿದೆ.

ಮೂಲ ಸೌಕರ್ಯ ಅಗತ್ಯ
ಶಾಲೆಯಲ್ಲಿ ತರಗತಿ ಕೊಠಡಿ, ಪೀಠೊ ಪಕರಣಗಳ ಕೊರತೆಯಿದ್ದು ಈ ಬಗ್ಗೆ ಇಲಾಖೆಯ ಗಮನಕ್ಕೆ ತರಲಾಗಿದೆ. ದಾನಿಗಳ ಸಹಕಾರದಿಂದ ಮೂಲ ಸೌಕರ್ಯ ಒದಗಿಸಲು ಪ್ರಯತ್ನಿಸುತ್ತಿದ್ದೇವೆ.
-ಜ್ಯೋತಿ ಎ., ಪ್ರಭಾರ ಮುಖ್ಯ ಶಿಕ್ಷಕಿ

– ಜಗದೀಶ್‌ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next