ವಿಜಯಪುರ: ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಗರ್ಭಿಣಿಯರ ಶಸ್ತ್ರ ಚಿಕಿತ್ಸಾ ಲೋಪ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಲೇ ಪರಿಸ್ಥಿತಿ ಗಂಭೀರತೆ ಅರಿತ ಜಿಲ್ಲಾಡಳಿತ, ಪ್ರಕರಣದ ಅವಲೋಕನಕ್ಕಾಗಿ ಪ್ರವೇಶ ಮಾಡಿದೆ.
ರವಿವಾರ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿರುವ ಜಿಲ್ಲಾಧಿಕಾರಿ ಡಾ| ವಿ.ಬಿ.ದಾನಮ್ಮವರ, ಹೆರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಸಮಸ್ಯೆ ಎದುರಿಸುತ್ತಿರುವ ಬಾಣಂತಿಯರ ಅಹವಾಲು ಆಲಿಸಿದರು.
ರೋಗಿಗಳ ಅಹವಾಲು ಆಲಿಸಿದ ಅವರು, ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಘಟನೆ ಕುರಿತು ಸಮಗ್ರ ಮಾಹಿತಿ ಪಡೆದಿದ್ದೇನೆ. ನಿಮ್ಮ ಆರೋಗ್ಯದಲ್ಲಿ ಕೊಂಚ ಸಮಸ್ಯೆ ಕಂಡುಬಂದಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ನಿಮಗೆ ನೀಡುತ್ತಿರುವ ಚಿಕಿತ್ಸೆಯನ್ನು ಅತ್ಯಂತ ಹೆಚ್ಚು ಪರಿಣಾಮಕಾರಿ ಹಾಗೂ ಗುಣಮಟ್ಟದಿಂದ ಸೇವೆ ನೀಡಲು ಸೂಚಿಸಲಾಗಿದೆ. ಹೀಗಾಗಿ ಬಾಣಂತಿ ತಾಯಂದಿರುವ ಆತಂಕ ಪಡುವ ಅಗತ್ಯವಿಲ್ಲ. ನೀವೆಲ್ಲ ಆತ್ಮವಿಶ್ವಾಸದಿಂದ ಇರಿ ಎಂದು ಸ್ಫೂರ್ತಿಯ ಮಾತನಾಡಿದರು.
ಬಳಿಕ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ| ಲಕ್ಕಣ್ಣವರು, ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ಕೊಠಡಿಯಲ್ಲಿ ಸೋಂಕು ಕಾಣಿಸಿಕೊಂಡಿರುವ ಕಾರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರ ಹೊಲಿಗೆಯಲ್ಲಿ ಸಮಸ್ಯೆ ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ದಾನಮ್ಮನವರ ಅವರಿಗೆ ವಿವರಿಸಿದರು.
Related Articles
ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ರೋಗಿಗಳ ವಾರ್ಡ್‌ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದಾನಮ್ಮನವರ, ಸರ್ಕಾರಿ ಆಸ್ಪತ್ರೆ ಸ್ವತ್ಛತೆ, ಸೋಂಕು ನಿರೋಧಕ ಕ್ರಮಗಳನ್ನು ಪರಿಣಾಮಕಾರಿಯಾಗಿ ಮಾಡಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಬಡತನದ ಹಿನ್ನೆಲೆಯ ಜನರೇ ಬರುವ ಕಾರಣ ಆರೋಗ್ಯ ಸೇವೆ ನೀಡುವಲ್ಲಿ ಸರ್ಕಾರಿ ಆಸ್ಪತ್ರೆಗಳು ಬದ್ಧತೆ ತೋರಬೇಕು ಎಂದು ಸೂಚಿಸಿದರು.