Advertisement

ಬೆಳ್ಮಣ್‌: ಪ್ರ.ದ. ಕಾಲೇಜು ಇನ್ನೂ ಮರೀಚಿಕೆ

11:55 PM Feb 23, 2020 | Sriram |

ಬೆಳ್ಮಣ್‌: ಪದವಿ ಶಿಕ್ಷಣಕ್ಕಾಗಿ ನಗರ ಪ್ರದೇಶಗಳನ್ನು ಆಶ್ರಯಿಸುತ್ತಿರುವ ಬೆಳ್ಮಣ್‌ ಭಾಗದ ವಿದ್ಯಾರ್ಥಿಗಳ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಇನ್ನೂ ಮರೀಚಿಕೆಯಾಗಿದೆ.

Advertisement

ಬೆಳ್ಮಣ್‌, ಬೋಳ, ಮುಂಡ್ಕೂರು, ಕಾಂತಾವರ, ನಂದಳಿಕೆ, ಕಲ್ಯಾ, ಇನ್ನಾ ಗ್ರಾಮ ಪಂಚಾಯತ್‌ ಸಹಿತ ಅಕ್ಕಪಕ್ಕದ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಪಿಯುಸಿ ಮುಗಿಸಿ ಪದವಿ ಪಡೆಯಲು ಶಿರ್ವ, ನಿಟ್ಟೆ, ಐಕಳದ ಪ್ರಥಮ ದರ್ಜೆ ಕಾಲೇಜುಗಳನ್ನು ಅಥವಾ ಮಂಗಳೂರು- ಉಡುಪಿ ಆಶ್ರಯಿಸಬೇಕಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಡೊನೇಶನ್‌ನೊಂದಿಗೆ ನಿತ್ಯವೂ ಬಸ್‌ ಅಥವಾ ಇತರ ವಾಹನಗಳಲ್ಲಿ ಕಾಲೇಜಿಗೆ ಹೋಗಬೇಕಾಗಿದೆ. ಇದು ಕಷ್ಟಕರವಾಗಿದ್ದು ಹಲವು ಗ್ರಾಮ ಗಳಿಗೆ ಕೇಂದ್ರಸ್ಥಾನದಂತಿರುವ ಬೆಳ್ಮಣ್‌ನಲ್ಲೇ ಕಾಲೇಜು ಸ್ಥಾಪಿಸಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕೆಂಬ ಬೇಡಿಕೆ ಇದೆ.

ಪ.ಪೂ. ಕಾಲೇಜಿನೊಂದಿಗೆ ಸೇರ್ಪಡೆ
ಈಗಾಗಲೇ ಉತ್ತಮ ಫಲಿತಾಂಶ ಪಡೆಯುತ್ತಿರುವ ಬೆಳ್ಮಣ್‌ ಸರಕಾರಿ ಪ.ಪೂ.ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಠ್ಯ ಆಯ್ಕೆ ಇದೆ. ಉಪನ್ಯಾಸಕರೂ ಉತ್ತಮವಾಗಿದ್ದು ಶೈಕ್ಷಣಿಕ ಸಾಧನೆ ಮಾಡುತ್ತಿದೆ. ಇದೇ ಕಾಲೇಜಿನಲ್ಲಿ ಕಲೆ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಪದವಿ ತರಗತಿಗಳನ್ನು ಶುರು ಮಾಡಬಹುದು ಎಂಬ ಸಲಹೆ ಇದೆ. ಆದರೆ ಪದವಿಪೂರ್ವ ಕಾಲೇಜಿನಲ್ಲಿ ಕಟ್ಟಡ, ಆಟದ ಮೈದಾನ ಕುಡಿಯುವ ನೀರಿನ ಕೊರತೆ ಇದೆ. ವಾಣಿಜ್ಯ ವಿಭಾಗದಲ್ಲಿ ಉಪನ್ಯಾಸಕರು, ಕಂಪ್ಯೂಟರ್‌ ಲ್ಯಾಬ್‌ ಸಿಬಂದಿ, ಪ್ರಾಂಶುಪಾಲರ ಹುದ್ದೆ ಖಾಲಿ ಇವೆ. ಇವುಗಳಿಗೆ ವ್ಯವಸ್ಥೆ ಒದಗಿಸಿ ಪದವಿ ಕಾಲೇಜು ಶುರು ಮಾಡಬೇಕೆನ್ನುವುದು ಬೇಡಿಕೆಯಾಗಿದೆ.

