ಬೆಂಗಳೂರು: ದಿಲ್ಲಿ ಪ್ರವಾಸ ದಲ್ಲಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೋಮವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದು, ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ಪ್ರಕರಣ ಸಂಬಂಧ ಇನ್ನೊಂದು ನೋಟಿಸ್ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ನೀಡಲಾಗಿದ್ದ 2 ನೋಟಿಸ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಉತ್ತರ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕಾಗಿ ಇನ್ನೊಂದು ನೋಟಿಸ್ ನೀಡುವ ಸಾಧ್ಯತೆಗಳಿವೆಎಂದು ಹೇಳಲಾಗಿದೆ.
ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳ ವಾರದ ನಿಗದಿತ ಎಲ್ಲ ಕಾರ್ಯಕ್ರಮ ರದ್ದುಗೊಳಿಸಿದ್ದು, ಬೆಂಗಳೂರಿನಲ್ಲೇ ಇದ್ದು ರಾಜಭವನ ದಲ್ಲಿ ನಡೆಯುವ ಬೆಳವಣಿಗೆಯ ಬಗ್ಗೆ ದೃಷ್ಟಿಯಿಟ್ಟಿದ್ದಾರೆ. ಎನ್‌ಡಿಎ ಪಾದ ಯಾತ್ರೆ, ಕಾಂಗ್ರೆಸ್‌ನ ಜನಾಂದೋಲನ ಸಭೆಗಿಂತಲೂ ರಾಜ್ಯ ಪಾಲರ ಮುಂದಿನ ಹೆಜ್ಜೆಯೇ ಹೆಚ್ಚು ಮಹತ್ವ ಪಡೆದು ಕೊಂಡಿದೆ.
ಮೈಸೂರಿನಲ್ಲಿ ಕೆಡಿಪಿ ಸಭೆ?
ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಮಂಗಳವಾರ ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ತುಂಗಭದ್ರಾ ನದಿಗೆ ಬಾಗಿನ ಸಮರ್ಪಿಸುವ ಕಾರ್ಯಕ್ರಮ ಈ ಹಿಂದೆ ನಿಗದಿಯಾಗಿತ್ತು. ಆದರೆ ಅವರು ಬೆಂಗಳೂರಿನಲ್ಲೇ ಇರಲಿದ್ದು, ಕಡತ ಪರಿಶೀಲನೆ ನಡೆಸಿದ ಬಳಿಕ ಸಾಯಂಕಾಲ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಬುಧವಾರ ಅವರ ಮೈಸೂರು ಪ್ರವಾಸ ನಿಗದಿಯಾಗಿತ್ತು. ಆದರೆ ಒಂದು ದಿನ ಮುಂಚಿತವಾಗಿಯೇ ತೆರಳಲಿದ್ದಾರೆ. ಆ. 7ರಂದು ಪೂರ್ವನಿಗದಿತ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದಾರೆ. ಆ. 8ರಂದು ಅವರು ಮೈಸೂರು ಜಿಲ್ಲಾ ಕೆಡಿಪಿ ಸಭೆ ನಡೆಸುವ ಸಾಧ್ಯತೆ ಇದ್ದು, ಅದಿನ್ನೂ ದೃಢಪಟ್ಟಿಲ್ಲ. ಆ. 9ರಂದು ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ ಜನಾಂದೋಲನ ಸಭೆಯಲ್ಲಿ ಭಾಗಿಯಾಗುವರು ಎಂದು ತಿಳಿದು ಬಂದಿದೆ.