ಕಾರವಾರ : ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಇಡೀ ಜಗತ್ತಲ್ಲೂ ಸಾಂಕ್ರಾಮಿಕ ಕಡಿಮೆ ಆಗಬೇಕಿದೆ ಎಂದು ನಾನೂ ಪ್ರಾರ್ಥಿಸುತ್ತೇನೆ. ಆದರೆ ತಪಾಸಣೆ ಕಡಿಮೆ ಮಾಡಿದರೆ ಪಾಸಿಟಿವಿಟಿ ದರ ಕಡಿಮೆಯಾಗದೇ ಇರುತ್ತದಾ? ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಪ್ರಶ್ನಿಸಿದ್ದಾರೆ.
ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಅಲೆಯಲ್ಲಿ ವಸತಿನಿಲಯಗಳನ್ನೆಲ್ಲ ಬಳಸಿಕೊಂಡಿದ್ದರು. ಆದರೆ ಈ ಬಾರಿ ಅದಾಗಿಲ್ಲ. ಮನೆಯಲ್ಲೇ ಹೋಮ್ ಐಸೋಲೇಶನ್ ಮಾಡಿರೋದ್ರಿಂದ ಪ್ರಕರಣಗಳು ಹೆಚ್ಚಾಗಿವೆ.ಇನ್ನು ರಾಜ್ಯ, ದೇಶದಲ್ಲಿ ವ್ಯಾಕ್ಸಿನೇಶನ್ ಕಡಿಮೆ ಆಗಿದೆ. ಸರ್ಕಾರಕ್ಕೆ ಅನುಭವದ ಕೊರತೆ ಇದೆ. ದೂರದೃಷ್ಟಿಕೋನ ಇಲ್ಲ. ಪರಿಣಾಮ, ದುಷ್ಪರಿಣಾಮದ ಚಿಂತನೆಯೇ ಇಲ್ಲ. ಸರ್ಕಾರ ಜೀವಂತವಿಲ್ಲ. ಸಂವಿಧಾನದಿಂದ ಮಾತ್ರ ಸರ್ಕಾರವಿದೆ ಅಷ್ಟೇ. ಆದರೆ ಜನರಿಂದ ದೂರವಾಗಿದೆ ಎಂದರು.
ನನಗೆ ಬೇಕಾದಾಗ ಜನರ ಕಾಲು ಕೈ ಹಿಡಿದಿದ್ದೇವೆ. ಈಗ ಜನ ಕಷ್ಟದಲ್ಲಿದ್ದಾಗ ನಾವು ಅವರ ಬಳಿ ಹೋಗಬೇಕಾಗುತ್ತದೆ, ಇದು ಮಾನವ ಧರ್ಮ. ನನ್ನ ಕರ್ತವ್ಯ. ಈ ಕೊರೋನಾ ಯುದ್ಧ ಗೆಲ್ಲಬೇಕು. ಇಲ್ಲಿ ಯಾವುದೇ ರಾಜಕೀಯ ಇಲ್ಲ. ಹೋಮ್ ಕ್ವಾರಂಟೈನ್, ಹಾಸ್ಪಿಟಲ್ ಪೇಶೆಂಟ್ ಗಳಿಗೆಲ್ಲರಿಗೂ ಔಷಧಿಗಳನ್ನು ನೀಡಬೇಕು ಎಂದರು.
ಸರ್ಕಾರಗಳಿಂದ ಏನಾಗುತ್ತಿದೆ? ಕೊರೋನಾ ವಾರಿಯರ್ಸ್ ಗಳು ಕೆಲಸ ಮಾಡುತ್ತಿದ್ದಾರೆ, ಆದರೆ ಅವರಿಗೆ ನೈತಿಕ ಬೆಂಬಲ, ಮೂಲಭೂತ ಸೌಕರ್ಯ ಕೊಡಬೇಕಿದೆ. ಅಧಿಕಾರಿಗಳು ಕ್ರಿಯಾಶೀಲವಾಗಲು ಆ ಥರದ ವಾತಾವರಣ ಕ್ರಿಯೆಟ್ ಮಾಡಬೇಕು. ಎರಡು, ಮೂರು ಸಾವಿರ ರೂಪಾಯಿ ಮುಖ್ಯಮಂತ್ರಿ ಪ್ಯಾಕೇಜ್ ಯಾರಿಗೆ? ಕಳೆದ ವರ್ಷದ್ದೆ ಇನ್ನೂ ತಲುಪಿಲ್ಲ. ಮೀನುಗಾರರು ಕಷ್ಟದಲ್ಲಿದ್ದಾರೆ, ಸರ್ಕಾರ ಅವರಿಗಾಗಿ ಏನು ಮಾಡಿದೆ? ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಜಿಲ್ಲಾ ವಕ್ತಾರರಾದ ಶಂಭು ಶೆಟ್ಟಿ, ದೀಪಕ್ ದೊಡ್ಡುರು, ಕಾಂಗ್ರೆಸ್ ಮುಖಂಡ ಪ್ರಶಾಂತ್ ದೇಶಪಾಂಡೆ, ಮಾಜಿ ಶಾಸಕ ಸತೀಶ್ ಸೈಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ ಮುಂತಾದವರಿದ್ದರು.