ವರ್ಷಂಪ್ರತಿ 200 ವಿದ್ಯಾರ್ಥಿಗಳು
ಪ್ರತಿ ವರ್ಷ ಮುಂಡ್ಕೂರು ವಿದ್ಯಾವರ್ಧಕ ಪ.ಪೂ. ಕಾಲೇಜು ಹಾಗೂ ಬೆಳ್ಮಣ್‌ ಪ.ಪೂ. ಕಾಲೇಜಿನಿಂದ ತಲಾ 100 ವಿದ್ಯಾರ್ಥಿಗಳು ಹೊರಬರುತ್ತಿದ್ದಾರೆ. ಪದವಿ ಕಾಲೇಜು ಆರಂಭಿಸಲು ಇಷ್ಟು ವಿದ್ಯಾರ್ಥಿಗಳು ಸಾಕು. ಉಳಿದಂತೆ ದೂರದ ಊರಿಗೆ ತೆರಳುವ ವಿದ್ಯಾರ್ಥಿಗಳೂ ಕ್ರಮೇಣ ಹೊಸ ಪದವಿ ಕಾಲೇಜಿಗೆ ಸೇರಿದರೆ ಕಾಲೇಜು ಸುಗಮವಾಗಿ ನಡೆಯಬಹುದು ಎಂಬ ಲೆಕ್ಕಾಚಾರ ಇಲ್ಲಿನವರದ್ದಾಗಿದೆ.

ಬೆಳ್ಮಣ್‌, ಬೋಳ, ಮುಂಡ್ಕೂರು, ಕಾಂತಾವರ, ನಂದಳಿಕೆ, ಕಲ್ಯಾ, ಇನ್ನಾ ಗ್ರಾ.ಪಂ. ಸಹಿತ ಅಕ್ಕಪಕ್ಕದ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯಲು ಶಿರ್ವ, ನಿಟ್ಟೆ, ಐಕಳದ ಪ್ರಥಮ ದರ್ಜೆ ಕಾಲೇಜುಗಳನ್ನು ಅಥವಾ ಮಂಗಳೂರು- ಉಡುಪಿ ಆಶ್ರಯಿಸಬೇಕಾಗಿದೆ. ಹಲವು ಗ್ರಾಮಗಳಿಗೆ ಕೇಂದ್ರಸ್ಥಾನದಂತಿರುವ ಬೆಳ್ಮಣ್‌ನಲ್ಲೇ ಕಾಲೇಜು ಸ್ಥಾಪಿಸಿದರೆ ಶಿಕ್ಷಣಾಂಕಾಕ್ಷಿಗಳಿಗೆ ಅನುಕೂಲ.

Advertisement

ಸೌಕರ್ಯಗಳೂ ಬೇಕು
ಈಗಾಗಲೇ ಬೆಳ್ಮಣ್‌ ಸರಕಾರಿ ಪ.ಪೂ.ಕಾಲೇಜಿನಲ್ಲಿ ಹೆಚ್ಚಿನ ಮೂಲಸೌಕರ್ಯಗಳ ಕೊರತೆ ಇರುವಾಗ ಪ್ರಥಮದರ್ಜೆ ಕಾಲೇಜಿಗೆ ಈ ಭಾಗದಲ್ಲಿ ಬೇರೆಯೇ ಜಾಗದ ಆಯ್ಕೆಯ ಅಗತ್ಯ ಇದೆ. ಸರಕಾರ ಹಾಗೂ ಇಲಾಖೆ ಪ.ಪೂ.ಕಾಲೇಜಿನ ಬೇಡಿಕೆಗಳನ್ನು ಪೂರೈಸಿ ಮುಂದೆ ಪ್ರಥಮ ದರ್ಜೆ ಕಾಲೇಜಿನ ಬೇಡಿಕೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಬೇಕಾಗಿದೆ.

ದಾನಿಗಳ ಕೊರತೆ
ಈಗಾಗಲೇ ಬೆಳ್ಮಣ್‌ನ ಸರಕಾರಿ ಪ.ಪೂ.ಕಾಲೇಜಿಗೆ ಎಸ್‌ಡಿಎಂಸಿ ನೆರವು ಬಿಟ್ಟರೆ ದಾನಿಗಳ ನೆರವು ದೊರಕುತ್ತಿಲ್ಲ. ಆದ್ದರಿಂದ ಇಲಾಖೆಯೇ ಇಲ್ಲಿ ಪ್ರಥಮ ದರ್ಜೆ ಕಾಲೇಜು ಆರಂಭಕ್ಕೆ ಹೊಣೆ ಹೊತ್ತುಕೊಳ್ಳಬೇಕಾಗುತ್ತದೆ. ಇದು ಡೊನೇಶನ್‌ ಹಾವಳಿಯಿಂದ ತತ್ತರಿಸಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ. ಇದಕ್ಕಾಗಿ ಜಿಲ್ಲಾ ಪಂಚಾಯತ್‌ ಪೂರಕ ಯತ್ನ ಮಾಡಬೇಕಾಗಿದೆ.

ಪ್ರಯತ್ನ ಮಾಡುತ್ತೇವೆ
ನನ್ನ ಕ್ಷೇತ್ರದಲ್ಲಿ ನಡೆಯವ ಶೈಕ್ಷಣಿಕ ಪ್ರಗತಿಗೆ ಬೆಳ್ಮಣ್‌ ಸರಕಾರಿ ಪದವಿಪೂರ್ವ ಕಾಲೇಜು ವೇದಿಕೆಯಾಗಬಲ್ಲದು. ಇಲಾಖೆ ಹಾಗೂ ನಾವು ಜತೆ ಜತೆಯಾಗಿಯೇ ಈ ಬಗ್ಗೆ ಪ್ರಯತ್ನಿಸುತ್ತೇವೆ.
-ವಿ.ಸುನಿಲ್‌ ಕುಮಾರ್‌,
ಕಾರ್ಕಳ ಶಾಸಕರು

ಹೆತ್ತವರು ಗಮನಕ್ಕೆ ತರಲಿ
ಬೆಳ್ಮಣ್‌ನಲ್ಲಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಿದರೆ ಒಳ್ಳೆಯದು. ಆದರೆ ಅದನ್ನು ನಾವು ಒತ್ತಾಯ ಮಾಡಲಾಗುವುದಿಲ್ಲ, ವಿದ್ಯಾರ್ಥಿಗಳ ಹೆತ್ತವರೇ ಸರಕಾರ ಮತ್ತು ಇಲಾಖೆಯ ಗಮನಕ್ಕೆ ತರಬೇಕು.
-ಕಿಶೋರಿ, ಪ್ರಭಾರ ಪ್ರಾಂಶುಪಾಲೆ,
ಸರಕಾರಿ ಪ.ಪೂ. ಕಾಲೇಜು, ಬೆಳ್ಮಣ್‌

ಅಗತ್ಯ ಬೇಕು
ಬೆಳ್ಮಣ್‌ಗೆ ಸರಕಾರಿ ಪ್ರಥಮದರ್ಜೆ ಕಾಲೇಜು ಅಗತ್ಯವಾಗಿ ಬೇಕು. ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಬಹಳಷ್ಟು ಹಣ ವ್ಯಯಿಸಿ ದೂರದೂರಿಗೆ ಪ್ರಯಾಣಿಸಿ ಪದವಿ ಪಡೆಯಬೇಕಾಗಿದೆ. ಆದ್ದರಿಂದ ಇದು ಆಗತ್ಯ.
-ಕೇಶವ್‌ ಕಾಮತ್‌,
ಸ್ಥಳೀಯರು

ಶಾಸಕರ ಮೂಲಕ ಪ್ರಯತ್ನ
ಈ ಬಗ್ಗೆ ಕಾರ್ಕಳ ಶಾಸಕರ ಮೂಲಕ ಪ್ರಯತ್ನಿಸಲಾಗುತ್ತಿದೆ. ಶಾಸಕರು ಭರವಸೆ ನೀಡಿದ್ದಾರೆ. ಈ ಭಾಗದಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜು ಅಗತ್ಯವಾಗಿ ಬೇಕು.
-ರೇಷ್ಮಾ ಉದಯ ಶೆಟ್ಟಿ,
ಜಿ.ಪಂ. ಸದಸ್ಯೆ

ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next