ಬೆಂಗಳೂರು: ಸರಕಾರಿ ನೌಕರರ ಕಾರ್ಯ ವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ ಹೆಚ್ಚುವರಿ ಎರಡು ದಿನ ರಜೆ ಸೌಲಭ್ಯಕ್ಕೆ ನೌಕರರು ಆಗ್ರಹಿಸಿದ್ದಾರೆ.
ಮತ್ತೂಂದೆಡೆ ತೆರಿಗೆ ಸಂಗ್ರಹದಲ್ಲಿ ಕುಸಿತ ಉಂಟಾಗಿ ಬಿಳಿಯಾನೆಗಳಾಗಿರುವ ಇಲಾಖೆಗಳ ನಿರ್ವಹಣೆಯಿಂದ ರಾಜ್ಯದ ಅರ್ಥ ವ್ಯವಸ್ಥೆಗೆ ಪೆಟ್ಟು ಬಿದ್ದಿದೆ.
ಸರಕಾರಿ ಇಲಾಖೆಗಳ ಕಾರ್ಯವೈಖರಿ ಹಾಗೂ ನಿಧಾನಗತಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶವಿದೆ. ಹೀಗಿದ್ದರೂ ಕೇಂದ್ರ ಸರಕಾರದ ಅಧೀನದಲ್ಲಿರುವ ಸಂಸ್ಥೆಗಳ ಮಾದರಿಯಲ್ಲೇ ರಾಜ್ಯ ಸರಕಾರಿ ನೌಕರರಿಗೂ ಪ್ರತಿ ಶನಿವಾರ ರಜೆ ಸೌಲಭ್ಯ ನೀಡುವಂತೆ ರಾಜ್ಯ ಸರಕಾರಿ ನೌಕರರ ಸಂಘವು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿದೆ.
ಎರಡು ಹೆಚ್ಚುವರಿ ರಜೆಗೆ ಪ್ರತಿಯಾಗಿ ದಿನನಿತ್ಯ ಬೆಳಗ್ಗೆ ಮತ್ತು ಸಂಜೆ 30 ನಿಮಿಷ ಹೆಚ್ಚುವರಿ ಕೆಲಸ ಮಾಡುತ್ತೇವೆ ಎಂಬುದು ನೌಕರರ ವಾದ.
ಲಾಭದಾಯಕ ಹುದ್ದೆಗಳಿಗೆ ಭಾರೀ ಲಾಬಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಎಲ್ಲ ಇಲಾಖೆಗಳಲ್ಲೂ ಲಾಭದಾಯಕ ಹುದ್ದೆ ಗಳಿಗೆ ಲಾಬಿ ಜೋರಾಗಿದೆ. ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಯ ಅಧಿಕಾರಿಗಳು ಭಡ್ತಿ, ವರ್ಗಾವಣೆ ಗಿಟ್ಟಿಸಿಕೊಳ್ಳಲು ತಮ್ಮ ಆಪ್ತ ನಾಯಕರ ಮೂಲಕ ಪ್ರಯತ್ನಿಸುತ್ತಿದ್ದಾರೆ. ಆಯುಕ್ತ, ಜಿಲ್ಲಾ ಧಿಕಾರಿಯಾಗಿರುವ ಕೆಲವು ಐಎಎಸ್ ಅಧಿಕಾರಿಗಳು ಪ್ರಭಾರ ಹುದ್ದೆ ಮೇಲೆ ಕಣ್ಣಿಟ್ಟರೆ, ಪೊಲೀಸ್, ಅಬಕಾರಿ, ಆರೋಗ್ಯ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ವರ್ಗಾವಣೆಗಾಗಿ ತೆರೆಮರೆಯಲ್ಲಿ ಇನ್ನಿಲ್ಲದ ಪ್ರಯತ್ನದಲ್ಲಿದ್ದಾರೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಲೋಕಾಯುಕ್ತ, ಐಟಿ, ಇ.ಡಿ.ಯಂತಹ ತನಿಖಾ ಸಂಸ್ಥೆಗಳಿಗೆ ಸಿಕ್ಕಿಬಿದ್ದ ಹಲವು ಅಧಿಕಾರಿಗಳು ಮತ್ತೆ ಲಾಭದಾಯಕ ಹುದ್ದೆಯಲ್ಲಿ ಕಾರ್ಯಾಭಾರ ಮಾಡಲು ಹೊರಟಿದ್ದಾರೆ.
Related Articles
5,12 ಲಕ್ಷ ಸರಕಾರಿ ನೌಕರರು
ರಾಜ್ಯದಲ್ಲಿ 82 ಇಲಾಖೆಗಳಲ್ಲಿ ಒಟ್ಟು 5.15 ಲಕ್ಷ ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಇವರ ವಾರ್ಷಿಕ ವೇತನಕ್ಕೆ ಸರಕಾರವು ಅಂದಾಜು 37.91 ಸಾವಿರ ಕೋಟಿ ರೂ. ವ್ಯಯಿಸುತ್ತಿದೆ. ಈ ಪೈಕಿ 14 ಇಲಾಖೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಿಬಂದಿ ನಿಯೋಜಿಸಿರುವುದರಿಂದ ಬೊಕ್ಕಸಕ್ಕೆ ವಾರ್ಷಿಕವಾಗಿ ಬರೊಬ್ಬರಿ 2 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ಕರ್ನಾಟಕದ ಜನಸಂಖ್ಯೆಯ ಶೇ.0.85ರಷ್ಟು ಸರಕಾರಿ ನೌಕರರು ಕೆಲಸ ಮಾಡುತ್ತಿದ್ದು, 2.60 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಉಳಿದಿವೆ.
ಪ್ರತಿ ಶನಿವಾರ ಸರಕಾರಿ ನೌಕರರಿಗೆ ರಜೆ ಕೊಟ್ಟು ಉಳಿದ ದಿನಗಳಲ್ಲಿ ಹೆಚ್ಚುವರಿಯಾಗಿ ಕೆಲಸ ಮಾಡಿಸುವ ಬಗ್ಗೆ ನಾವು ಸಲ್ಲಿಸುವ ಪ್ರಸ್ತಾವನೆಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಹೊಂದಿದ್ದೇವೆ. ಸರಕಾರಿ ನೌಕರರು ಸಮಯಕ್ಕೆ ಸರಿಯಾಗಿ ಸೂಕ್ತ ಕೆಲಸ ಮಾಡುತ್ತಿದ್ದಾರೆ.
| ಸಿ.ಎಸ್.ಷಡಕ್ಷರಿ, ಅಧ್ಯಕ್ಷ, ರಾಜ್ಯ ಸರಕಾರಿ ನೌಕರರ ಸಂಘ.