ವಾಡಿ: ಲೋಕಸಭೆ ಚುನಾವಣೆ ನಡೆದು 15 ದಿನಗಳ ನಂತರ ರಾಜ್ಯದ ಮೈತ್ರಿಕೂಟ ಸರಕಾರ ಉರುಳಿ ಹೋಗಲಿದೆ. ಕೇಂದ್ರ ಮತ್ತು ರಾಜ್ಯದಲ್ಲೂ ಬಿಜೆಪಿ ಸರಕಾರವೇ ಆಡಳಿತ ನಡೆಸಲಿದೆ ಎಂದು ಶಾಸಕ ಡಾ| ಉಮೇಶ ಜಾಧವ್ ಭವಿಷ್ಯ ನುಡಿದರು.
ರಾವೂರ ಗ್ರಾಮದಲ್ಲಿ ರವಿವಾರ ಏರ್ಪಡಿಸಲಾಗಿದ್ದ ಜಿಪಂ ವಲಯ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಕಲಬುರಗಿ ಲೋಕಸಭೆಯ ಅಧಿ ಕೃತ ಬಿಜೆಪಿ ಅಭ್ಯರ್ಥಿಯಾಗಿ ನನ್ನ ಹೆಸರು ಘೋಷಣೆಯಾಗಲಿದೆ. ಉಮೇಶ ಜಾಧವ್ ಎಂದು ತಿಳಿದು ನನಗೆ ಮತ ನೀಡಬೇಡಿ. ದೇಶದ ಸುಭದ್ರತೆ ಕಾಪಾಡುತ್ತಿರುವ ದಿಟ್ಟ ರಾಜಕಾರಣಿ ನರೇಂದ್ರ ಮೋದಿ ಅವರನ್ನು ಮನದಲ್ಲಿಟ್ಟುಕೊಂಡು ಮತ ಕೊಡಿ ಎಂದರು.
ಕ್ಷೇತ್ರದಾದ್ಯಂತ ನನಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಬಿಜೆಪಿಯ ಬಿರುಗಾಳಿ ಎಲ್ಲೆಡೆ ಬೀಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಕಾರ್ಯಗಳು ನನಗೆ ಶ್ರೀರಕ್ಷೆಯಾಗಲಿವೆ. ದೇಶ ಮತ್ತು ಮೋದಿ ಅವರಿಗಾಗಿ ನಾವು ಒಗ್ಗಟ್ಟಾಗಬೇಕು. ಬದಲಾವಣೆ ಗಾಳಿಯನ್ನು ನಾವು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕಿದೆ. ಒಂದೊಮ್ಮೆ ಬಿಜೆಪಿ ಸೋತರೆ, ಮತ್ತೆ 40 ವರ್ಷ ನಾವು ಕಾಂಗ್ರೆಸ್‌ನ ಜೀತದಾಳುಗಳಾಗಿ ಬದುಕಬೇಕಾಗುತ್ತದೆ. ಕಲಬುರಗಿ ಲೋಕಸಭೆ ಚುನಾವಣೆಯನ್ನು ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸುವ ಮೂಲಕ ಐತಿಹಾಸಿಕ ಫಲಿತಾಂಶ ನೀಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಆಡಳಿತ ಯಂತ್ರ ಕಾಂಗ್ರೆಸ್‌ಗೆ ಬಳಕೆಯಾಗದೆ ಪಾರದರ್ಶಕ ಚುನಾವಣೆ ನಡೆದರೆ ಎರಡು ಲಕ್ಷ ಮತಗಳ ಅಂತರದಿಂದ ನಾನು ಗೆಲ್ಲುವುದು ಖಚಿತ. ಮೇರಾ ಭೂತ್ ಸಬ್ ಸೇ ಮಜೂತ್ ಎನ್ನುವ ಘೋಷವಾಕ್ಯದಡಿ ಕಾರ್ಯಕರ್ತರು ಸ್ಫೂರ್ತಿಯಿಂದ ಚುನಾವಣೆ ಪ್ರಚಾರ ಕೈಗೊಳ್ಳಬೇಕು. ಕಾರ್ಯಕರ್ತರು ಯಾರಿಗೂ ಹೆದರಬಾರದು. 20 ಜನರುಳ್ಳ ಒಂದು ಟೀಂ ಕಲಬುರಗಿ ನಗರದಲ್ಲಿ ಇರಲಿದೆ. ಯಾವುದೇ ಗಲಾಟೆ ಸಂದರ್ಭದಲ್ಲಿ ಕರೆದರೂ ಆ ತಂಡ ತಕ್ಷಣ ನೀವಿದ್ದಲ್ಲಿಗೆ ಬಂದು ನೆರವಾಗಲಿದೆ ಎಂದು ಹೇಳಿದರು.
ಮಾಜಿ ಶಾಸಕರಾದ ವಾಲ್ಮೀಕಿ ನಾಯಕ, ವಿಶ್ವನಾಥ ಪಾಟೀಲ ಹೆಬ್ಟಾಳ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ ಮಾತನಾಡಿದರು. ಜಿಪಂ ಸದಸ್ಯ ಅಶೋಕ ಸಗರ ಅಧ್ಯಕ್ಷತೆ ವಹಿಸಿದ್ದರು. ಲೋಕ ಚುನಾವಣೆ ಚಿತ್ತಾಪುರ ಪ್ರಭಾರಿ ಶರಣಪ್ಪ ತಳವಾರ, ಅಶೋಕ ಹೂಗಾರ, ಬಿಜೆಪಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ, ಪ್ರಧಾನ ಕಾರ್ಯದರ್ಶಿ ಶರಣು ಜ್ಯೋತಿ, ಮುಖಂಡರಾದ ಶಿವಲಿಂಗಪ್ಪ ವಾಡೇದ, ಡಾ| ಗುಂಡಣ್ಣ ಬಾಳಿ, ಚೆನ್ನಣ್ಣ ಬಾಳಿ, ದೇವಿಂದ್ರ ತಳವಾರ, ಬಸವರಾಜ ಇಂಗಿನ್, ಅಣ್ಣಾರಾವ್ ಬಾಳಿ, ಅರವಿಂದ ಚವ್ಹಾಣ ಪರಶುರಾಮ ತುನ್ನೂರ, ಮಲ್ಲಿನಾಥ ದೊಡ್ಡಮನಿ, ಸಾಯಬಣ್ಣ ತಳವಾರ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು